ಸಾರಾಂಶ
ಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ಪ್ರತಿ ವಾರಕ್ಕೊಮ್ಮೆ ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಬೇಕು. ನೀರು, ಮೇವಿಗಾಗಿ ಅಗತ್ಯವಿದ್ದಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕೆಂದು ಜಂಟಿ ಕೃಷಿ ನಿರ್ದೇಶಕ, ತಾಪಂ ಆಡಳಿತಾಧಿಕಾರಿ ಮಂಜುನಾಥ ಅಂತರವಳ್ಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರಗಾಲ ಇರುವುದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ರೈತರ ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದ ರೀತಿಯಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕಿನಲ್ಲಿ ಸದ್ಯ ನೀರು ಮತ್ತು ಮೇವಿನ ಕೊರತೆ ಇಲ್ಲ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ, ಮುಂಬರುವ ಬೇಸಿಗೆ ದಿನಗಳಲ್ಲಿ ಸಮಸ್ಯೆಯಾಗದಂತೆ ಕುಡಿಯುವ ನೀರಿಗಾಗಿ ಹೆಚ್ಚು ಗಮನವನ್ನು ಕೊಡುವುದರ ಮೂಲಕ ಜಾನುವಾರಗಳ ರಕ್ಷಣೆ ಅವಶ್ಯಕವಾಗಿದೆ. ತಾಲೂಕಿನ ದುಂಡಸಿ ಹೋಬಳಿಯಲ್ಲಿ ಹೊರ ಜಿಲ್ಲೆಗಳಿಗೆ ಮೇವಿನ ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇಲಾಖೆ ಅಧಿಕಾರಿಗಳು ಮೇವನ್ನು ಮಾರಾಟ ಮಾಡುವಂತಹ ರೈತರಿಗೆ ತಿಳಿ ಹೇಳಿ ತಾಲೂಕಿನಲ್ಲಿಯೇ ಕೊರತೆ ಇರುವಂತಹ ರೈತರಿಗೆ ಕೊಡಿಸುವುದರ ಮೂಲಕ ಹೊರಹೋಗುವ ಹೆಚ್ಚುವರಿ ಮೇವನ್ನು ತಡೆಯಲು ಮುಂದಾಗಬೇಕೆಂದು ಹೇಳಿದರು.ತಾಲೂಕಿನಲ್ಲಿ ಡೆಂಘೀ, ಚಿಕುನ್‌ಗುನ್ಯಾ ಸೇರಿದಂತೆ ಜನತೆಯಲ್ಲಿ ಆರೋಗ್ಯದ ಮೇಲೆ ಯಾವುದೇ ಭೀಕರ ಸಮಸ್ಯೆ ಬೀರುವಂತಹ ಕಾಯಿಲೆಗಳು ಇದುವರೆಗೂ ಕಂಡು ಬಂದಿಲ್ಲ. ಅಂತಹ ಸಮಸ್ಯೆಗಳು ಏನಾದರೂ ಕಂಡುಬಂದಲ್ಲಿ ನಮ್ಮ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಸಭೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಸತೀಶ್ ಎ.ಆರ್. ಸಭೆಗೆ ತಿಳಿಸಿದರು.
ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಪುರಸಭೆಯವರೊಂದಿಗೆ ಪಟ್ಟಣದ ಪ್ರತಿಯೊಂದು ಓಣಿಗಳಲ್ಲಿ ಸಾರ್ವಜನಿಕರಿಗೆ ಸ್ವಚ್ಛತೆಯ ಜೊತೆಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಮತ್ತು ಆಶಾಕಿರಣ ಎಂಬ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಆಶಾ ಕಾರ್ಯಕರ್ತೆಯರೊಂದಿಗೆ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಗ್ರಾಮೀಣ ಜನರ ಕಣ್ಣು ಪರೀಕ್ಷೆ ಮಾಡುವಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಈಗಾಗಲೇ ಕಾರ್ಯಕ್ರಮ ನಡೆಸಲಾಗುತ್ತಿದೆ.ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ತಾಲೂಕಿನ ೫ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಜನರಿಗೆ ತಂಬಾಕು ಸೇವನೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಅದಕ್ಕೆ ತಾಪಂ ಸಹಕಾರ ಅವಶ್ಯವಾಗಿದೆ ಎಂದು ಸಭೆಯಲ್ಲಿ ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.
ಈ ಆರೋಗ್ಯ ಜಾಗೃತಿ ಕಾರ್ಯಕ್ರಮಗಳಿಗೆ ಎಲ್ಲಾ ಸಹಕಾರ ನೀಡುವುದಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಿ. ವಿಶ್ವನಾಥ್ ಭರವಸೆ ನೀಡಿದರು.ಸಭೆಯಲ್ಲಿ ತಾಲೂಕು ಪಶು ವೈದ್ಯಾಧಿಕಾರಿ ರಾಜೇಂದ್ರ ಅರಳೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೆರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾಧಿಕಾರಿ ಇಂದುಧರ ಮುತ್ತಳ್ಳಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.