ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬೇಸಿಗೆ ಸಮೀಪಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಲಭ್ಯತೆಗೆ ಕೊರತೆಯಾಗದಂತೆ ಸಮರ್ಪಕ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿ ಜನವರಿಯಿಂದ ಇದುವರೆಗೆ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾಗಿದ್ದು, ಕುಡಿಯುವ ನೀರಿನ ಅಭಾವ ಉಂಟಾಗುವ ಸಂಭವವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಪಟ್ಟಿ ಮಾಡಿ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನೀರಿನ ಲಭ್ಯತೆ ಪರಿಶೀಲಿಸಿ ಬೋರೆವೆಲ್ ಕೊರೆಸುವ ವ್ಯವಸ್ಥೆ ಮಾಡಬೇಕು. ಅಗತ್ಯವಿದ್ದರೆ ಸ್ಥಳೀಯ ಪಂಚಾಯಿತಿ ವತಿಯಿಂದ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆಗೆ ಮುಂದಾಗುವಂತೆ ಜಿಲ್ಲಾಧಿಕಾರಿ ಸೂಚಿಸಿದರು.ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಎಲ್ಲಾ ವಾರ್ಡ್ಗಳಲ್ಲಿ ಶುದ್ಧ ಕುಡಿಯುವ ನೀರಿನ (ಆರ್.ಒ ಪ್ಲಾಂಟ್) ಕೇಂದ್ರಗಳ ನೀರಿನ ಶುದ್ದತೆಗಾಗಿ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಬೇಕು. ಅಂಗನವಾಡಿ, ಶಾಲೆ, ವಿದ್ಯಾರ್ಥಿನಿಲಯಗಳಲ್ಲಿ ಕುಡಿಯುವ ನೀರಿನ ಶುದ್ದತೆ ಬಗ್ಗೆ ಪರಿಶೀಲಿಸಬೇಕು. ಎಲ್ಲಾ ಗ್ರಾಮಗಳಲ್ಲಿರುವ ಒವರ್‌ಹೆಡ್ ಟ್ಯಾಂಕ್‌ಗಳ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಈ ಬಗ್ಗೆ ಕಂದಾಯಾಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಂಬಂಧಿತ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ ಬಿಸಿಲಿನ ತಾಪ (ಹಿಟ್ ವೇವ್) ಹೆಚ್ಚಾಗಿರುವುದರಿಂದ ಮಕ್ಕಳು, ಹಿರಿಯ ನಾಗರಿಕರು, ಆರೋಗ್ಯ ತೊಂದರೆಯಿಂದ ಬಳಲುತ್ತಿರುವವರು ಮಧ್ಯಾಹ್ನದ ಸಮಯದಲ್ಲಿ ಹೊರಗೆ ಬರುವುದನ್ನು ಕಡಿಮೆ ಮಾಡಬೇಕು. ಬಾಯಾರಿಕೆ ಇರಲಿ, ಇಲ್ಲದಿರಲಿ ಪ್ರತಿದಿನ 3 ಲೀಟರ್ ನೀರು ಕುಡಿಯಬೇಕು. ಬಿಸಿಲಿನ ತಾಪದಿಂದ (ಹಿಟ್ ವೇವ್) ರಕ್ಷಣೆ ಪಡೆಯಲು ಜನರಿಗೆ ಸಲಹೆ ನೀಡಬೇಕು. ನರೇಗಾ ಯೋಜನೆಯಡಿ ಕೆಲಸ ಮಾಡುವವರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ಕಟ್ಟಡ ಹಾಗೂ ಇಟ್ಟಿಗೆ ಕಾರ್ಮಿಕರು ಆದಷ್ಟೂ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಬೇಕು. ಪಕ್ಷಿಗಳು ನೀರು ಕುಡಿಯಲು ಅನುಕೂಲವಾಗುವಂತೆ ಸಾರ್ವಜನಿಕರು ತಮ್ಮ ಮನೆಯ ಮೇಲ್ಭಾಗದಲ್ಲಿ ಹಾಗೂ ನೌಕರರು ಸರ್ಕಾರಿ ಕಟ್ಟಡಗಳ ಮೇಲೆ ಮಣ್ಣಿನ ಟಬ್, ಮಡಿಕೆ, ಪಾತ್ರೆಗಳಲ್ಲಿ ನೀರು ತುಂಬಿಸಿಡಬೇಕು ಎಂದು ತಿಳಿಸಿದರು.ಜಾನುವಾರುಗಳಿಗೆ ಮೇವಿಗೆ ಕೊರತೆಯಾಗದಂತೆ ಪಶುಪಾಲನಾ ಇಲಾಖೆ ಮೇವು ಬ್ಯಾಂಕ್ ತೆರೆಯಲು ಮುಂದಾಗಬೇಕು. ಗೋಶಾಲೆಗಳಿಗೆ ಸಮರ್ಪಕವಾಗಿ ಮೇವು ಪೂರೈಕೆ ಮಾಡಬೇಕು. ಹನೂರು ಭಾಗದ ಪಶುಪಾಲನಾ ಅಧಿಕಾರಿಗಳು ಟಾಸ್ಕ್ ಪೋರ್ಸ್ ಸಭೆ ನಡೆಸಿ ಮೇವಿನ ಕಿಟ್ ತಲುಪಿರುವ ಬಗ್ಗೆ ಅಧಿಕಾರಿಗಳು ಖಾತರಿಪಡಿಸಿಕೊಳ್ಳಬೇಕು. ಅಗತ್ಯವಿರುವೆಡೆ ಮೇವಿನ ಕಿರುಪೊಟ್ಟಣಗಳನ್ನು ಪೂರೈಸಬೇಕು ಎಂದ ಜಿಲ್ಲಾಧಿಕಾರಿಯವರು ಕಳೆದ ಬಾರಿ ದನಗಳು ಪ್ಲಾಸ್ಟಿಕ್ ತಿಂದು ಸಾವಿಗೀಡಾದ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಚಾಮರಾಜನಗರ ಪಟ್ಟಣ ವ್ಯಾಪ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಪ್ಲಾಂಟ್‌ಗಳನ್ನು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಪಟ್ಟಣದ ಹಲವೆಡೆ ಚರಂಡಿಗಳಲ್ಲಿ ಕಟ್ಟಿಕೊಂಡಿರುವ ಕಸ ತೆರವುಗೊಳಿಸಬೇಕು. ಗುಂಡ್ಲುಪೇಟೆ ರಸ್ತೆ ಹಾಗೂ ಅಂಚೆಕಚೇರಿ ಮುಂಭಾಗ ರಸ್ತೆಬದಿಯಲ್ಲಿ ಕಸ ಸಂಗ್ರಹಣೆಯಾಗಿದ್ದು, 2ರಿಂದ 3 ದಿನದೊಳಗೆ ಸ್ವಚ್ಚಗೊಳಿಸಬೇಕು. ಅಲ್ಲದೆ ಪೌಲ್ಟ್ರಿ ಫಾರಂಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಸಂಬಂಧಪಟ್ಟವರಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತ, ಜಿಪಂ ಸಿಇಒ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಅಬೀದ್, ನಗರಾಭಿವೃದ್ಧಿ ಕೋಶದ ಯೋಜನಾ ನಿದೇಶಕರಾದ ಎಂ.ವಿ. ಸುಧಾ, ನಗರಸಭೆ ಪೌರಾಯುಕ್ತ ಎಸ್. ರಾಮದಾಸ್, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.