ಡೆಂಘೀ ರೋಗಿಗೆ ಉತ್ತಮ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಿ: ಶಾಸಕ ಗೋಪಾಲಕೃಷ್ಣ ಬೇಳೂರು

| Published : Jun 20 2024, 01:02 AM IST

ಡೆಂಘೀ ರೋಗಿಗೆ ಉತ್ತಮ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಿ: ಶಾಸಕ ಗೋಪಾಲಕೃಷ್ಣ ಬೇಳೂರು
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸಭೆ ನಡೆಸಿ, ರೋಗಿಗಳಿಗೆ ಆಸ್ಪತ್ರೆಯಲ್ಲಿಯೇ ಔಷಧಿಗಳು ಸಿಗುವಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು.

ಕನ್ನಡಪ್ರಭ ವಾರ್ತೆ ಸಾಗರ

ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಡೆಂಘೀ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ನೀಡಿದ್ದಾರೆ.

ಡೆಂಘೀ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆರೋಗ್ಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಕ್ತ ತಪಾಸಣೆ ವರದಿಯನ್ನು ಅತಿ ಶೀಘ್ರವಾಗಿ ಕೊಡಿ. ರೋಗಿಗಳಿಗೆ ಆಸ್ಪತ್ರೆಯಲ್ಲಿಯೇ ಔಷಧಿಗಳು ಸಿಗುವಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು.

ನಗರಸಭೆಯಿಂದ ಪಟ್ಟಣ ವ್ಯಾಪ್ತಿಯಲ್ಲಿ, ಗ್ರಾಮ ಪಂಚಾಯ್ತಿ ಮೂಲಕ ಗ್ರಾಮೀಣ ಭಾಗದಲ್ಲಿ ಔಷಧಿ ಸಿಂಪಡಣೆಗೆ ಸೂಚನೆ ನೀಡಲಾಗಿದೆ. ತಾಲ್ಲೂಕಿನಲ್ಲಿ ಈ ತನಕ ೧೪೧ ಡೆಂಘೀ ಪ್ರಕರಣ ದಾಖಲಾಗಿದ್ದು, ಅರ್ಧದಷ್ಟು ನಮ್ಮ ತಾಲ್ಲೂಕಿನದ್ದಾಗಿದ್ದರೆ, ಉಳಿದರ್ಧ ಭಾಗ ಅಕ್ಕಪಕ್ಕದ ತಾಲ್ಲೂಕಿನಿಂದ ಬಂದ ರೋಗಿಗಳಾಗಿದ್ದಾರೆ. ವೈದ್ಯ ಸಿಬ್ಬಂದಿ ರಜೆ ಹಾಕದೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸೂಚನೆ ನೀಡಿದರು.

ಅಧಿಕಾರಿಗಳೊಂದಿಗೆ ಸಭೆ:

ಇದೇ ವೇಳೆ ಹಾಸ್ಟೆಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು, ವಿದ್ಯಾರ್ಥಿ ನಿಲಯಗಳನ್ನು ಉತ್ತಮವಾಗಿ ನಿರ್ವಹಿಸಬೇಕು. ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಯಾವುದೇ ವಿದ್ಯಾರ್ಥಿಗಳಿಂದ ದೂರು ಬಂದರೂ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿದ್ಯಾರ್ಥಿ ನಿಲಯಗಳಲ್ಲಿ ಏನಾದರೂ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನಿ. ಕಟ್ಟಡಗಳು ಶಿಥಿಲಾಸ್ಥೆಯಲ್ಲಿದ್ದರೆ ವಿದ್ಯಾರ್ಥಿ ನಿಲಯಗಳನ್ನು ಬೇರೆ ಕಡೆ ಸ್ಥಳಾಂತರಿ ಸಲು ಸೂಚನೆ ನೀಡಿದ ಶಾಸಕರು ಹಾಸ್ಟೆಲ್ ದೂರವಿದ್ದರೆ ಹಾಸ್ಟೆಲ್‌ನಿಂದ ಶಾಲಾ ಕಾಲೇಜಿಗೆ ಹೋಗಲು ಬಸ್ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನಟರಾಜ್, ಸಿವಿಲ್ ಸರ್ಜನ್ ಡಾ.ಪರಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಭರತ್, ಪ್ರಮುಖರಾದ ಮಧುಮಾಲತಿ, ಗಣಪತಿ ಮಂಡಗಳಲೆ, ನಾರಾಯಣ ಅರಮನೆಕೇರಿ, ಜಯರಾಮ್, ದಿನಕರ್, ಅನಿಸ್, ಟಿ.ಪಿ.ರಮೇಶ್ ಇನ್ನಿತರರು ಹಾಜರಿದ್ದರು.