ಆವರಗೆರೆಯಲ್ಲಿ ಮಡಿವಾಳ ಸಮಾಜದ ರುದ್ರಭೂಮಿಯನ್ನು ಅತಿಕ್ರಮಿಸಿ, ಟ್ರ್ಯಾಕ್ಟರ್‌ಗಳಿಂದ ಸಮಾಧಿ ಧ್ವಂಸಗೊಳಿಸಿ, ಸಾಕ್ಷ್ಯ ನಾಶಪಡಿಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮಡಿವಾಳ ಮಾಚಿದೇವ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.

- ಆರ್‌ಎಂಸಿ ಯಾರ್ಡ್ ಠಾಣೆಗೆ ದೂರು ನೀಡಿದ್ದರೂ ಸ್ಪಂದಿಸದ ಪೊಲೀಸರು: ಆವರಗೆರೆ ಎಚ್.ಜಿ.ಉಮೇಶ ಆರೋಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಆವರಗೆರೆಯಲ್ಲಿ ಮಡಿವಾಳ ಸಮಾಜದ ರುದ್ರಭೂಮಿಯನ್ನು ಅತಿಕ್ರಮಿಸಿ, ಟ್ರ್ಯಾಕ್ಟರ್‌ಗಳಿಂದ ಸಮಾಧಿ ಧ್ವಂಸಗೊಳಿಸಿ, ಸಾಕ್ಷ್ಯ ನಾಶಪಡಿಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮಡಿವಾಳ ಮಾಚಿದೇವ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಧಿಗಳನ್ನು ಧ್ವಂಸಗೊಳಿಸಿದ ಬಗ್ಗೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ತನಿಖೆ ನಡೆಸದೇ, ಪೊಲೀಸರು ಅಸಡ್ಡೆ ತೋರುತ್ತಿದ್ದರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಪಿಸಿಆರ್ ದಾವೆ ದಾಖಲಿಸಲಾಗುವುದು‌. ಒಂದುವೇಳೆ ನಮ್ಮ ಜನಾಂಗದ ಯಾರಿಗೇ ಏನೇ ಅನಾಹುತಗಳಾದರೂ ಅದಕ್ಕೆ ಸ್ಮಶಾನ ಅತಿಕ್ರಮಣ ಮಾಡಿರುವ ವ್ಯಕ್ತಿಗಳು, ಪೊಲೀಸ್ ಇಲಾಖೆಯೇ ನೇರ ಹೊಣೆ ಎಂದು ಎಚ್ಚರಿಸಿದರು.

ಗ್ರಾಮದ ರಿ.ಸ.ನಂ.85/1 ಎ 2ರಲ್ಲಿ ಹಳೇ ಮಸೀದಿ ಬಳಿ ಸುಮಾರು 18 ಗುಂಟೆ ಜಾಗವನ್ನು ಮಡಿವಾಳರು 75 ವರ್ಷದಿಂದ ಸಾಂಪ್ರದಾಯಿಕವಾಗಿ ಸ್ಮಶಾನ ಭೂಮಿಯಾಗಿ ಬಳಸುತ್ತಿದ್ದಾರೆ. ಈವರೆಗೆ 60ಕ್ಕೂ ಹೆಚ್ಚು ಮೃತದೇಹಗಳ ಅಂತ್ಯ ಸಂಸ್ಕಾರ ಇದೇ ರುದ್ರಭೂಮಿಯಲ್ಲಿ ನೆರವೇರಿಸಲಾಗಿದೆ. ಸ್ಮಶಾನ ಜಾಗ ತಮಗೆ ಸೇರಿದ್ದೆಂದು ದಾಕ್ಷಾಯಣಮ್ಮ ಮತ್ತು ಇತರರು ಮಡಿವಾಳ ಜನಾಂಗದ ಕರಿಯಪ್ಪ ಹಾಗೂ ಇತರರ ವಿರುದ್ಧ ದಾವಣಗೆರೆ 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶಾಶ್ವತ ನಿರ್ಬಂಧಕಾಜ್ಞೆ ಕೋರಿ ಓ.ಎಸ್.ಸಂಖ್ಯೆ-191/23ರಡಿ ಸಿವಿಲ್ ದಾವೆ ಹೂಡಿದ್ದಾರೆ. ಸದ್ಯ ಪ್ರಕರಣವು ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಉಭಯ ಪಾರ್ಟಿಗಳು ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಆದೇಶಿಸಿದೆ ಎಂದು ಆವರೆಗೆರೆ ಎಚ್.ಜಿ.ಉಮೇಶ ವಿವರಿಸಿದರು.

ವಕೀಲ ಅಜಯಕುಮಾರ ಮಾತನಾಡಿ, ಕೋರ್ಟ್‌ನಲ್ಲಿ ದಾವೆ ಪೆಂಡಿಂಗ್ ಇರುವುದು ಗೊತ್ತಿದ್ದರೂ ಜೂ.24ರ ಸಂಜೆ 6.30ರ ವೇಳೆಗೆ ಎಂ.ಡಿ. ಹನುಮಂತಪ್ಪನವರ ಮಕ್ಕಳಾದ ನಂದನಕುಮಾರ್, ಚೇತನ್ ಮತ್ತು ಹನುಮಂತಪ್ಪನ ಅಣ್ಣನ ಮಗ ನವೀನಕುಮಾರ, ದಾಕ್ಷಾಯಣಮ್ಮ ಮತ್ತಿತರರು ಸ್ಮಶಾನದ ಜಾಗಕ್ಕೆ ಅತಿಕ್ರಮ ಪ್ರವೇಶಿಸಿ, ಕೆಎ 17, ಟಿಸಿ 6017 ನೋಂದಣಿಯ ಟ್ರ್ಯಾಕ್ಟರ್, ಕಲ್ಪಿವೇಟರ್ ಬಳಸಿ, ಸ್ಮಶಾನದಲ್ಲಿದ್ದ ಸಮಾಧಿ ಹಾಗೂ ಗುರುತಿಗೆ ಹಾಕಿದ್ದ ಕಲ್ಲುಗಳನ್ನು ಕಿತ್ತು ಹಾಕಿಸಿದ್ದಾರೆ. ಅಲ್ಲಿದ್ದ ಕಳೆಬರಹ, ಅಸ್ಥಿಗಳನ್ನು ಅಗೆದು, ತೆಗೆದು ಬೇರೆಡೆ ಸಾಗಿಸಿ, ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ್ದಾರೆ. ಇಡೀ ಘಟನೆ, ಕೃತ್ಯವನ್ನು ಸ್ಥಳೀಯರಾದ ಕೆ.ರಂಗನಾಥ, ಮಂಜುನಾಥ ಇತರರು ಪ್ರತ್ಯಕ್ಷ ಕಂಡಿದ್ದಾರೆ ಎಂದರು. ಈ ಘಟನೆ ಬಗ್ಗೆ ಆವರಗೆರೆ ಬಸವ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಕರಿಯಪ್ಪ ಆರ್‌ಎಂಸಿ ಯಾರ್ಡ್‌ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಆದರೆ, ಪೊಲೀಸ್ ಅಧಿಕಾರಿಗಳು ತನಿಖೆ ನಡೆಸದೇ, ಕಾಲಹರಣ ಮಾಡುತ್ತಿದ್ದಾರೆ. ಕೋರ್ಟ್ ಆದೇಶ ಉಲ್ಲಂಘಿಸಿ, ಸಮಾಧಿಗಳನ್ನು ಬಗೆದು, ಅಪಚಾರ ಎಸಗಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಿಮಿನಲ್ ಕೇಸ್ ದಾಖಲಿಸಿದ್ದೇವೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಅಣ್ಣಪ್ಪ ಅಣಬೇರು, ಕರಿಯಪ್ಪ, ಮಂಜುನಾಥ, ಗಂಗಪ್ಪ, ಮಂಜುನಾಥ, ಶಾರದಮ್ಮ ಕರಿಯಪ್ಪ, ಸಾವಿತ್ರಮ್ಮ ಸಿದ್ದಪ್ಪ, ಸಾವಿತ್ರಮ್ಮ ಹನುಮಂತಪ್ಪ, ಹನುಮಂತಪ್ಪ ಅಸಗೋಡು, ಅಜೇಯ ಅಸಗೋಡು ಇತರರು ಇದ್ದರು.

- - -

(ಕೋಟ್‌) ಏಳೂವರೆ ದಶಕಗಳಿಂದಲೂ ದಾವಣಗೆರೆ ನಗರದ ಹೊರವಲಯದ ಆವರಗೆರೆ ಗ್ರಾಮದಲ್ಲಿ ಮಡಿವಾಳ ಸಮುದಾಯಕ್ಕೆ ಮೀಸಲಾದ ರುದ್ರಭೂಮಿ ಜಾಗವನ್ನು ಯಾವುದೇ ಪಟ್ಟಭದ್ರ ಹಿತಾಸಕ್ತಿಗಳ ಪಾಲಾಗದಂತೆ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ರಕ್ಷಿಸಬೇಕು. ಸಮಾಧಿ ಬಗೆದು ಅಪರಾಧ ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಕಠಿಣ ಕಾನೂನು ಕ್ರಮ ಜರುಗಿಸಬೇಕು.

- ಅಜಯಕುಮಾರ, ವಕೀಲ.

- - -

-14ಕೆಡಿವಿಜಿ1, 2:

ದಾವಣಗೆರೆಯಲ್ಲಿ ಮಂಗಳವಾರ ಮಡಿವಾಳ ಮಾಚಿದೇವ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ, ವಕೀಲ ಅಜಯಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.