ಸಾರಾಂಶ
ಮಳೆಯಿಂದ ಯಾವುದೇ ರೀತಿ ಹಾನಿ ಉಂಟಾದರೆ ತಕ್ಷಣವೇ ಕ್ರಮ ವಹಿಸಬೇಕು. ನಂತರ ಈ ಬಗ್ಗೆ ವರದಿಯನ್ನು ನೀಡಬೇಕೆಂದು ವಿಪತ್ತು ನಿರ್ವಹಣಾ ನೋಡಲ್ ಅಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ.ಸೌದಾಗರ ಹೇಳಿದರು.
ಬಸವನಬಾಗೇವಾಡಿ : ಎಲ್ಲ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆಯಿಂದ ಯಾವುದೇ ರೀತಿ ಹಾನಿ ಉಂಟಾದರೆ ತಕ್ಷಣವೇ ಕ್ರಮ ವಹಿಸಬೇಕು. ನಂತರ ಈ ಬಗ್ಗೆ ವರದಿಯನ್ನು ನೀಡಬೇಕೆಂದು ವಿಪತ್ತು ನಿರ್ವಹಣಾ ನೋಡಲ್ ಅಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ.ಸೌದಾಗರ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಜರುಗಿದ ಪ್ರವಾಹ ಹಾಗೂ ಅತಿವೃಷ್ಟಿ ಕಾರ್ಯನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮಳೆಯಿಂದಾಗುವ ಪ್ರವಾಹ, ಅತಿವೃಷ್ಟಿ ಸೇರಿದಂತೆ ವಿವಿಧ ರೀತಿಯ ಹಾನಿ ಕುರಿತು ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿಪತ್ತು ನಿರ್ವಹಣಾ ಕುರಿತಂತೆ 24 ಗಂಟೆ ಕಾಲ ನಿರಂತರ ದೂರವಾಣಿ ಕೇಂದ್ರವನ್ನು ಜನರ ಸಂಪರ್ಕಿಸಲು ಚಾಲನೆಯಲ್ಲಿ ಇಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಾಡಳಿತ ಡೋಣಿ ನದಿ ದಂಡೆಯಲ್ಲಿರುವ ಜನವಸತಿ ಹಾಗೂ ಜಾನುವಾರುಗಳ ಶೆಡ್ ಇದ್ದಲ್ಲಿ ಆದ್ಯತೆ ಮೇರೆಗೆ ಅವುಗಳನ್ನು ತೆರವುಗೊಳಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು. ಪಶುವೈದ್ಯಾಧಿಕಾರಿಗಳು ಜಾನುವಾರುಗಳಲ್ಲಿ ಹರಡುವ ರೋಗಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಅವುಗಳಿಗೆ ಅಗತ್ಯ ಔಷಧೋಪಚಾರ ಮಾಡುವ ಮೂಲಕ ಜಾನುವಾರುಗಳಿಗೆ ರೋಗ ಬಾರದಂತೆ ನೋಡಿಕೊಳ್ಳಬೇಕು ಎಂದು ಪಶು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತ ಬಾಂಧವರು ತಮ್ಮ ಬಿತ್ತನೆ ಮಾಡಿದ ಬೆಳೆಗಳಿಗೆ ವಿಮೆಯನ್ನು ಕಡ್ಡಾಯವಾಗಿ ಮಾಡುವಂತೆ ಜಾಗೃತಿ ಮೂಡಿಸಬೇಕು. ಈ ಕುರಿತು ಪ್ರತಿ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.ರೇಷ್ಮೆ ಇಲಾಖೆಯ ವಿಸ್ತೀರ್ಣಾಧಿಕಾರಿಗಳು ಈ ಭಾಗದಲ್ಲಿ ಹೆಚ್ಚು ರೇಷ್ಮೆ ಬೆಳೆಯುವಂತೆ ಅರಿವು ಮೂಡಿಸಲು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ರೇಷ್ಮೆ ಬೆಳೆಯು ಹೆಚ್ಚು ಪ್ರಮಾಣದಲ್ಲಿ ಬೆಳೆಯುವಂತೆ ಮಾಡುವ ಮೂಲಕ ರೈತರು ಆರ್ಥಿಕವಾಗಿ ಸಬಲರಾಗುವಂತೆ ತಿಳಿಸುವಂತೆ ಹೇಳಿದರು.
ಸಭೆಯಲ್ಲಿ ವಿವಿಧ ಇಲಾಖೆಗಳು ಪ್ರವಾಹ, ಅತಿವೃಷ್ಟಿ ಕುರಿತು ಹಮ್ಮಿಕೊಂಡಿರುವ ಕಾರ್ಯಗಳ ಕುರಿತು ಪರಿಶೀಲನೆ ಮಾಡಿದರು. ಸಭೆಯಲ್ಲಿ ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಇದ್ದರು.