ಬ್ಲಾಕ್‌ ಸ್ಪಾಟ್‌ಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಿ

| Published : Sep 06 2024, 01:02 AM IST

ಸಾರಾಂಶ

ನಗರ, ಸ್ಥಳೀಯ ಸಂಸ್ಥೆ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲಾದ್ಯಂತ ಸೆ.14 ರಿಂದ ಅ. 1ರವರೆಗೆ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಇದರ ಪ್ರಯುಕ್ತ ಜಿಲ್ಲೆಯಲ್ಲಿರುವ ಶಾಲೆ, ಅಂಗನವಾಡಿ ಸೇರಿದಂತೆ ಕೊಳಚೆ ಪ್ರದೇಶಗಳಲ್ಲಿ ಶ್ರಮದಾನದ ಮೂಲಕ ಸಮಗ್ರ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.

ತುಮಕೂರು: ನಗರ, ಸ್ಥಳೀಯ ಸಂಸ್ಥೆ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲಾದ್ಯಂತ ಸೆ.14 ರಿಂದ ಅ. 1ರವರೆಗೆ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಇದರ ಪ್ರಯುಕ್ತ ಜಿಲ್ಲೆಯಲ್ಲಿರುವ ಶಾಲೆ, ಅಂಗನವಾಡಿ ಸೇರಿದಂತೆ ಕೊಳಚೆ ಪ್ರದೇಶಗಳಲ್ಲಿ ಶ್ರಮದಾನದ ಮೂಲಕ ಸಮಗ್ರ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವ್ಜೇ ಹಾಗೂ ನಗರಾಭಿವೃದ್ಧಿ ಕಾರ್ಯದರ್ಶಿ ದೀಪಾ ಚೋಳನ್ ಅವರು ಸ್ವಚ್ಛತೆಯೇ ಸೇವೆ ಕಾರ್ಯಕ್ರಮ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಪಾಲ್ಗೊಂಡ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಸ್ಚಚ್ಛತೆಯೇ ಸೇವೆ ಕಾರ್ಯಕ್ರಮದಡಿ “ಸ್ವಭಾವ ಸ್ವಚ್ಛತೆ-ಸಂಸ್ಕಾರ ಸ್ವಚ್ಛತೆ” ಪರಿಕಲ್ಪನೆಯಲ್ಲಿ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಪಂ ಅಧಿಕಾರಿಗಳು ಸಾರ್ವಜನಿಕರು ಮತ್ತು ಸ್ವಯಂ ಸೇವಕರ ಸಹಭಾಗಿತ್ವದಲ್ಲಿ ಕೊಳಚೆ ಪ್ರದೇಶ, ಬ್ಲಾಕ್ ಸ್ಪಾಟ್‌ಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು. ಸ್ವಚ್ಛತೆ, ಶುಚಿತ್ವಕ್ಕೆ ಸಂಬಂಧಿಸಿದಂತೆ ವಿವಿಧ ಅಭಿಯಾನಗಳನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸಬೇಕೆಂದು ಸೂಚನೆ ನೀಡಿದರು.

ಸಫಾಯಿ ಕರ್ಮಚಾರಿಗಳಿಗಾಗಿ ಸಫಾಯಿ ಮಿತ್ರ ಶಿಬಿರಗಳನ್ನು ಹಮ್ಮಿಕೊಂಡು ಆರೋಗ್ಯ ತಪಾಸಣೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಒದಗಿಸಬೇಕು. ಶಾಲೆಗಳಲ್ಲಿ ಸ್ವಚ್ಛತೆ ಕುರಿತು ಕವನ, ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸುವುದರೊಂದಿಗೆ ಸ್ವಚ್ಛ ಭಾರತ ಮಿಷನ್‌ಗೆ ಸಂಬಂಧಿಸಿದ ಸ್ಲೋಗನ್ ಬರವಣಿಗೆ, ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ ಯುವಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕಾರ್ಯಕ್ರಮಗಳಿಗೂ ಮುನ್ನ ಸ್ವಚ್ಛತಾ ಪ್ರತಿಜ್ಞೆಗಳನ್ನು ಸ್ವೀಕರಿಸಬೇಕು. ಅರಿವು ಕಾರ್ಯಕ್ರಮಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಮೂಲದಲ್ಲಿಯೇ ಪ್ರತ್ಯೇಕವಾಗಿ ಬೇರ್ಪಡಿಸುವ ಬಗ್ಗೆ ಹಾಗೂ ತ್ಯಾಜ್ಯವನ್ನು ಕಡಿಮೆಗೊಳಿಸುವ, ಮರು ಬಳಕೆ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರಲ್ಲದೆ, ಅ.2ರ ಗಾಂಧಿ ಜಯಂತಿ ದಿನದಂದು ಸ್ವಚ್ಛಭಾರತ್ ದಿವಸ್ ಎಂಬ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ನಿರ್ದೇಶನ ನೀಡಿದರು.

ಕಾರ್ಯಕ್ರಮದಲ್ಲಿ ಗಣ್ಯರಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಸಾವಿತ್ರಿ ಬಾಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜಿಪಂ ಸಿಇಒ ಜಿ.ಪ್ರಭು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎನ್.ಅಂಜಿನಪ್ಪ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಎಸ್.ಅನಿಲ್‌ಕುಮಾರ್, ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.