ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ರಸ್ತೆಗಳಿಗೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಗುರುತಿಸಲಾಗಿರುವ ಬ್ಲಾಕ್ ಸ್ಪಾಟ್‌ಗಳನ್ನು ಸರಿಪಡಿಸಿ ವಾಹನ ಸವಾರರಿಗೆ ಗೊತ್ತಾಗುವಂತೆ ರಸ್ತೆ ಸುರಕ್ಷಾ ಸಾಧನಗಳನ್ನು ಅಳವಡಿಸಿ ಅಪಘಾತಗಳು ತಡೆಗಟ್ಟಬೇಕು ಎಂದ ಅವರು, ಇತ್ತೀಚೆಗೆ ಅಪಘಾತಗಳು ಹೆಚ್ಚಾಗಿ ಸಾವು ನೋವುಗಳು ಸಂಖ್ಯೆ ಹೆಚ್ಚಾಗುತ್ತಿದ್ದು, ಇವುಗಳನ್ನು ತಪ್ಪಿಸಲು ವೈಜ್ಞಾನಿಕ ವಿಧಾನಗಳನ್ನು ಅನುಸರಿಸಬೇಕು ಎಂದರು.ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ನಿಯಂತ್ರಣ ಹಾಗೂ ಐಆರ್‌ಸಿ(ಇಂಡಿಯನ್ ರೋಡ್ ಕಾಂಗ್ರೆಸ್) ನಿಯಮನುಸಾರ ಇರುವ ಮಾನದಂಡಗಳ ಪ್ರಕಾರ ಸುರಕ್ಷಾ ಕ್ರಮಗಳನ್ನು ಅನುಸರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.
ನೋ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿ ಅಲ್ಲಿ ಬೋರ್ಡ್‌ಗಳನ್ನು ಅಳವಡಿಸುವ ಮೂಲಕ ಅಪಘಾತಗಳನ್ನು ತಪ್ಪಿಸಲು ಟ್ರಾಫಿಕ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ವ್ಯಾಪ್ತಿಯಲ್ಲಿ ಬರುವ ರಸ್ತೆಗಳು, ರಾಷ್ಟ್ರೀಯ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳು ಸೇರುವ ಜಂಕ್ಷನ್ ಗಳಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಗಟ್ಟಲು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.ನಗರದಲ್ಲಿ ಸಮರ್ಪಕವಾಗಿ ಬೀದಿ ದೀಪ ಅಳವಡಿಸಲು ನಗರಸಭಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕೆಲ ಸ್ಥಳಗಳಲ್ಲಿ ಸ್ಕೈ ವಾಕ್ ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳು ಗುಡ್ಡಗಾಡು ಪ್ರದೇಶದಲ್ಲಿ ಹಾದು ಹೋಗಿದ್ದು, ರಸ್ತೆಗಳ ಬಹುತೇಕ ಭಾಗವು ತೀವ್ರ ತಿರುವುಗಳಿಂದ ಕೂಡಿರುವುದರಿಂದ ಹಲವಾರು ಸ್ಥಳಗಳಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಅಂತಹ ಸ್ಥಳಗಳಲ್ಲೂ ರಸ್ತೆಗಳನ್ನು ಅಗಲೀಕರಣ ಮಾಡಿ ತಿರುವುಗಳನ್ನು ನೇರಗೊಳಿಸಿ ತಡೆಗೋಡೆಗಳನ್ನುನಿರ್ಮಿಸಿ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮ ವಹಿಸಲಾಗಿದೆ ಎಂದರು.
ಸಭೆಯಲ್ಲಿ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಡಿ.ಎನ್ ಶ್ರೀಧರ್, ಪಿಆರ್‌ಇಡಿ ಅಧಿಕಾರಿ ನಾರಾಯಣಮೂರ್ತಿ, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಹಾಗೂ ಆರ್‌ಟಿಒ, ವಿವಿಧ ಇಲಾಖೆಗಳ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.ಅಪಘಾತ ತಡೆಗೆ ಮುಂದಾಗಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ ಮಾತನಾಡಿ, ರಸ್ತೆ ಸುರಕ್ಷಾ ಪ್ರಾಧಿಕಾರದಿಂದ ಈಗಾಗಲೇ ಗುರುತಿಸಿರುವ ಬ್ಲಾಕ್ ಸ್ಪಾಟ್‌ಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಅಪಘಾತಗಳನ್ನು ಕಡಿಮೆ ಮಾಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.