ವೃದ್ಧ ಪೋಷಕರನ್ನು ಕಡೆಗಣಿಸದೆ ಕಾಳಜಿ ವಹಿಸಿ

| Published : Oct 12 2025, 01:00 AM IST

ಸಾರಾಂಶ

ಯುವಜನರು ಸಂಪಾದನೆಯ ಬೇಟೆಗೆ ಬಿದ್ದು ಊರು ತೊರೆದು ನಗರಗಳಿಗೆ ವಲಸೆ ಹೋಗಿ ವೃದ್ಧರನ್ನು ಅನಾಥಾಶ್ರಮಗಳಿಗೆ ಸೇರಿಸುವುದು ಹೆಚ್ಚುತ್ತಿದೆ. ಹಿರಿಯ ನಾಗರಿಕರು ದೌರ್ಜನ್ಯ ಅಥವಾ ಅನ್ಯಾಯದ ವಿರುದ್ಧ ಉಚಿತ ಸಹಾಯವಾಣಿಗೆ 1090 ಮೂಲಕ ನೆರವನ್ನು ಪಡೆಯಬಹುದು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಕ್ಕಳಿಗಾಗಿ ತಮ್ಮಿಡೀ ಜೀವನ ಮೀಸಲಿಟ್ಟು ವೃದ್ಧರಾದ ತಂದೆ ತಾಯಿ ಸೇರಿದಂತೆ ಎಲ್ಲ ಹಿರಿಯ ನಾಗರಿಕರಿಗೆ ಪ್ರೀತಿ, ಗೌರವ, ಕಾಳಜಿ ತೋರಿ ಸೇವೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್ ರಮೇಶ್ ಅವರು ತಿಳಿಸಿದರು. ಸ‌ರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಗೆ ಅವರು ಚಾಲನೆ ನೀಡಿ ಅವರು ಮಾತನಾಡಿ, ವಿವಿಧ ಇಲಾಖೆಗಳಿಂದ ಹಿರಿಯ ನಾಗರಿಕರಿಗೆ ಮತ್ತು ವಿಕಲಚೇತನರಿಗೆ ದೊರೆಯಬೇಕಾದ ಸೌಲಭ್ಯಗಳು ಅವರಿಗೆ ತಲುಪುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಉಚಿತ ಸಹಾಯವಾಣಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ ಮಾತನಾಡಿ, ಯುವಜನರು ಸಂಪಾದನೆಯ ಬೇಟೆಗೆ ಬಿದ್ದು ಊರು ತೊರೆದು ನಗರಗಳಿಗೆ ವಲಸೆ ಹೋಗಿ ವೃದ್ಧರನ್ನು ಅನಾಥಾಶ್ರಮಗಳಿಗೆ ಸೇರಿಸುವುದು ಹೆಚ್ಚುತ್ತಿದೆ. ಹಿರಿಯ ನಾಗರಿಕರು ದೌರ್ಜನ್ಯ ಅಥವಾ ಅನ್ಯಾಯದ ವಿರುದ್ಧ ಉಚಿತ ಸಹಾಯವಾಣಿಗೆ 1090 ಮೂಲಕ ನೆರವನ್ನು ಪಡೆಯಬಹುದು ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜ್ಯೋತಿ ಲಕ್ಷ್ಮಿ, ಜಿಪಂ ಸಹಾಯಕ ಕಾರ್ಯದರ್ಶಿ ಮುನಿರಾಜು, ಜಿಲ್ಲಾ ಹಿರಿಯ ನಾಗರೀಕರ ವೇದಿಕೆಯ ಅಧ್ಯಕ್ಷ ತಿರುಮಲಪ್ಪ, ಶಿಡ್ಲಘಟ್ಟ ಆಶಾಕಿರಣ ಅಂಗವಿಕಲ ಶಾಲೆಯ ಅಧ್ಯಕ್ಷ ಗೋಪಾಲ್ ಉಪಸ್ಥಿತರಿದ್ದರು.