ನೀರಿನ ಅಭಾವವಾಗದಂತೆ ಕ್ರಮ ಕೈಗೊಳ್ಳಿ: ಬಿ.ಕೆ. ಸಪ್ತಶ್ರೀ

| Published : May 04 2024, 12:31 AM IST

ನೀರಿನ ಅಭಾವವಾಗದಂತೆ ಕ್ರಮ ಕೈಗೊಳ್ಳಿ: ಬಿ.ಕೆ. ಸಪ್ತಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ ಬಾರದ ಕಾರಣ ಬೇಸಿಗೆ ಬಿಸಿಲ ತೀವ್ರತೆ ಹೆಚ್ಚಾಗಿದ್ದು, ತಾಲೂಕಿನಲ್ಲಿ ನೀರಿಗೆ ಅಭಾವ ಉಂಟಾದ ಗ್ರಾಮಗಳಲ್ಲಿ ಟ್ಯಾಂಕರ್, ಖಾಸಗಿ ಬೋರ್‌ವೆಲ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಈ ಬಗ್ಗೆ ಯಾವುದೇ ಸಮಸ್ಯೆಗಳಿದ್ದರೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಮಾಹಿತಿ ನೀಡಬೇಕು ಎಂದು ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಮಳೆ ಬಾರದ ಕಾರಣ ಬೇಸಿಗೆ ಬಿಸಿಲ ತೀವ್ರತೆ ಹೆಚ್ಚಾಗಿದ್ದು, ತಾಲೂಕಿನಲ್ಲಿ ನೀರಿಗೆ ಅಭಾವ ಉಂಟಾದ ಗ್ರಾಮಗಳಲ್ಲಿ ಟ್ಯಾಂಕರ್, ಖಾಸಗಿ ಬೋರ್‌ವೆಲ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಈ ಬಗ್ಗೆ ಯಾವುದೇ ಸಮಸ್ಯೆಗಳಿದ್ದರೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಮಾಹಿತಿ ನೀಡಬೇಕು ಎಂದು ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಸೂಚನೆ ನೀಡಿದರು.

ನಗರದ ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿ ಕುಡಿಯುವ ನೀರು, ಮೇವು ಸರಬರಾಜು, ಮೇವು ಬ್ಯಾಂಕ್ ಸ್ಥಾಪನೆ ಬಗ್ಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಜಾತ್ರೆ, ಹಬ್ಬ ಪ್ರಾರಂಭವಾಗಿರುವ ಕಾರಣ ಜನರಿಗೆ ಮುಖ್ಯವಾಗಿ ನೀರಿನ ವ್ಯವಸ್ಥೆ ಬೇಕಿದ್ದು, ಈ ಸಂಬಂಧ ಕುಡಿಯುವ ನೀರಿನ ಇಲಾಖೆಯ ಅಧಿಕಾರಿಗಳು ಜನರಿಗೆ ನೀರಿನ ಅಭಾವವಾಗದಂತೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.

ಪ್ರತಿ ನಿತ್ಯ ನೀರಿನ ಸಮಸ್ಯೆಯಾಗಿದೆ ಎಂದು ನಮಗೆ ದೂರವಾಣಿ ಕರೆಗಳು ಬರುತ್ತಿವೆ. ನೀವು ಜವಾಬ್ದಾರಿ ಅರಿತು ಕೆಲಸ ಮಾಡಬೇಕಾಗಿದ್ದು, ಸಬೂಬು ಹೇಳುವುದನ್ನು ಬಿಡಬೇಕು. ತಾಲೂಕಿನ ಹುಣಸೇಘಟ್ಟ, ರಾಮಡಿಹಳ್ಳಿ ಬೋವಿ ಕಾಲೋನಿಯಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಇಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಬೋರ್‌ವೆಲ್ ಕೊರೆಸುವ ಬಗ್ಗೆ ಕ್ರಮವಹಿಸಬೇಕು ಎಂದು ಹೇಳಿದರು.

ಅಂಚೆಕೊಪ್ಪಲು, ಗಂಗನಘಟ್ಟ, ಹುಚ್ಚನಹಟ್ಟಿಯಲ್ಲಿರುವ ಬೋರ್‌ವೆಲ್‌ಗಳನ್ನು ರೀಬೋರ್ ಮಾಡಿಸಿ, ನೀರು ಒದಗಿಸುವ ವ್ಯವಸ್ಥೆ ಮಾಡಬೇಕು. ಬಿಸಿಲು ಹೆಚ್ಚಾಗಿರುವ ಕಾರಣ ಪ್ರಾಣಿ, ಪಕ್ಷಿಗಳಿಗೆ ನೀರಿನ ಅವಶ್ಯಕತೆ ಇದ್ದು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ತೊಟ್ಟಿಗಳಿಗೆ ನಿತ್ಯ ನೀರನ್ನು ತುಂಬಿಸುವ ಕೆಲಸವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜೆಜೆಎಂ ಬಗ್ಗೆ ಮಾಹಿತಿ ಕೊಡಿ: ಜಲ ಜೀವನ ಮಿಷನ್ ಯೋಜನೆ ಜಾರಿಗೆ ಬಂದು ಎರಡು ವರ್ಷಗಳು ಕಳೆದರೂ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದು, ಎಲ್ಲೆಲ್ಲಿ ಎಷ್ಟೆಷ್ಟು ಕೆಲಸವಾಗಿದೆ ಮಾಹಿತಿ ಕೊಡಬೇಕು ಎಂದು ಗ್ರಾಮೀಣ ಕುಡಿಯುವ ನೀರಿನ ಕಾರ್ಯನಿರ್ವಾಹಕ ಚಂದ್ರಶೇಖರ್‌ಗೆ ತಿಳಿಸಿದರು.

ಚಂದ್ರಶೇಖರ್ ಪ್ರತಿಕ್ರಿಯಿಸಿ, ತಾಲೂಕಿನ 375 ಹಳ್ಳಿಗಳು ಜೆಜೆಎಂ ಯೋಜನೆ ವ್ಯಾಪ್ತಿಗೆ ಬರುತ್ತವೆ. ಅದರಲ್ಲಿ 304 ಹಳ್ಳಿಗಳ ಟೆಂಡರ್ ಪ್ರಕ್ರಿಯೆಯಾಗಿದ್ದು, 138 ಹಳ್ಳಿಗಳಲ್ಲಿ ಕೆಲಸ ನಡೆಯುತ್ತಿದೆ. 29 ಹಳ್ಳಿಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಅದಕ್ಕೆ ಉಪವಿಭಾಗಾಧಿಕಾರಿಗಳು ಕಳೆದ ಎರಡು ವರ್ಷಗಳಿಂದ ಕೇವಲ 29 ಹಳ್ಳಿಗಳಲ್ಲಿ ನೀರಿನ ವ್ಯವಸ್ಥೆಯಾದರೆ ಉಳಿದ ಕೆಲಸ ಯಾವಾಗ ಮಾಡುತ್ತೀರಾ? ಉತ್ತರ ನೀಡಿ ಎಂದು ಪ್ರಶ್ನಿಸಿದರು. ಆರು ತಿಂಗಳೊಳಗೆ ಪೂರ್ತಿ ಕೆಲಸ ಮುಗಿಸಿ ಎಲ್ಲ ಹಳ್ಳಿಗಳಲ್ಲಿಯೂ ಜೆಜೆಎಂ ನೀರಿನ ವ್ಯವಸ್ಥೆಯಾಗಬೇಕೆಂದು ಸೂಚಿಸಿದರು.

ಪಶು ಸಂಗೋಪನಾ ಇಲಾಖೆ ಸಹಾಯಕ ಕಾರ್ಯನಿರ್ವಾಹಕಾಧಿಕಾರಿ ಡಾ. ನಂದೀಶ್ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕಿನಲ್ಲಿ ಮೇವು ಬ್ಯಾಂಕ್ ತೆರೆಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಿಬ್ಬನಹಳ್ಳಿ, ಹೊನ್ನವಳ್ಳಿ, ಕಸಬಾ ಹೋಬಳಿಗೆ ಹತ್ತಿರವಾಗುವಂತಹ ಕಲ್ಲೇಗೌಡನಪಾಳ್ಯದಲ್ಲಿ ಮೇವು ಬ್ಯಾಂಕ್ ತೆರೆಯಲಾಗುವುದು. ತಾಲೂಕಿನಲ್ಲಿ 61 ಸಾವಿರ ರಾಸುಗಳಿವೆ ಎಂದರು.

ಅರ್ಹ ಫಲಾನುಭವಿ ರೈತನಿಗೆ ಮೇವು ಕಾರ್ಡ್ ಮೂಲಕ 42 ಕೆಜಿ ಭತ್ತದ ಹುಲ್ಲನ್ನು ವಿತರಣೆ ಮಾಡಲಾಗುವುದು. ಕಿಬ್ಬನಹಳ್ಳಿ ಹೋಬಳಿಗೆ 270 ಟನ್, ಕಸಬಾ 570 ಟನ್, ಹೊನ್ನವಳ್ಳಿ 600 ಟನ್ ಮೇವಿನ ಅವಶ್ಯಕತೆ ಇದೆ. ಒಟ್ಟು 1440 ಟನ್ ಮೇವಿಗೆ ಸರ್ಕಾರಕ್ಕೆ ಬೇಡಿಕೆ ಇಡಲಾಗಿದೆ. ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಮೇವಿನ ಬೀಜ ವಿತರಣೆ ಮಾಡುತ್ತಿದ್ದು, ಅರ್ಹ ರೈತರು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. 55 ಸಾವಿರ ಜಾನುವಾರುಗಳಿಗೆ ವ್ಯಾಕ್ಸಿನೇಷನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವಿದ್ಯುತ್ ಲೈನ್‌ ಸರಿಪಡಿಸಿ: ನಗರಸಭೆ ವ್ಯಾಪ್ತಿ ಮತ್ತು ಗ್ರಾಮಾಂತರ ಭಾಗಗಳಲ್ಲಿ ಎಲ್ಲೆಲ್ಲಿ ವಿದ್ಯುತ್ ಲೈನ್‌ಗಳು, ಕಂಬಗಳು ಬಾಗಿವೆಯೋ ಅವುಗಳನ್ನು ಪರಿಶೀಲಿಸಿ ಸರಿಪಡಿಸಬೇಕು. ಮಳೆ, ಗಾಳಿ ಪ್ರಾರಂಭವಾದರೆ ಜನರಿಗೆ ತೊಂದರೆಯಾಗಲಿದೆ. ನಗರಸಭೆಯು ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಬೇಕು. ಎಲ್ಲೆಂದರಲ್ಲಿ ಕಸವನ್ನು ಹಾಕಿ ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುವಂತೆ ಮಾಡದಿರಿ ಎಂದು ತಿಳಿಸಿದರು. ಸಭೆಯಲ್ಲಿ ಬೆಸ್ಕಾಂ ಎಇಇ ಮನೋಹರ್, ಕೃಷಿ ಇಲಾಖೆಯ ಚನ್ನಕೇಶವಮೂರ್ತಿ, ಪಿಡಬ್ಯ್ಲುಡಿ ಇಲಾಖೆಯ ಕಾರ್ತಿಕ್, ತೋಟಗಾರಿಕೆ ಇಲಾಖೆಯ ಮಲ್ಲಿಕಾರ್ಜುನ್ ಮತ್ತಿತರರಿದ್ದರು.