ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಯಂತ್ರ ಕಲಿಕಾ ವಿಭಾಗದ ವತಿಯಿಂದ ರಾಷ್ಟ್ರೀಯ ಮಟ್ಟದ ೨೪ ಗಂಟೆಗಳ ಕಲ್ಪ ಎಐಥಾನ್-೨.೦ ಹ್ಯಾಕಥಾನ್ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನಡೆಯಿತು.
ಕನ್ನಡಪ್ರಭ ವಾರ್ತೆ ತಿಪಟೂರು
ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಯಂತ್ರ ಕಲಿಕಾ ವಿಭಾಗದ ವತಿಯಿಂದ ರಾಷ್ಟ್ರೀಯ ಮಟ್ಟದ ೨೪ ಗಂಟೆಗಳ ಕಲ್ಪ ಎಐಥಾನ್-೨.೦ ಹ್ಯಾಕಥಾನ್ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು ೪೫ ಮಹಾವಿದ್ಯಾಲಯಗಳ ೨೮೦ ಸ್ಪರ್ಧಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ, ತಾಂತ್ರಿಕ ಜ್ಞಾನ ಹಾಗೂ ನವೀನ ಚಿಂತನೆಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೀನಿಯರ್ ಸಾಫ್ಟೇರ್ ಎಂಜಿನಿಯರ್ ಕೀರ್ತಿ ಬಿಲ್ವರಾಜ್ ಅವರು ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ. ಹೊಸ ಆವಿಷ್ಕಾರಗಳತ್ತ ಹೆಜ್ಜೆ ಇಡಲು ಇರುವ ಅವಕಾಶಗಳು ಹಾಗೂ ಅನುಕೂಲಗಳ ಬಗ್ಗೆ ತಿಳಿಸಿ ಅವುಗಳನ್ನು ಬಳಸಿಕೊಂಡು ಬೆಳೆಯಬೇಕು ಎಂದು ಪ್ರೇರೇಪಿಸಿದರು. ಕೋರ್ಸ್ ೫ ಇಂಟಲಿಜೆನ್ಸ್ ಟೆಕ್ನಾಲಜೀಸ್ ಅಸೋಸಿಯೇಟ್ ಮ್ಯಾನೇಜರ್ ಗಂಗಾಧರ್ ಎಸ್. ಅವರು ಉದ್ಯಮ ಕ್ಷೇತ್ರದ ಅವಶ್ಯಕತೆಗಳು ಹಾಗೂ ತಂತ್ರಜ್ಞಾನದ ಭವಿಷ್ಯದ ಕುರಿತು ವಿದ್ಯಾರ್ಥಿಗಳಿಗೆ ಅಮೂಲ್ಯ ಮಾಹಿತಿಯನ್ನು ಹಂಚಿಕೊಂಡರು. ಕೆಐಟಿ ಪ್ರಾಂಶುಪಾಲ ಡಾ.ಎಚ್.ಸಿ. ಸತೀಶ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಪಿ.ಕೆ.ತಿಪ್ಪೇರುದ್ರಪ್ಪ ವಹಿಸಿದ್ದರು. ಗೌರವ ಅತಿಥಿಗಳಾಗಿ ಕೆ.ವಿ.ಎಸ್. ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು, ಟಿ.ಎಸ್. ಬಸವರಾಜು, ಬಿ.ಎಸ್. ಉಮೇಶ್, ದೀಪಕ್ ಜಿ.ಪಿ., ಕಾರ್ಯದರ್ಶಿಗಳಾದ ಎಂ.ಆರ್. ಸಂಗಮೇಶ್, ಜಿ.ಎಸ್. ಉಮಾಶಂಕರ್, ಸುಧಾಕರ್ ಎಚ್.ಜಿ., ಟಿ.ಯು.ಜಗದೀಶಮೂರ್ತಿ ಮತ್ತು ಖಜಾಂಚಿಗಳಾದ ಟಿ.ಎಸ್. ಶಿವಪ್ರಸಾದ್ ಇವರು ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ತಂಡಗಳಿಗೆ ನಗದು ಬಹುಮಾನಗಳನ್ನು ವಿತರಿಸಲಾಯಿತು. ಪ್ರಥಮ ಬಹುಮಾನ ರೂ.ಹದಿನೈದು ಸಾವಿರಗಳನ್ನು ಬೆಂಗಳೂರು ಇನ್ಸಟಿಟ್ಯೂಟ್ ಆಫ್ ಟೆಕ್ನಾಲಜಿ ಪಡೆದುಕೊಂಡಿತು. ದ್ವಿತೀಯ ಬಹುಮಾನ ರು.ಹತ್ತು ಸಾವಿರಗಳನ್ನು ಶಿವಮೊಗ್ಗದ ಜೆ.ಎನ್.ಎನ್.ಸಿ.ಇ. ಪಡೆದುಕೊಂಡಿತು, ತೃತೀಯ ಬಹುಮಾನ ರು. ಏಳುಸಾವಿರಗಳನ್ನು ಬೆಂಗಳೂರು ಆರ್.ಎನ್.ಎಸ್.ಐ.ಟಿ. ಪಡೆದುಕೊಂಡಿತು, ಸಮಾಧಾನಕರ ಬಹುಮಾನಗಳನ್ನು ಬೆಂಗಳೂರಿನ ಆರ್.ಎನ್.ಎಸ್.ಐ.ಟಿ., ಆರ್.ವಿ.ಸಿ.ಇ. ಹಾಗೂ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ ತಂಡಗಳು ಪಡೆದುಕೊಂಡವು. ಮಹಾವಿದ್ಯಾಲಯದ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದ ಸಕ್ರಿಯ ಸಹಕಾರದಿಂದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.ಕಾರ್ಯಕ್ರಮದ ಸಂಚಾಲಕರಾದ ಡಾ. ರವಿಪ್ರಕಾಶ್ ಎಂ.ಎಲ್. ಅವರು ಸಮಗ್ರ ಯೋಜನೆ, ಶ್ರಮ ಹಾಗೂ ನಾಯಕತ್ವದ ಮೂಲಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿ ಯಶಸಿನತ್ತ ಕೊಂಡೊಯ್ದರು. ಕಲ್ಪಎಐಥಾನ್-೨.೦ ಕೇವಲ ಸ್ಪರ್ಧೆಯಲ್ಲದೆ ವಿದ್ಯಾರ್ಥಿಗಳ ಕನಸುಗಳಿಗೆ ದಾರಿ ತೋರಿದ ನವೋತ್ಸಾಹದ ಹಬ್ಬವಾಗಿ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿಯುವಂತೆ ನಡೆಯಿತು. ಎಐ ಅಂಡ್ ಎಂಎಲ್ ವಿಭಾಗದ ಮಾಸಪತ್ರಿಕೆ ಕಲ್ಪ-ಎಐ-ಪತ್ರಿಕಾ ಹಾಗೂ ಕಲ್ಪ-ಎಐ-ಸಿರೀಸ್, ಸಂಪುಟ-೧, ಸಂಚಿಕೆ-೧ ಅನ್ನು ಭವ್ಯ ಕಾರ್ಯಕ್ರಮವಾದ ಕಲ್ಪಎಐಥಾನ್-೨.೦ ಸಂದರ್ಭದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.