ಫೆಕ್ಸ್‌, ಬ್ಯಾನರ್‌ಗಳನ್ನು ಎಲ್ಲಂದರಲ್ಲಿ ಅಳವಡಿಸಿ ಜನಪ್ರತಿನಿಧಿಗಳೇ ನಗರದ ಸೌಂದರ್ಯಕ್ಕೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಬಿಬಿಎಂಪಿಗೆ ಮನವಿ ಸಲ್ಲಿಸಿದ್ಧಾರೆ.

 ಬೆಂಗಳೂರು : ನಗರದ ಶಾಸಕರು ಆವ್ಯಾಹತವಾಗಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸುವ ಮೂಲಕ ಮೂಲಕ ಬೆಂಗಳೂರಿನ ಸೌಂದರ್ಯವನ್ನು ಹಾಳುಗಡೆವುತ್ತಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಆಗ್ರಹಿಸಿದೆ.

ಶುಕ್ರವಾರ ಎಎಪಿ ಮುಖಂಡರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪಕ್ಷದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ, ನೂತನ ಜಾಹೀರಾತು ನೀತಿಗನುಗುಣವಾಗಿ ಈವರೆಗೂ ಉಲ್ಲಂಘಿಸಿದ ವ್ಯಕ್ತಿಗಳ ವಿರುದ್ಧ ನೂರಾರು ಕೋಟಿ ರು. ದಂಡವನ್ನು ವಸೂಲಿ ಮಾಡಬಹುದಾಗಿತ್ತು. ಬೆಂಗಳೂರಿನ ಸೌಂದರ್ಯವನ್ನು ಸಹ ಕಾಪಾಡಬಹುದಾಗಿತ್ತು. ಆದರೆ ಈ ರೀತಿಯ ಯಾವುದೇ ಕಠಿಣ ಕ್ರಮಗಳನ್ನು ಬಿಬಿಎಂಪಿ ಇಂಜಿನಿಯರ್‌ಗಳು ಕೈಗೊಂಡಿಲ್ಲ. ಇದರಿಂದಾಗಿ ಮಹಾನಗರ ಪಾಲಿಕೆಗೆ ನೂರಾರು ಕೋಟಿ ರು. ನಷ್ಟವನ್ನುಂಟು ಮಾಡಿದ್ದಾರೆ ಎಂದು ತಿಳಿಸಿದರು.

ನೂತನ ಪರಿಷ್ಕೃತ ಮಾರ್ಗಸೂಚಿಯನ್ನು ರಚಿಸಿ ಅನಧಿಕೃತ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ಜನ್ಮ ದಿನದ ನೆಪದಲ್ಲಿ ಬೆಂಗಳೂರಿನಲ್ಲಿ ಹಾಕಿರುವ ಫ್ಲೆಕ್ಸ್ ಬ್ಯಾನರ್‌ಗಳಿಗೆ ಯಾವುದೇ ಕಠಿಣ ಕಾನೂನು ಕ್ರಮ ತೆಗೆದುಕೊಂಡಿಲ್ಲ. ಬೆಂಗಳೂರು ಸೌಂದರ್ಯಕ್ಕೆ ಪದೇಪದೇ ಧಕ್ಕೆ ತರುತ್ತಿರುವ ನಗರದ ಶಾಸಕರ ವಿರುದ್ಧ ಕ್ರಮ ಜರುಗಿಸಬೇಕು. ಈ ಮೂಲಕ ಶಾಸಕರಿಗೆ ಮತ್ತು ಅವರ ಹಿಂಬಾಲಕರಿಗೆ ಕಾನೂನಿನ ಅರಿವು ಸ್ವಲ್ಪಮಟ್ಟಿಗಾದರೂ ಆಗುತ್ತದೆ ಎಂದರು.

ಮುಖಂಡರಾದ ಅನಿಲ್ ನಾಚಪ್ಪ, ಶಶಿಧರ್ ಆರಾಧ್ಯ, ಮಣಿಕಂಠ ಶಿವಕುಮಾರ್ ,ಮೋಹನ್ ರಾಜು, ಅಣ್ಣ ನಾಯಕ್ ಉಪಸ್ಥಿತರಿದ್ದರು.