ಕಟ್ಟಡ ಪರವಾನಗಿ ನೀಡಲು ಅಗತ್ಯ ಕ್ರಮ ಕೈಗೊಳ್ಳಿ-ಶಾಸಕ ಶಿವಣ್ಣನವರ

| Published : Sep 04 2024, 01:55 AM IST

ಕಟ್ಟಡ ಪರವಾನಗಿ ನೀಡಲು ಅಗತ್ಯ ಕ್ರಮ ಕೈಗೊಳ್ಳಿ-ಶಾಸಕ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಕಟ್ಟಡ ಪರವಾನಗಿ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಜರುಗಿಸುವಂತೆ ಶಾಸಕ ಬಸವರಾಜ ಶಿವಣ್ಣನವರ ಪುರಸಭೆ ಹಾಗೂ ನಗರ ಯೋಜನಾ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ ಘಟನೆ ಮಂಗಳವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಜರುಗಿತು.

ಬ್ಯಾಡಗಿ: ಕಟ್ಟಡ ಪರವಾನಗಿ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಜರುಗಿಸುವಂತೆ ಶಾಸಕ ಬಸವರಾಜ ಶಿವಣ್ಣನವರ ಪುರಸಭೆ ಹಾಗೂ ನಗರ ಯೋಜನಾ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ ಘಟನೆ ಮಂಗಳವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಜರುಗಿತು.

ನಗರ ಯೋಜನಾ ಇಲಾಖೆ ಅನುಮೋದನೆ ಪಡೆಯದಿರುವ ಕೆಲ ಬಡಾವಣೆಗಳಿಗೆ (ಲೇಔಟ್) ಅನಧಿಕೃತ ಎಂಬ ಹಣೆ ಪಟ್ಟಿ ಕಟ್ಟುವುದನ್ನು ಅಧಿಕಾರಿಗಳು ನಿಲ್ಲಿಸಬೇಕು, ಇದರಿಂದ ಲಕ್ಷಗಟ್ಟಲೇ ಹಣಕೊಟ್ಟು ಪಡೆದ ನಿವೇಶನದ ಮಾಲೀಕರು ಭಯಭೀತರಾಗಿದ್ದಾರೆ, ಸ್ವಂತ ಖಾತೆ ಕಬ್ಜಾಸಹಿತ, ಪುರಸಭೆಗೆ ತೆರಿಗೆ ಪಾವತಿ ಮಾಡಿದ ನೀವೇಶನಗಳ ಮಾಲೀಕರಿಗೆ ಕಟ್ಟಡ ಪರವಾನಗಿ ನೀಡುತ್ತಿಲ್ಲ, ಕೂಡಲೇ ಇಂತಹ ಎಲ್ಲಾ ಪ್ರಕ್ರಿಯೆಗಳನ್ನು ನಿಲ್ಲಿಸುವ ಮೂಲಕ ಕಟ್ಟಡ ಪರವಾನಗಿ ನೀಡಬೇಕು ಎಂದು ಸೂಚಿಸಿದರು.

ನೀವು ಮಾಡಿದ ತಪ್ಪಿಗೆ ಮಾಲೀಕರಿಗೇಕೆ ಶಿಕ್ಷೆ..?: ಬಹುತೇಕ ಲೇಔಟ್ ಮಾಲೀಕರು (ಡೆವಲಪ್ಪರ್ಸ್‌) ಈಗಾಗಲೇ ಎಲ್ಲ ನಿವೇಶನಗಳನ್ನು ಮಾರಾಟ ಮಾಡಿ ಕೈತೊಳೆದುಕೊಂಡಿದ್ದಾರೆ. ಇದೀಗ ಅನಧಿಕೃತ ಎಂಬ ಹಣೆಪಟ್ಟಿ ಕಟ್ಟುವುದು ಸರಿಯಾದ ಕ್ರಮವಲ್ಲ, ಹಾಗಿದ್ದರೇ ಅನಧೀಕೃತ ಲೇಔಟ್ ಪುರಸಭೆಯಲ್ಲಿ ಖಾತೆ ಆಗಿದ್ದಾದರೂ ಹೇಗೆ..? ಪ್ರತಿ ವರ್ಷ ತೆರಿಗೆ ವಸೂಲಿ ಮಾಡಿದ್ದೇಕೆ..? ನಿವೇಶನದಲ್ಲಿನ ಜನರಿಗೆ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್, ಯುಜಿಡಿ, ಇನ್ನಿತರ ಮೂಲ ಸೌಕರ್ಯಗಳನ್ನು ಪುರಸಭೆ ಕಲ್ಪಿಸಿದ್ದೇಕೆ..? ಲೇಔಟ್‌ಗಳಲ್ಲಿ ಶೇ.90 ರಷ್ಟು ಮನೆಗಳು ನಿರ್ಮಾಣವಾಗಿವೆ, ಆದರೆ ಅಳಿದುಳಿದ ಮೂರ್ನಾಲ್ಕು ಜನರಿಗೆ ಮನೆ ಕಟ್ಟಿಕೊಳ್ಳಲು ಅನುಮತಿ ನೀಡದೇ ಇರುವುದು ತಪ್ಪಲ್ಲವೇ..? ಅಷ್ಟಕ್ಕೂ ಅನಧೀಕೃತ ಲೇಔಟ್ ಗುರ್ತಿಸುವ ಕಾರ್ಯ ಇಲ್ಲಿಯವರೆಗೂ ಏತಕ್ಕಾಗಿ ನಡೆದಿಲ್ಲ..? ಪುರಸಭೆ ತಮ್ಮ ತಪ್ಪುಗಳನ್ನಿಟ್ಟುಕೊಂಡು ಕಟ್ಟಡ ಪರವಾನಗಿ ನೀಡದೇ ಇರುವುದು ಎಷ್ಟರಮಟ್ಟಿಗೆ ಸರಿ..? ಕಾರಣ ಹೇಳದೇ ಹಳೆಯ ಲೇಔಟ್ (ಕ್ರಮ ಕೈಗೊಳ್ಳಲು ಸಾಧ್ಯವಾಗದ) ಗಳಲ್ಲಿ ಕಟ್ಟಡ ಪರವಾನಗಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಟ್ಡಡ ಪರವಾನಗಿ ಮರು ಆದೇಶ ಮಾಡಿಸಿ: ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಸದಸ್ಯ ಬಸವರಾಜ ಛತ್ರದ, ಸರ್ಕಾರದ ಇತ್ತೀಚಿನ ಆದೇಶಗಳು ಪುರಸಭೆ ತನ್ನ ಕಾರ್ಯವ್ಯಾಪ್ತಿಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗದಂತೆ ಮಾಡಿವೆ, ಕಟ್ಟಡ ಪರವಾನಗಿ ಈ ಮೊದಲು ಪುರಸಭೆ ನೀಡುತ್ತಿತ್ತು. ಆದರೆ ಕಳೆದ ಜ. 2024ರಿಂದ ನಗರ ಯೋಜನಾ ಇಲಾಖೆಯಿಂದ ಕಟ್ಟಡ ಪರವಾನಗಿ ಪಡೆದುಕೊಳ್ಳುವಂತೆ ಸರ್ಕಾರ ಆದೇಶಿಸಿದೆ, ಹೀಗಾಗಿ ನಗರ ಯೋಜನಾ ಇಲಾಖೆಯಿಂದ ಉದ್ಭವಗೊಂಡ ಸಮಸ್ಯೆ ಇದಾಗಿದ್ದು, ಈಗಲೂ ಕಟ್ಟಡ ಪರವಾನಗಿ ನೀಡಲು ಪುರಸಭೆಗೆ ಅಧಿಕಾರ ನೀಡಿದ್ದೇ ಆದಲ್ಲಿ ಯಾವುದೇ ಕಾರಣಕ್ಕೂ ನಿವೇಶನ ಮಾಲೀಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಕೂಡಲೇ ಮಾನ್ಯ ಶಾಸಕರು ಆದೇಶವನ್ನು ತಿದ್ದುಪಡಿ ಮಾಡಿಸಿ ಮೊದಲಿನಂತೆ ಪುರಸಭೆ ಅಧಿಕಾರ ನೀಡುವಂತೆ ಮನವಿ ಮಾಡಿದರು.

ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಯುಜಿಡಿ ಅಧಿಕಾರಿಗಳು: ಶಾಸಕ ಶಿವಣ್ಣನವರ ಮಾತನಾಡಿ, ಕಳೆದ 2013 ರಲ್ಲಿ ಶಾಸಕನಾಗಿದ್ದ ಸಂದರ್ಭದಲ್ಲಿ ಎಡಿಬಿ (ಏಷ್ಯನ್ ಡೆವೆಲೆಪ್ ಮೆಂಟ್ ಬ್ಯಾಂಕ್) ಯಿಂದ ರು.66 ಕೋಟಿ ಸಾಲ ಮಾಡಿ ಪಟ್ಟಣದ ಜನತೆಗೆ ನಿರಂತರ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಯೋಜನೆಗೆ ಚಾಲನೆ ನೀಡಲಾಗಿತ್ತು, ಆದರೆ ಯುಜಿಡಿ ಅಧಿಕಾರಿಗಳ ತಪ್ಪಿನಿಂದ 10 ವರ್ಷದ ಬಳಿಕ ಮತ್ತೆ ಮರಳಿ ಶಾಸಕನಾದರೂ ಸಹ ಜನರಿಗೆ ಇಂದಿಗೂ ಯೋಜನೆ ತಲುಪಿಸಲು ಸಾಧ್ಯವಾಗಿಲ್ಲ, ಯುಜಿಡಿ ಅಧಿಕಾರಿಗಳಿಗೆ ಜನರ ಕೆಲಸ ಮಾಡಲು ಇಷ್ಟವಿಲ್ಲ ಏನು ಕೇಳಿದರೂ ಅದಕ್ಕೊಂದು ಸುಳ್ಳು ಸಿದ್ದಪಡಿಸಿಕೊಂಡಿರುತ್ತಾರೆ, ಹೀಗಾಗಿ ಜನರಿಂದ ನಮಗೆ ನಿಂದನೆಯೂ ತಪ್ಪಿಲ್ಲ ಮಾಡಿದ್ದ ಸಾಲಕ್ಕೆ ಬಡ್ಡಿ ಕಟ್ಟುವುದೂ ತಪ್ಪುತ್ತಿಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಅಂತರಾಷ್ಟ್ರೀಯ ಮಾರುಕಟ್ಟೆಗೆ ಕೊಳಚೆ ನೀರು: ಅಧ್ಯಕ್ಷ ಬಾಲಚಂದ್ರ ಪಾಟೀಲ ಮಾತನಾಡಿ, ಪಟ್ಟಣದ ಕೋಳೂರು ಕ್ಯಾಂಪ್ ನಿಂದ ಅಂತರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಗೆ ಕೊಳಚೆ ನೀರು ಹರಿದು ಬರುತ್ತಿದೆ, ಸದರಿ ವಿಷಯ ಅಧಿಕಾರಿಗಳ ಗಮನಕ್ಕೆ ಬಂದರೂ ಯಾವುದೇ ಕ್ರಮಕೈಗೊಂಡಿಲ್ಲ ಇದರಿಂದ ಮಾರುಕಟ್ಟೆ ಪ್ರಾಂಗಣದಲ್ಲಿ ದುರ್ನಾತ ಬೀರುತ್ತಿದೆ, ಇದೊಂದು ಮಾರುಕಟ್ಟೆಗೆ ಅಪಖ್ಯಾತಿ ಎಂದರೂ ತಪ್ಪಿಲ್ಲ ಯಾವುದೇ ಕಾರಣ ಹೇಳದೇ ಯುಜಿಡಿ ಮತ್ತು ಪುರಸಭೆ ಅಧಿಕಾರಿಗಳು ಕಾಲುವೆ ನೀರು ಎಪಿಎಂಸಿ ಮಾರುಕಟ್ಟೆಯೊಳಗೆ ಬರದಂತೆ ಕ್ರಮಕೈಗೊಳ್ಳುವಂತೆ ಸೂಚಿಸಿದರು. ವೇದಿಕೆಯಲ್ಲಿ ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ ಉಪಸ್ಥಿತರಿದ್ದರು, ಸಭೆಯಲ್ಲಿ ಪುರಸಭೆಯ ಸರ್ವ ಸದಸ್ಯರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.