ಸಾರಾಂಶ
ಮೂಡುಬಿದಿರೆ : ಪ್ರಜಾಪ್ರಭುತ್ವದ ಬಲು ದೊಡ್ಡ ಹಬ್ಬವಾದ ಚುನಾವಣೆಯಲ್ಲಿ ನಮ್ಮ ಕರ್ತವ್ಯವನ್ನು ಪಾಲನೆ ಮಾಡುವುದು ತುಂಬಾ ಮುಖ್ಯ ಎಂದು ಮಾದರಿ ನೀತಿ ಸಂಹಿತೆ ಅಧಿಕಾರಿ ಕೆ.ಇ. ಜಯರಾಮ ಹೇಳಿದರು.
ಆಳ್ವಾಸ್ ಕಾಲೇಜಿನಲ್ಲಿ ಶನಿವಾರ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಏಪ್ರಿಲ್ ೨೬ ರಂದು ನಡೆಯುವ ಚುನಾವಣೆಯಲ್ಲಿ ನಿಮ್ಮ ಮತ ಚಲಾಯಿಸಿ, ನಿಮ್ಮ ಹಕ್ಕನ್ನು ಚಲಾಯಿಸಿ. ನೀವು ಅಷ್ಟೇ ಅಲ್ಲದೆ ನಿಮ್ಮ ನೆರೆಹೊರೆಯವರನ್ನು, ಸ್ನೇಹಿತರನ್ನು, ಬಂಧು ಬಳಗದವರನ್ನು ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸಲು ತಿಳಿಸಿ ಎಂದರು. ಮತದಾನ ದಿನದ ಹಿನ್ನೆಲೆ ಎಲ್ಲ ಶಾಲಾ ಕಾಲೇಜುಗಳ, ಸರ್ಕಾರಿ ಕಚೇರಿಗಳ ನೌಕರರಿಗೆ ರಜೆ ಘೋಷಣೆ ಮಾಡಲಾಗುತ್ತದೆ. ಆದ್ದರಿಂದ ಆ ದಿನ ರಜೆ ದಿನ ಎಂದು ಅನ್ಯ ಕೆಲಸಗಳಿಗೆ ಸಮಯ ವ್ಯರ್ಥ ಮಾಡದೆ ತಪ್ಪದೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ ಹಾಕಿ ಎಂದರು.
ಅತಿ ದೊಡ್ಡ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವು ಉತ್ತಮವಾಗಿ ನಡೆಯಬೇಕಾದರೆ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕಾದರೆ ನಮ್ಮ ಒಂದು ಮತ ಕೂಡ ಬಹಳ ಮುಖ್ಯವಾಗುತ್ತದೆ ಎಂದರು.
ತಾಲೂಕು ಮಟ್ಟದ ಮಾಸ್ಟರ್ ತರಬೇತುದಾರರಾದ ಚಿತ್ರಶ್ರೀ ಮಾತನಾಡಿ, ಚುನಾವಣ ಪರ್ವ ದೇಶದ ಗರ್ವ ಎನ್ನುವಂತಹ ವಾಕ್ಯ ಕೇವಲ ನಾಲಿಗೆಯಲ್ಲಿ ಮಾತ್ರವಲ್ಲದೆ ನಮ್ಮ ಹೃದಯದಲ್ಲಿ ಇರಬೇಕು ಎಂದರು.
ನಾವೆಲ್ಲರೂ ಜಗತ್ತಿನ ಅತ್ಯಂತ ಬಲಿಷ್ಠ, ಶಕ್ತಿಶಾಲಿ, ದೊಡ್ಡದಾದ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಗಳು. ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕಿದೆ ಎಂಬುದರ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದರು.
ಇಷ್ಟೊಂದು ಕಲೆ ಶ್ರೀಮಂತಿಕೆಗೆ, ಸಾಂಸ್ಕೃತಿಕವಾಗಿ, ವೈವಿಧ್ಯಮಯವಾಗಿ ಬೆಳೆದು ನಿಂತಿರುವ ಭಾರತದ ಭವಿಷ್ಯವನ್ನು ಬರೆಯುವ ದಿನ ಬಂದಿದೆ. ಆ ದಿನ ಯಾವುದೇ ಕಾರಣಕ್ಕೂ ಮತದಾನದ ಪ್ರಕ್ರಿಯೆಯಿಂದ ದೂರವಿರಬೇಡಿ ಎಂದರು. ವಿದ್ಯಾರ್ಥಿ ಶಶಾಂಕ್ ಮತದಾನ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ಹೀಲಿಯಂ ಬಲೂನ್ ಹಾಗೂ ಬಣ್ಣದ ಕಾಗದಗಳನ್ನು ಹಾರಿಸುವ ಮೂಲಕ ಮತದಾನ ಜಾಗೃತಿ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸಂಯೋಜಕ ಡೊಂಬಯ್ಯ ಇಡ್ಕಿದು ಇದ್ದರು. ಸನ್ವಿತ್ ಕಾರ್ಯಕ್ರಮ ನಿರೂಪಿಸಿದರು. ಅನಘಾ ವಂದಿಸಿದರು.