ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಸವಣೂರು ಉಪ ವಿಭಾಗಾಧಿಕಾರಿಗಳ ಜೊತೆ ಸಭೆ ನಡೆಸಿ, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ಶ್ರೀನಿವಾಸ ಮಾನೆ ತಾಲೂಕಾ ಮಟ್ಟದ ಪ್ರಮುಖ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಸೇರಿದಂತೆ ತಾಲೂಕಾ ಮಟ್ಟದ ಪ್ರಮುಖ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಈ ಬಾರಿ ಮಳೆಯ ಕೊರತೆಯ ಕಾರಣ ಬೇಸಿಗೆ ಆರಂಭಕ್ಕೆ ಮೊದಲೇ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅಂತರ್ಜಲದ ಸಂರಕ್ಷಣೆ, ನೀರಿನ ಅಪವ್ಯಯ ತಡೆಗೆ ಮುಂದಾಗಬೇಕಿದೆ. ಸಮುದಾಯದಲ್ಲಿ ಜಾಗೃತಿ ಮೂಡಿಸಿ, ಸಮಸ್ಯೆ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದ್ದು, ಈ ವಿಷಯದಲ್ಲಿ ನಿಷ್ಕಾಳಜಿ ಬೇಡ ಎಂದರು.
ಮಳೆಯ ಕೊರತೆ ವಿದ್ಯುತ್ ಉತ್ಪಾದನೆ ಮೇಲೆ ಸಹ ಪ್ರತಿಕೂಲ ಪರಿಣಾಮ ಉಂಟು ಮಾಡಿದ್ದು, ವಿದ್ಯುತ್ ಕ್ಷಾಮ ಈಗಲೇ ತಲೆದೋರಿದೆ. ಶೇ. 40ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಕುಸಿತ ಕಂಡಿದೆ. ವಿದ್ಯುತ್ ಅಭಾವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅವಶ್ಯಕತೆಗೆ ತಕ್ಕಂತೆ ವಿದ್ಯುತ್ ಬಳಸುವಂತೆ ತಿಳಿವಳಿಕೆ ಹೇಳಬೇಕಿದೆ ಎಂದರು.ಪುರಸಭೆ ಹಾಗೂ ಗ್ರಾಪಂಗಳಲ್ಲಿ ಬಾಕಿ ತೆರಿಗೆ ವಸೂಲಾತಿಗೆ ಕ್ರಮ ಕೈಗೊಳ್ಳಬೇಕು. ತೆರಿಗೆ ವಸೂಲಿಯಲ್ಲಿ ನಿಗದಿತ ಗುರಿ ಸಾಧಿಸಿದರೆ ಸ್ಥಳೀಯ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ, ಬೀದಿದೀಪಗಳ ನಿರ್ವಹಣೆ, ಕಸ ವಿಲೇವಾರಿಗೆ ತೊಡಕಾಗದು. ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಜಗದೀಶ ಹಾಗೂ ತಾಪಂ ಇಒ ದೇವರಾಜ್ ಅವರಿಗೆ ಶಾಸಕ ಮಾನೆ ಸೂಚಿಸಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರ ಮಿತಿ ಹೆಚ್ಚಿಸುವ ಮೂಲಕ ಕಾರ್ಮಿಕರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಬೇಕು. ಪಹಣಿ ತಿದ್ದುಪಡಿ ಪ್ರಕರಣ ಹೊತ್ತು ರೈತರು ತಹಸೀಲ್ದಾರ್ ಕಚೇರಿಗೆ ಅಲೆಯುವಂತಾಗಿದೆ. ವಿಶೇಷ ಅಭಿಯಾನ ನಡೆಸಿ ಆದ್ಯತೆಯ ಮೇರೆಗೆ ಪಹಣಿ ತಿದ್ದುಪಡಿ ಪ್ರಕರಣ ಇತ್ಯರ್ಥಗೊಳಿಸಬೇಕು. ಜನಸಾಮಾನ್ಯರಿಗೆ ಅನುಕೂಲವಾಗಲು ಹಾನಗಲ್ ನಗರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸವಣೂರು ಉಪ ವಿಭಾಗಾಧಿಕಾರಿ ಮಹ್ಮದ್ ಖಿಜರ್, ತಹಸೀಲ್ದಾರ್ ರವಿಕುಮಾರ ಕೊರವರ, ತಾಪಂ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸಿ.ಎಸ್. ನೆಗಳೂರ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಎಇಇ ಪ್ರಹ್ಲಾದ್ ಶೆಟ್ಟಿ ಈ ಸಂದರ್ಭದಲ್ಲಿದ್ದರು.