ಸಾರಾಂಶ
ಹುಬ್ಬಳ್ಳಿ: ನಗರದಲ್ಲಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಪ್ರತಿಯೊಬ್ಬರೂ ಸ್ವಚ್ಛತೆಗೆ, ಬೀದಿದೀಪ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗಣೇಶೋತ್ಸವ ಹಿನ್ನೆಲೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿ ಮಾತನಾಡಿದರು.ನಗರ ಸ್ವಚ್ಛತೆ ಕೆಲಸ ಆದ್ಯತೆಯ ಮೇರೆಗೆ ಆಗಬೇಕು. 11 ದಿನಗಳ ವರೆಗೆ ಪ್ರತಿಷ್ಠಾಪಿಸಲ್ಪಡುವ ಗಣೇಶೋತ್ಸವ ಮಹಾಮಂಡಳಗಳು ನಿತ್ಯ ಅನ್ನ ಸಂತರ್ಪಣೆ ಆಯೋಜಿಸಿರುತ್ತವೆ. ಅಲ್ಲಿ ಯಾವುದೇ ರೀತಿಯ ಅವ್ಯವಸ್ಥೆಯಾಗದಂತೆ, ಅಗತ್ಯ ಸ್ವಚ್ಛತೆ ಕಾಪಾಡಿಕೊಳ್ಳಲು ಕ್ರಮ ವಹಿಸಬೇಕು ಎಂದರು.ಕೆಲವು ಬಡಾವಣೆಗಳಲ್ಲಿ ಬೀದಿ ದೀಪಗಳೇ ಇಲ್ಲ. ಹಬ್ಬದ ಸಂದರ್ಭದಲ್ಲಿ ಬೀದಿ ದೀಪಗಳು ಇಲ್ಲದಿದ್ದರೆ ಅಹಿತಕರ ಘಟನೆಗೆ ಕಾರಣವಾಗುತ್ತದೆ. ಎಲ್ಲೆಡೆ ಬೀದಿ ದೀಪಗಳು ಸಮರ್ಪಕವಾಗಿ ಇರುವಂತೆ ಹಾಗೂ ತ್ವರಿತವಾಗಿ ನಿರ್ವಹಣೆ ಕೈಗೊಳ್ಳಲು ಅಧಿಕಾರಿಗಳು ಕ್ರಮ ವಹಿಸಬೇಕು. ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಸುಧಾರಿಸಬೇಕು. ಪ್ರತಿ 6-8 ದಿನಗಳಿಗೊಮ್ಮೆ ನೀರು ಪೂರೈಸುತ್ತಿರುವ ಬಡಾವಣೆಗಳಲ್ಲಿ ಪ್ರತಿ 5-6 ದಿನಗಳಿಗೊಮ್ಮೆ ನೀರು ಪೂರೈಸಲು ಹಾಗೂ ತಗ್ಗು ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದರು.
ಗಣೇಶೋತ್ಸವದ ವೇಳೆ ಡಿಜೆ ಹಚ್ಚುವ ಪದ್ಧತಿ ಹಲವು ವರ್ಷಗಳಿಂದ ಜಾರಿಯಲ್ಲಿತ್ತು. ಆದರೆ, ನ್ಯಾಯಾಲಯದ ಆದೇಶದಂತೆ ಅದಕ್ಕೆ ಈಗ ಅವಕಾಶವಿಲ್ಲ. ಡೊಳ್ಳು, ಜಗ್ಗಲಿಗೆ, ಝಾಂಜ್ ಇತ್ಯಾದಿ ವಾದ್ಯಗಳಿಗೆ ಯಾವುದೇ ನಿರ್ಬಂಧ ಇಲ್ಲ. ಇವುಗಳಿಗೆ ಸಮಯ ಮೀತಿ ಹಾಕದೆ ಬಳಕೆಗೆ ಮುಕ್ತ ಅವಕಾಶ ಕಲ್ಪಿಸುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡುವುದಾಗಿ ತಿಳಿಸಿದರು.ಈ ವೇಳೆ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ ಮಾತನಾಡಿ, ಗಣೇಶ ವಿಸರ್ಜನಾ ಮೆರವಣಿಗೆ ಮಾರ್ಗದಲ್ಲಿ ಇರುವ ಅಪಾಯಕಾರಿ ಮರಗಳನ್ನು ಕಡಿಯುವ ವಿಷಯದಲ್ಲಿ ಟೆಂಡರ್, ಇತ್ಯಾದಿ ಎಂದು ಸಮಯ ವ್ಯರ್ಥ ಮಾಡಬಾರದು. ಅರಣ್ಯ ಇಲಾಖೆ ಹಾಗೂ ಪಾಲಿಕೆ ಸಮನ್ವಯದಿಂದ ಕೆಲಸ ಮಾಡಬೇಕು ಎಂದರು.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವ ಸಮಿತಿಗಳಿಗೆ ಪರವಾನಗಿ ನೀಡಲು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ಅವಳಿ ನಗರದಲ್ಲಿ 200 ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 18 ಡ್ರೋಣ್ ಕ್ಯಾಮೆರಾ ಕಣ್ಣಾವಲು ಇರಲಿದೆ ಎಂದು ಮಾಹಿತಿ ನೀಡಿದರು.ಬಂದೋಬಸ್ತ್‌ಗೆ ಕ್ರಮ
ಎಸಿಪಿ ಉಮೇಶ ಚಿಕ್ಕಮಠ ಮಾತನಾಡಿ, ಹುಬ್ಬಳ್ಳಿಯ ಗಣೇಶೋತ್ಸವ ವೀಕ್ಷಣೆಗೆ ಹೊರ ಜಿಲ್ಲೆಗಳಿಂದ ಸಾಕಷ್ಟು ಜನ ನಗರಕ್ಕೆ ಆಗಮಿಸುವುದರಿಂದ ಬಂದೋಬಸ್ತ್‌ಗಾಗಿ 500 ಹೋಮ್ ಗಾರ್ಡ್ಸ್ ಹಾಗೂ ಬೇರೆ ಜಿಲ್ಲೆಗಳಿಂದ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಡ್ರೋಣ ಕ್ಯಾಮೆರಾ ಕಣ್ಣಾವಲು ವ್ಯವಸ್ಥೆಯ ಮಾನಿಟರಿಂಗ್ ಸಮೀಪದ ಪೊಲೀಸ್ ಠಾಣೆಯಲ್ಲಿ ಆಗಲಿದೆ. ಈಗಾಗಲೇ ಗಣೇಶೋತ್ಸವ ಸಮಿತಿಗಳ ಸಭೆ ಕರೆದು ಸೂಚನೆ ನೀಡಲಾಗಿದೆ. ಮೂರು ಸಾವಿರ ಮಠದ ಮೈದಾನ ಮತ್ತು ನೆಹರು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವ ಯೋಜನೆ ಇದೆ ಎಂದರು.ಈ ವೇಳೆ ಉಪ ಮೇಯರ್ ದುರ್ಗಮ್ಮ ಬಿಜವಾಡ, ಮಾಜಿ ಮೇಯರ್ ವೀರಣ್ಣ ಸವಡಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಎಸ್. ವಿಜಯಕುಮಾರ್, ವಿಠಲ ತುಬಾಕೆ, ಎಸ್.ಎನ್. ಗಣಾಚಾರಿ, ಸಂತೋಷ ಯರಂಗಳಿ, ಸಹಾಯಕ ಆಯುಕ್ತರಾದ ಎಂ.ಬಿ. ಸಬರದ, ಗಿರೀಶ ತಳವಾರ, ರಮೇಶ ನೂಲ್ವಿ, ಹೆಸ್ಕಾಂ ಎಇಇ ವಿಶ್ವನಾಥ ಶಿರಹಟ್ಟಿಮಠ, ಆರ್‌ಎಫ್‌ಒ ಮಹಾದೇವ ರಾಯನಗೌಡ್ರ ಸೇರಿದಂತೆ ಹಲವರಿದ್ದರು.