ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮವಹಿಸಿ: ರಾಘವೇಂದ್ರ ಹಿಟ್ನಾಳ

| Published : Jun 19 2024, 01:09 AM IST

ಸಾರಾಂಶ

ಹಾಸ್ಟೆಲ್‌ಗೆ ಬರುವ ಮಕ್ಕಳ ಬಿಟ್ಟಿ ಬಂದಿಲ್ಲ, ಸರ್ಕಾರವೇ ಮಕ್ಕಳ ಜವಬ್ದಾರಿಯನ್ನು ತೆಗೆದುಕೊಂಡಿದೆ. ಹೀಗಾಗಿ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮವಹಿಸಬೇಕು.

- ಹಾಸ್ಟೆಲ್ ಮಕ್ಕಳೆಂದರೇ ಬಿಟ್ಟಿ ಬಂದಿಲ್ಲ

- ವಿದ್ಯಾರ್ಥಿಗಳಿಗೆ ಸಿಗಬೇಕಾದ ಸೌಲಭ್ಯ ನೆಟ್ಟಗೆ ಕೊಡಿ

- ಕೊಪ್ಪಳ ತಾಲೂಕು ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳ ಮತ್ತು ಭಾಗ್ಯನಗರ ವ್ಯಾಪ್ತಿಯಲ್ಲಿ ಇರುವ ರಾಜಕಾಲುವೆಯ ಒತ್ತುವರಿ ತೆರವು ಮಾಡಿ, ನೀರು ಸರಾಗ ಹೋಗುವುದಕ್ಕೆ ದಾರಿ ಮಾಡುವಂತೆ ಶಾಸಕ ರಾಘವೇಂದ್ರ ಹಿಟ್ನಾಳ ಸೂಚಿಸಿದರು.

ಕೊಪ್ಪಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧುವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಚೆಗೆ ಸುರಿದ ಭಾರಿ ಮಳೆಗೆ ನೀರು ಹೋಗುವುದಕ್ಕೆ ದಾರಿ ಇಲ್ಲದಂತೆ ಆಗಿ ದೊಡ್ಡ ಸಮಸ್ಯೆಯಾಗಿದೆ. ಅನೇಕ ಏರಿಯಾಗಳಲ್ಲಿ ಮಳೆ ನೀರು ನುಗ್ಗಿದೆ. ಅಷ್ಟೇ ಅಲ್ಲ ಕೆಲವೊಂದು ಏರಿಯಾದಲ್ಲಿ ಮನೆಗಳಿಗೂ ನೀರು ನುಗ್ಗಿದೆ. ಇದರಿಂದ ನಾಗರಿಕರು ತೀವ್ರ ಸಮಸ್ಯೆ ಎದುರಿಸಿದ್ದಾರೆ ಎಂದರು.

ಇದನ್ನು ಕೂಡಲೇ ಗಂಭೀರವಾಗಿ ಪರಿಗಣಿಸಬೇಕು ಮತ್ತು ಸಮಸ್ಯೆಯ ಶಾಶ್ವತ ಇತ್ಯರ್ಥಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಒತ್ತುವರಿಯನ್ನು ತೆರವು ಮಾಡಬೇಕು. ಡಿಸಿ ಕಚೇರಿಯಿಂದ ಹಿಡಿದು ಹಿರೇಹಳ್ಳದವರೆಗೂ ಒತ್ತುವರಿ ತೆರವು ಮಾಡಿ ನೀರು ಹೋಗುವುದಕ್ಕೆ ದಾರಿ ಮಾಡಿ ಎಂದು ಸೂಚಿಸಿದರು.

ಬಿಟ್ಟಿಬಂದಿಲ್ಲ ಮಕ್ಕಳು:ಹಾಸ್ಟೆಲ್‌ಗೆ ಬರುವ ಮಕ್ಕಳ ಬಿಟ್ಟಿ ಬಂದಿಲ್ಲ, ಸರ್ಕಾರವೇ ಮಕ್ಕಳ ಜವಬ್ದಾರಿಯನ್ನು ತೆಗೆದುಕೊಂಡಿದೆ. ಹೀಗಾಗಿ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮವಹಿಸಬೇಕು ಎಂದು ಶಾಸಕ ಹಿಟ್ನಾಳ ತಾಕೀತು ಮಾಡಿದರು.

ಬಿಸಿಎಂ ತಾಲೂಕು ಅಧಿಕಾರಿಗಳ ಹಾಸ್ಟೆಲ್‌ಗಳಲ್ಲಿ ಬಿಸಿನೀರಿನ ಸಮಸ್ಯೆ ಇದೆ ಎಂದಾಗ ಶಾಸಕರು ಗರಂ ಆದರು. ಯಾಕೆ ಈ ಸಮಸ್ಯೆ ಇತ್ಯರ್ಥ ಮಾಡಿಲ್ಲ. ವಿದ್ಯಾರ್ಥಗಳಿಗೆ ಬಿಸಿ ನೀರು ಕೊಡುವುದನ್ನು ಕೂಡಲೇ ಪ್ರಾರಂಭಿಸಬೇಕು. ಅಷ್ಟೇ ಅಲ್ಲ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಒಳ್ಳೆಯ ಆಹಾರ ನೀಡಬೇಕು ಎಂದು ಸೂಚಿಸಿದರು.

ಹಾಸ್ಟೆಗಳಿಗೆ ಅರ್ಜಿ ಹಾಕುವ ವಿದ್ಯಾರ್ಥಿಗಳಲ್ಲಿ ಬಹುತೇಕರಿಗೆ ಹಾಸ್ಟೆಲ್ ಸಿಗುವುದಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಅರ್ಜಿ ಹಾಕಿದರೂ ಕೇವಲ ನೂರಾರು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಅವಕಾಶ ಸಿಗುತ್ತದೆ. ಹಾಗಾದರೇ ಉಳಿದ ಮಕ್ಕಳು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಅಧಿಕಾರಿಗಳ ಬಳಿ ಉತ್ತರ ಇರಲಿಲ್ಲ. ಇರುವ ಹಾಸ್ಟೆಲ್‌ನಲ್ಲಿ ಮಾತ್ರ ಪ್ರವೇಶ ನೀಡಲು ಸಾಧ್ಯವಿದ್ದಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ ಎಂದು ಹೇಳಿ ಕೈಚಲ್ಲಿದರು. ಇದರಿಂದ ಆಕ್ರೋಶಗೊಂಡ ಶಾಸಕ ರಾಘವೇಂದ್ರ ಹಿಟ್ನಾಳ, ಅಷ್ಟಕ್ಕೆ ನಿಮ್ಮ ಕೆಲಸ ಮುಗಿಯಲ್ಲ. ವಿದ್ಯಾರ್ಥಿಗಳು ಹೆಚ್ಚಾದಾಗ ತಕ್ಷಣ ಪ್ರಸ್ತಾವನೆ ಕಳುಹಿಸಬೇಕು. ಅದನ್ನು ನಮ್ಮ ಗಮನಕ್ಕೆ ತಂದರೇ ಸರ್ಕಾರದಲ್ಲಿ ಹಾಸ್ಟೆಲ್ ಮಂಜೂರಾತಿಗೆ ಶ್ರಮಿಸಲು ಅನುಕೂಲವಾಗುತ್ತದೆ ಎಂದರು. ಈಗ ಆಗಿದ್ದು ಆಯಿತು, ಹಿಂದುಳಿದ ವರ್ಗಗಳ ಇಲಾಖೆಯ ಸಚಿವರು ನಮ್ಮವರೇ ಇದ್ದಾರೆ. ಇಂದೇ ಪ್ರಸ್ತಾವನೆ ಸಿದ್ಧ ಮಾಡಿ, ನಾಳೆ ಕೆಡಿಪಿ ಸಭೆಯಲ್ಲಿ ಸಚಿವರಿಗೆ ಸಲ್ಲಿಸಿ, ಅನುಮತಿ ಪಡೆದುಕೊಳ್ಳೋಣ ಎಂದರು.

ಎಸ್ಸಿ, ಎಸ್ಟಿ ಇಲಾಖೆಯಲ್ಲಿ ಬಳಕೆಯಾಗದೆ ₹18 ಕೋಟಿ ಇರುವುದರಿಂದ ಶಾಸಕ ರಾಘವೇಂದ್ರ ಹಿಟ್ನಾಳ ಆಕ್ರೋಶ ವ್ಯಕ್ತಪಡಿಸಿದರು. ಹಣ ಇದ್ದರೂ ಬಳಕೆ ಮಾಡದೆ ಇದ್ದರೇ ಹೇಗೆ ಎಂದು ಪ್ರಶ್ನೆ ಮಾಡಿದರು. ಮೊದಲು ಅನುದಾನ ಬಳಕೆ ಮಾಡಿ, ಎಸ್ಸಿ, ಎಸ್ಟಿ ಸಮುದಾಯದ ವಾರ್ಡ್‌ಗಳನ್ನು ಅಭಿವೃದ್ಧಿ ಪಡಿಸಿ ಎಂದು ತಾಕೀತು ಮಾಡಿದರು.

ಜಿಪಂ ಡಿಎಸ್ ಮಲ್ಲಪ್ಪ ತೊದಲಬಾವಿ, ಕೊಪ್ಪಳ ನಗರಸಭೆ ಆಯುಕ್ತ ಗಣಪತಿ ಪಾಟೀಲ್, ತಹಸೀಲ್ದಾರ ವಿಠ್ಠಲ ಚೌಗಲಿ ಹಾಗೂ ತಾಪಂ ಇಒ ದುಂಡಪ್ಪ ತುರಾದಿ ಇದ್ದರು.