ಸಾರಾಂಶ
ಪ್ರವಾಸಿ ತಾಣಗಳ ಬಳಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಬಳಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ ಇತರೆ ವಿಷಯಗಳ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಲಿನ್ ಅತುಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿ, ಹುಲಿಗೆಮ್ಮ ದೇವಸ್ಥಾನದ ಸಮಗ್ರ ಅಭಿವೃದ್ಧಿ, ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆ ಅಧೀನದಲ್ಲಿರುವ ಸ್ಮಾರಕಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿಪಡಿಸಿ ವಿವಿಧ ರಾಜ್ಯಗಳ ಹಾಗೂ ಸ್ಥಳೀಯ ಪ್ರವಾಸಿಗರನ್ನು ಆಕರ್ಷಿಸಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೊಪ್ಪಳ ನಗರದ ಹುಲಿಕೆರೆ ಅಭಿವೃದ್ಧಿ ಸಾಣಾಪುರ ಕೆರೆ ಭಾಗದಲ್ಲಿ ವಾಟರ್ ಸ್ಪೋರ್ಟ್ಸ್ ಅಡ್ವೆಂಚರ್ಸ್ ರಾಕ್ ಕ್ಲೈಂಬಿಂಗ್ ಹಾಗೂ ಏಕೊ ಟೂರಿಸಂ ಮುಂತಾದ ಪ್ರವಾಸಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಹಾಗೂ ಕೊಪ್ಪಳ ಬ್ರಾಂಡ್ ಯೋಜನೆ ಅಡಿ ಪ್ರವಾಸೋದ್ಯಮ ಉತ್ತೇಜಿಸಲು ಈಗಾಗಲೇ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ (ಎನ್ಐಸಿ ) ಕೊಪ್ಪಳ ಬ್ರಾಂಡ್ ವೆಬ್‌ಸೈಟ್ ತಯಾರಿಸಲಾಗಿದ್ದು, ಜಿಲ್ಲೆಯ ಪ್ರವಾಸಿ ತಾಣಗಳನ್ನು ಸಾರ್ವಜನಿಕರಿಗೆ ಪ್ರಚಾರಪಡಿಸಲು ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿಯೊಂದಿಗೆ ಛಾಯಾಚಿತ್ರ ಹಾಗೂ ವೀಡಿಯೊಗಳನ್ನ ಕೊಪ್ಪಳ ಬ್ರಾಂಡ್ ವೆಬ್‌ಸೈಟ್‌ನಲ್ಲಿ ಅಳವಡಿಸಲು ತಿಳಿಸಿದರು.ಆನೆಗೊಂದಿ ಉತ್ಸವ ನಡೆಯುವ ಪ್ರದೇಶದಲ್ಲಿರುವ ಸರ್ಕಾರಿ ಭೂಮಿಯ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಗಂಗಾವತಿ ತಹಸೀಲ್ದಾರರು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಗಂಗಾವತಿ ಹಾಗೂ ಕನಕಗಿರಿ ತಾಲೂಕುಗಳು ಸೇರಿದಂತೆ ಇತರ ಜಮೀನಿನ ಸಮಸ್ಯೆಗಳಿದ್ದಲ್ಲಿ ಶೀಘ್ರವಾಗಿ ಇತ್ಯರ್ಥಗೊಳಿಸಲು ಆಯಾ ತಹಸೀಲ್ದಾರರು ಕ್ರಮ ವಹಿಸಬೇಕು. ಶೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗಳಿಸುವಂತೆ ಕೆ.ಆರ್.ಐ.ಡಿ.ಎಲ್ ಅನುಷ್ಠಾನ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೇಮಂತ್ ಕುಮಾರ್, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪಾಧಿಕಾರದ ಆಯುಕ್ತ ಕೆ. ರಂಗನಾಥ, ಕೊಪ್ಪಳ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಿ.ನಾಗರಾಜ ಸೇರಿದಂತೆ, ವಿವಿಧ ಇಲಾಖೆಗಳ ಅಧಿಕಾರಿಗಳು, ತಹಸೀಲ್ದಾರರು, ಕಂದಾಯ ನಿರೀಕ್ಷಕರು ಹಾಗೂ ಕಾಮಗಾರಿಗಳ ಅನುಷ್ಠಾನ ಏಜೆನ್ಸಿಯವರು ಉಪಸ್ಥಿತರಿದ್ದರು.12ಕೆಪಿಎಲ್20: ಕೊಪ್ಪಳ ಜಿಲ್ಲಾ ಐತಿಹಾಸಿಕ ಪ್ರವಾಸಿ ತಾಣಗಳ ಬಳಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಡಿಸಿ ನಲಿನ್ ಅತುಲ್ ಮಾತನಾಡಿದರು.