ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಫೆಬ್ರವರಿ ೧೪ರಂದು ವ್ಯಾಲೆಂಟೈನ್ ಡೇ ಎಂದು ಆಚರಿಸುವ ಪಾಶ್ಚಾತ್ಯರ ದುಷ್ಟ ಪ್ರವೃತ್ತಿ ತಡೆಗೆ ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಶುಕ್ರವಾರ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಲಾಯಿತು.ಇದೇ ವೇಳೆ ಹಿಂದೂ ಜನಜಾಗೃತಿ ಸಮಿತಿ ಮುಖಂಡರಾದ ಗೋವಿಂದರಾಜು ಮಾಧ್ಯಮದೊಂದಿಗೆ ಮಾತನಾಡಿ, ಕೆಲವು ದೇಶಗಳಲ್ಲಿ ಫೆಬ್ರವರಿ ೧೪ ಅನ್ನು ವ್ಯಾಲೆಂಟೈನ್ ಡೇ ಎಂದು ಆಚರಿಸುವ ಪಾಶ್ಚಾತ್ಯರ ಪ್ರವೃತ್ತಿಯು ಭಾರತದಲ್ಲಿಯೂ ವ್ಯಾಪಕವಾಗಿ ಪಸರಿಸಿದೆ. ಪಾಶ್ಚಾತ್ಯರ ವ್ಯಾಪಾರಿಕ ಲಾಭಕ್ಕಾಗಿ ಪ್ರೇಮದ ಹೆಸರಿನಲ್ಲಿ ಈ ವಿಕೃತ ಕಲ್ಪನೆಯ ಪ್ರಚಾರದಿಂದ ಯುವಪೀಳಿಗೆ ಭೋಗ ಮತ್ತು ಅನೈತಿಕತೆಯಲ್ಲಿ ಮುಳುಗುತ್ತಿದೆ. ವ್ಯಾಲೆಂಟೈನ್ ಡೇ ಹಿನ್ನೆಲೆಯಲ್ಲಿ ಪ್ರೇಮದ ಭೀಭತ್ಸ ಪ್ರದರ್ಶನ ಮಾಡುವ ನೆಪದಲ್ಲಿ ಇತ್ತೀಚೆಗೆ ಏಕಮುಖ ಪ್ರೀತಿಯಿಂದ ಯುವತಿಯರ ಮೇಲಿನ ಕಿರುಕುಳ ಹಾಗೂ ಹಲವಾರು ಹಿಂಸಾತ್ಮಕ ಘಟನೆಗಳು ಸಂಭವಿಸುತ್ತಿವೆ.
ಇದರ ಜೊತೆಗೆ, ನಡೆಯುವ ಪಾರ್ಟಿಗಳಲ್ಲಿ ಯುವಕ-ಯುವತಿಯರು ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆ ಮುಂತಾದ ಅನಾಚಾರಗಳಲ್ಲಿ ತೊಡಗಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಈ ದಿನ ಗರ್ಭನಿರೋಧಕ ಸಾಮಗ್ರಿಗಳ ಹೆಚ್ಚಿನ ಮಾರಾಟವು ಅನೈತಿಕ ಸಂಬಂಧಗಳ ಹೆಚ್ಚಳವನ್ನು ತೋರಿಸುತ್ತದೆ. ಯುವತಿಯರನ್ನು ಆಕರ್ಷಿಸಲು ಮಾಡಲು ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಲ್ಲದೆ, ಸುಳ್ಳು ಹೆಸರು ಹೇಳಿ ಯುವತಿಯರಿಗೆ ಮೋಸ ಮಾಡುವವರಿಂದ ಲವ್ ಜಿಹಾದ್ ಕೂಡ ನಡೆಯುತ್ತಿದೆ ಎಂದು ಆರೋಪಿಸಿದರು.ವ್ಯಾಲೆಂಟೈನ್ ಡೇ ಕಾರಣದಿಂದ ಶಾಲಾ-ಕಾಲೇಜುಗಳ ಆವರಣಗಳಲ್ಲಿ ಕಾನೂನು ಮತ್ತು ಶಿಸ್ತಿನ ಸಮಸ್ಯೆ ಉಂಟಾಗುತ್ತಿದೆ. ಜೊತೆಗೆ ಶೈಕ್ಷಣಿಕ ವಾತಾವರಣವೂ ಹಾಳಾಗುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಭಾರತದಲ್ಲಿ ಪ್ರತಿ ೧೬ ನಿಮಿಷಕ್ಕೊಮ್ಮೆ ಅತ್ಯಾಚಾರ ಸಂಭವಿಸುತ್ತಿದ್ದು, ಮಹಿಳೆಯರ ಮೇಲೆ ನಡೆಯುತ್ತಿರುವ ಅಕ್ರಮಗಳ ಭಯಾನಕ ಅಂಕಿಅಂಶಗಳು ತಕ್ಷಣ ಕಾನೂನು ಕ್ರಮಗಳ ಅಗತ್ಯತೆಯನ್ನು ತೋರಿಸುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಅನಾಚಾರಗಳಿಗೆ ತಡೆಯಲು ವಿವಿಧ ಆಧ್ಯಾತ್ಮಿಕ ಮತ್ತು ಸಮಾಜಸೇವಾ ಸಂಸ್ಥೆಗಳು ಈ ಡೇ ಸಂಸ್ಕೃತಿಯ ವಿರುದ್ಧ ಧ್ವನಿ ಎತ್ತಿ, ಭಾರತೀಯ ಸಂಪ್ರದಾಯಗಳನ್ನು ಅನುಸರಿಸಲು ಕರೆ ಕೊಟ್ಟಿವೆ. ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಅರ್ಥಮಾಡಿಕೊಂಡು ಅದನ್ನು ಅನುಸರಿಸುವವರ ಸಂಖ್ಯೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಭಾರತೀಯ ಯುವಪೀಳಿಗೆಯನ್ನು ಪಾಶ್ಚಾತ್ಯ ದುಷ್ಚಟಗಳತ್ತ ಪ್ರೇರೇಪಿಸಲು ಭಾರಿ ಕುತಂತ್ರ ನಡೆಯುತ್ತಿದೆ. ಭಾರತೀಯ ಸಮಾಜ ವ್ಯವಸ್ಥೆ ಶ್ರೇಷ್ಠವಾಗಿ ಉಳಿಯಲು, ಹಾಗೆಯೇ ಅನೈತಿಕ ಕೃತ್ಯಗಳಿಂದ ಉಂಟಾಗುವ ಅವ್ಯವಸ್ಥೆ ತಡೆಯಲು ಯುವಪೀಳಿಗೆಗೆ ಬೋಧನೆ ನೀಡುವುದು ಅತೀ ಅಗತ್ಯವಾಗಿದೆ ಎಂದು ಹೇಳಿದರು.ಫೆಬ್ರವರಿ ೧೪ರಂದು ವಿಶೇಷ ಪೊಲೀಸ್ ಪಥಕ ನಿಯೋಜಿಸಿ ಕಾಲೇಜು ಆವರಣಗಳಲ್ಲಿ ಕಾನೂನು ವಿರೋಧಿ ಕೃತ್ಯಗಳಲ್ಲಿ ತೊಡಗುವವರ ಮೇಲೆ ನಿಗಾ ಇಡಬೇಕು. ಅತಿವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಹಿಳೆಯರ ಮೇಲೆ ವ್ಯಾಲೆಂಟೈನ್ ಡೇ ಸಂದರ್ಭದಲ್ಲಿ ಹೆಚ್ಚುತ್ತಿರುವ ದೌರ್ಜನ್ಯಗಳ ದೃಷ್ಟಿಯಿಂದ ಶಾಲಾ-ಕಾಲೇಜುಗಳ ಆವರಣದಲ್ಲಿ ಈ ಅನಾಚಾರಗಳು ನಡೆಯದಂತೆ, ಸರ್ಕಾರದಿಂದ ಮಾರ್ಗಸೂಚಿಗಳನ್ನು ಜಾರಿ ಮಾಡಬೇಕು ಎಂದು ತಮ್ಮ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟರು.
ಇದೇ ವೇಳೆ ಹಿಂದೂ ಜನಜಾಗೃತಿ ಸಮಿತಿಯ ವೆಂಕಟೇಶ್ ರಾಜು, ಸುರೇಶ್ ಗೌಡ, ರಾಘವೇಂದ್ರ ಆಚಾರ್, ಅನಂತರಾಜು, ಸೋಮಣ್ಣ, ಸತೀಶ್, ಪವನ್, ಅಶೋಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.