ಆರ್‌ಕೆಎಂ ಆಸ್ಪತ್ರೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಿ

| Published : Sep 10 2025, 01:05 AM IST

ಸಾರಾಂಶ

ಆಯುರ್ವೇದವನ್ನು ಆಧುನಿಕ ಯುಗಕ್ಕೆ ಅನುಗುಣವಾಗಿ ಸಂಶೋಧನೆಗಳನ್ನು ಕೈಗೊಂಡು, ಮನುಕುಲದ ಆರೋಗ್ಯವನ್ನು ಕಾಪಾಡಿ

ಕನ್ನಡಪ್ರಭ ವಾರ್ತೆ ವಿಜಯಪುರ

ಭಾರತದ ಆಯುರ್ವೇದ ಪದ್ಧತಿಯು ಜಗತ್ತಿಗೆ ಬಹುದೊಡ್ಡ ಕೊಡುಗೆಯಾಗಿದೆ. ಇದನ್ನು ಜಾಗತಿಕವಾಗಿ ಪಸರಿಸುತ್ತಿರುವ ಆರ್‌ಕೆಎಂ ಸಂಸ್ಥೆಯ ಪ್ರಯತ್ನವನ್ನು ನಾವೆಲ್ಲ ಶ್ಲಾಘಿಸಬೇಕು. ಆರ್‌ಕೆಎಂ ಆಸ್ಪತ್ರೆಯಲ್ಲಿನ ಸಕಲ ಸೌಲಭ್ಯಗಳ ಸದುಪಯೋಗವನ್ನು ರೋಗಿಗಳು ಪಡೆದುಕೊಳ್ಳಬೇಕು ಎಂದು ಕಾಖಂಡಕಿಯ ಶ್ರೀ ಗುರುದೇವಾಶ್ರಮದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.

ನಗರದ ಆರ್‌ಕೆಎಂ ಆಯುರ್ವೇದ ಆಸ್ಪತ್ರೆಯಲ್ಲಿ ನಡೆದ ಆರ್‌ಕೆಎಂ ಶಿಕ್ಷಣ ಸಂಸ್ಥೆಯ ಅಧಿಕೃತ ಅಂತರ್ಜಾಲದ ಉದ್ಘಾಟನೆ ನೆರವೇರಿಸಿ, ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮನಗೂಳಿ ಶ್ರೀ ವಿವೇಕಾನಂದ ಆಶ್ರಮದ ಕಾರ್ಯದರ್ಶಿ ಶಿವಪ್ರಿಯಾನಂದಜೀ ಮಹಾರಾಜ ಮಾತನಾಡಿ, ಆಯುರ್ವೇದವನ್ನು ಆಧುನಿಕ ಯುಗಕ್ಕೆ ಅನುಗುಣವಾಗಿ ಸಂಶೋಧನೆಗಳನ್ನು ಕೈಗೊಂಡು, ಮನುಕುಲದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಆಯುರ್ವೇದ ವೈದ್ಯರಿಗೆ ಕರೆ ನೀಡಿದರು.

ತಜ್ಞವೈದ್ಯೆ ಡಾ.ಪರ್ವೀನ್ ನದಾಫ ಅವರು, ಮಾನಸಿಕ ಕಾಯಿಲೆಗಳ ಕುರಿತು ಲಭ್ಯವಿರುವ ಸೌಲಭ್ಯಗಳ ಕುರಿತು ವಿಸ್ತ್ರತವಾಗಿ ಮಾಹಿತಿ ನೀಡಿದರು. ಧರ್ಮಸ್ಥಳದ ಎಸ್‌ಡಿಎಂ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ಸೇವೆ ಅನುಭವ ಹೊಂದಿರುವ 6 ಜನ ತಜ್ಞ ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ. ವಿಶೇಷ ಆಯುರ್ವೇದ ಚಿಕಿತ್ಸೆಗಳಿಗೆ ದೂರದ ಕೇರಳ, ಮತ್ತಿತರ ಆಸ್ಪತ್ರೆಗಳ ಮೇಲಿನ ಅವಲಂಬನೆಯನ್ನು ಆರ್‌ಕೆಎಂ ಆಯುರ್ವೇದ ಆಸ್ಪತ್ರೆಯು ತಗ್ಗಿಸಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಡಾ.ಆರತಿ.ಡಿ ನೂತನ ಅಂತರ್ಜಾಲದಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ವಿಸ್ತ್ರತವಾಗಿ ಮಾಹಿತಿ ನೀಡಿದರು. ವಿಶೇಷ ಓಪಿಡಿ ಸೇವೆಯಾದ ಮನೋಆನಂದ ಸೇವೆಯ ಕುರಿತು ಪರಿಚಯಿಸಲಾಯಿತು. ಕಾರ್ಯಕ್ರಮದಲ್ಲಿ ಸುವರ್ಣ ಸಾಧಕಿ-2025 ಪ್ರಶಸ್ತಿ ಪುರಸ್ಕೃತ ಮೇಧಾ ಹಿರೇಮಠ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜು ಬಿಜ್ಜರಗಿ, ಪ್ರಶಾಂತ ಶೆಟ್ಟಿ, ಶಾಂತೇಶ ಕಳಸಗೊಂಡರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಕರ್ಪೂರಮಠ, ಪ್ರಾಚಾರ್ಯ ಡಾ.ಸದಾನಂದ ಜಿಗಜಿನ್ನಿ, ಉದ್ಯಮಿಗಳಾದ ರವೀಂದ್ರ ಬಿಜ್ಜರಗಿ, ಮಹಾಂತೇಶ ಬಿಜ್ಜರಗಿ, ಉದಯಕುಮಾರ ಮತ್ತಿತರರು ಉಪಸ್ಥಿತರಿದ್ದರು.