ಪ್ರಕೃತಿ ವಿಕೋಪ ಅನಾಹುತ ತಡೆಗೆ ಅಗತ್ಯ ಕ್ರಮವಹಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

| Published : May 15 2024, 01:37 AM IST

ಪ್ರಕೃತಿ ವಿಕೋಪ ಅನಾಹುತ ತಡೆಗೆ ಅಗತ್ಯ ಕ್ರಮವಹಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಇಲಾಖೆ ಮತ್ತು ಅಗ್ನಿಶಾಮಾಕ ದಳದವರು ಜಂಟಿಯಾಗಿ ಮಾತುಕತೆ ನಡೆಸಿ ಮರದ ರೆಂಬೆ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಗುಲಿ ಉಂಟಾಗುವ ಅಪಾಯವನ್ನು ತಡೆಯಲು ಕೂಡಲೇ ರೆಂಬೆಕೊಂಬೆಗಳನ್ನು ಕತ್ತರಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರಕೃತಿ ವಿಕೋಪದಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ನಿಗಾವಹಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಕುಡಿಯುವ ನೀರು ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಳೆಯ ಕಾರಣದಿಂದಾಗಿ ಯಾವುದೇ ಸಮಸ್ಯೆಗಳು ಉಂಟಾದಲ್ಲಿ ಮೆಸ್ಕಾಂ ಇಲಾಖೆಯು ತ್ವರಿತವಾಗಿ ಕಾರ್ಯ ಪ್ರವೃತ್ತರಾಗಬೇಕು. ವಿದ್ಯುತ್ ಸಮಸ್ಯೆಗಳು ಉಂಟಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಳೆಯ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ತಂತಿಗಳ ಹಾನಿಯಿಂದ ಸಂಪರ್ಕ ಕಡಿತ ಉಂಟಾಗಬಹುದು, ಇಂತಹ ಸಮಸ್ಯೆಗಳನ್ನು ಎದುರಿಸಲು ಮೆಸ್ಕಾಂ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿಯನ್ನು ನಿಯೋಜಿಸಬೇಕು. ಹಾಗೂ ಎಲ್ಲ ರೀತಿಯ ಮುಂಜಾಗ್ರತ ಕ್ರಮಗಳನ್ನು ಮೊದಲೇ ಕೈಗೊಂಡಿರಬೇಕು. ವಿದ್ಯುತ್ ಸಮಸ್ಯೆ ಉಂಟಾದ 6 ಗಂಟೆಯ ಒಳಗೆ ಪರಿಹಾರ ಒದಗಿಸಬೇಕು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕಂಟ್ರೋಲ್‍ರೂಂಗಳನ್ನು ತೆರೆಯಬೇಕು. ಮಲೆನಾಡು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಯ ಬಗ್ಗೆ ಹೆಚ್ಚಿನ ಗಮನಹರಿಸಿ ತಕ್ಷಣ ಸರಿಪಡಿಸಿ ಅಗತ್ಯ ಕ್ರಮವಹಿಸಿ ಎಂದರು.ನೀರು ಪೋಲು ವಿರುದ್ಧ ದಂಡ: ಕುಡಿಯುವ ನೀರಿನ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಈಗಾಗಲೇ ಕೆಲವು ಕಡೆಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಅನಾವಶ್ಯಕ ಉದ್ದೇಶಗಳಿಗೆ ನೀರು ಪೋಲಾಗುವುದನ್ನು ತಪ್ಪಿಸಲು ಕ್ರಮವಹಿಸಿ ಅಂತವರ ವಿರುದ್ಧ ದಂಡ ವಿಧಿಸಬೇಕು. ಟ್ಯಾಂಕರುಗಳಿಂದ ಸರಬರಾಜಾಗುತ್ತಿರುವ ನೀರು ಹಾಗೂ ನೀರಿನ ಮೂಲಗಳು ಶುದ್ಧವಾಗಿದೆ ಎಂಬುದನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಿಸಲು ಕ್ರಮ ತೆಗೆದುಕೊಳ್ಳುವಂತೆ ಅವರು ಹೇಳಿದರು.

ಕಸ ವಿಲೇವಾರಿಗೆ ಸೂಚನೆ: ಮುಂಗಾರು ಪೂರ್ವದಲ್ಲಿಯೇ ಡಂಪಿಂಗ್ ಯಾರ್ಡ್, ಕಸ ವಿಲೇವಾರಿ ಪ್ರದೇಶಗಳನ್ನು ಸ್ವಚ್ಛಗೊಳಿಸಬೇಕು. ಇಂತಹ ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗದಂತೆ ಮುಂಜಾಗ್ರತ ಕ್ರಮ ವಹಿಸಬೇಕು, ಅಧಿಕಾರಿಗಳು ಕೂಡಲೇ ಅಂತಹ ಪ್ರದೇಶಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು. ಆರೋಗ್ಯ ಇಲಾಖೆಯು ಮಳೆಯ ಸಂದರ್ಭದಲ್ಲಿ ಬರುವ ಡೆಂಘೀ, ಮಲೇರಿಯಾ ಮುಂತಾದ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವುದರ ಜೊತೆಗೆ ಮಳೆಯಿಂದ ಹಾನಿ ಪ್ರದೇಶದಲ್ಲಿ ತಮ್ಮ ಚಿಕಿತ್ಸೆಯನ್ನು ಒದಗಿಸಲು ನಿಗಾ ವಹಿಸುವಂತೆ ಅವರು ಹೇಳಿದರು.ರಸ್ತೆ ತಡೆ ತೆರವುಗೊಳಿಸಿ: ಅರಣ್ಯ ಇಲಾಖೆ ಮತ್ತು ಅಗ್ನಿಶಾಮಾಕ ದಳದವರು ಜಂಟಿಯಾಗಿ ಮಾತುಕತೆ ನಡೆಸಿ ಮರದ ರೆಂಬೆ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಗುಲಿ ಉಂಟಾಗುವ ಅಪಾಯವನ್ನು ತಡೆಯಲು ಕೂಡಲೇ ರೆಂಬೆಕೊಂಬೆಗಳನ್ನು ಕತ್ತರಿಸಬೇಕು ಎಂದರು. ಮರ ಬಿದ್ದು ರಸ್ತೆ ಬ್ಲಾಕ್ ಆದ ಸಂದರ್ಭದಲ್ಲಿ ಕೂಡಲೇ ಬದಲಿ ರಸ್ತೆಯ ವ್ಯವಸ್ಥೆಯನ್ನು ಮಾಡಬೇಕು. ಬ್ಯಾರಿಕೇಡ್‍ಗಳನ್ನು ಅಳವಡಿಸುವ ಮೂಲಕ ಸಂಚಾರವಾಗದಂತೆ ನಿಯಂತ್ರಿಸಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಅಗ್ನಿಶಾಮಕ ದಳದಿಂದ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಸಮಸ್ಯೆಗಳು ಉಂಟಾದಲ್ಲಿ ಸ್ಥಳಿಯಮಟ್ಟದಲ್ಲಿ ಶೀಘ್ರವಾಗಿ ಸಮಸ್ಯೆಗಳನ್ನು ಬಗೆಹರಿಸಬೇಕು. ಸ್ಥಳಿಯವಾಗಿ ಲಭ್ಯವಿರುವ ಜೆಸಿಬಿ, ಹಿಟಾಚಿ ಮಾಲೀಕರೊಂದಿಗೆ ಸಂಪರ್ಕಿಸಿ ವಿಪತ್ತಿನ ಸಮಯದಲ್ಲಿ ಲಭ್ಯರಿರುವಂತೆ ನೋಡಿಕೊಳ್ಳಬೇಕು ಎಂದರು ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಮುಂಬರುವ ಸಮಸ್ಯೆಗಳ ಬಗ್ಗೆ, ಕಂಡುಕೊಳ್ಳಬೇಕಾದ ಪರಿಹಾರಗಳ ಬಗ್ಗೆ ಚರ್ಚಿಸಬೇಕು ಇದಕ್ಕಾಗಿ ವಾಟ್ಸಾಪ್‍ಗ್ರೂಪ್ ಗಳನ್ನು ಸಿದ್ಧಪಡಿಸಬೇಕು ಕಚೇರಿಯಲ್ಲಿ ದಿನದ 24 ಗಂಟೆಯೂ ವಾಟ್ಸಾಪ್‍ಗ್ರೂಪ್‍ಗಳನ್ನು ವೀಕ್ಷಿಸುವ ಸಿಬ್ಬಂದಿಗಳನ್ನು ಗ್ರೂಪ್‍ನಲ್ಲಿ ನಿಯೋಜಿಸಬೇಕು ಎಂದರು. ರಾಜಾ ಕಾಲುವೆ ಹೂಳೆತ್ತಲು ಸೂಚನೆ: ಮಳೆಗಾಲದ ಸಂದರ್ಭದಲ್ಲಿ ರಾಜ ಕಾಲುವೆಗಳಿಂದ ಕೃತಕ ನೆರೆ ಉಂಟಾಗುತ್ತಿದ್ದು ಪ್ರತಿ ವರ್ಷವೂ ಜನಜೀವನ ಹಸ್ತವ್ಯಸ್ತಕ್ಕೆ ಕಾರಣವಾಗುತ್ತಿದೆ ಮುಂಜಾಗ್ರತಾ ಕ್ರಮವಾಗಿ ರಾಜಕಾಲುವೆಗಳ ಹೂಳೆತ್ತಬೇಕು, ಪಂಪ್‍ವೆಲ್ ನಂತಹ ಪ್ರದೇಶದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನೆರೆ ಸಂಭವಿಸದಂತೆ ಖುದ್ದು ಅಧಿಕಾರಿಗಳೇ ಭೇಟಿ ನೀಡಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಶಂತ್‌, ಪಾಲಿಕೆ ಆಯುಕ್ತ ಆನಂದ್, ಡಿಸಿಪಿ ಸಿದ್ಧಾರ್ಥ್‌ ಗೋಯಲ್, ಡಿಸಿಎಫ್‌ ಆಂಟೋನಿ, ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮೊಹಪಾತ್ರಾ ಇದ್ದರು.