ಅಗ್ನಿ ಅವಘಡ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ: ಮಂಜುನಾಥ

| Published : Dec 21 2024, 01:18 AM IST

ಅಗ್ನಿ ಅವಘಡ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ: ಮಂಜುನಾಥ
Share this Article
  • FB
  • TW
  • Linkdin
  • Email

ಸಾರಾಂಶ

ಅಗ್ನಿ ಅವಘಡಗಳಿಂದ ಆಗುವ ಅನಾಹುತ ಹಾಗೂ ನಷ್ಟವನ್ನು ತಪ್ಪಿಸಬಹುದಾಗಿದೆ.

ಸಂಡೂರು: ಅಗ್ನಿ ಅವಘಡ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದರೆ ಅಗ್ನಿ ಅವಘಡಗಳಿಂದ ಆಗುವ ಅನಾಹುತ ಹಾಗೂ ನಷ್ಟವನ್ನು ತಪ್ಪಿಸಬಹುದಾಗಿದೆ ಎಂದು ಸಂಡೂರಿನ ಅಗ್ನಿಶಾಮಕ ಠಾಣೆಯ ಅಧಿಕಾರಿ ಬಿ.ಜಿ. ಮಂಜುನಾಥ್ ತಿಳಿಸಿದರು.

ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಲಕ್ಷ್ಮೀ ಎಸ್.ನಾನಾವಟೆ ಶಿಕ್ಷಣ ಮಹಾವಿದ್ಯಾಲಯ ಹಾಗೂ ವಿಷ್ಣುಪಂತ್ ನಾನಾವಟೆ ಪದವಿ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಗ್ನಿ ಅವಘಡಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಯನ್ನು ೧೯೪೨ರಲ್ಲಿ ಆರಂಭಿಸಲಾಯಿತು. ಅಗ್ನಿ ಅವಘಡಗಳಿಂದ ಸಾರ್ವಜನಿಕರ ಜೀವ ಮತ್ತು ಆಸ್ತಿಯು ಹಾನಿಯಾಗದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆ. ಬೆಂಕಿಯ ಸ್ವರೂಪವನ್ನು ಆಧರಿಸಿ, ನಂದಿಸುವ ಕಾರ್ಯವನ್ನು ಮಾಡಲಾಗುವುದು. ಘನ, ಅನಿಲ, ದ್ರವ ವಸ್ತುಗಳಿಗೆ ಬೆಂಕಿ ಹೊತ್ತಿಕೊಂಡಾಗ ಅವುಗಳಿಗೆ ಭಿನ್ನ ರೀತಿಯ ನಂದಕಗಳನ್ನು ಉಪಯೋಗಿಸಲಾಗುವುದು. ಸಾರ್ವಜನಿಕರೂ ಕೂಡ ಇಂತಹ ವಿಷಯಗಳನ್ನು ತಿಳಿದುಕೊಂಡಿದ್ದರೆ, ಅಗ್ನಿ ಅವಘಡಗಳನ್ನು ಮತ್ತು ಅವುಗಳಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸಬಹುದಾಗಿದೆ ಎಂದರು.

ಅಗ್ನಿ ಅವಘಡಗಳು ಹೆಚ್ಚಾಗಿ ಅಡುಗೆ ಮನೆ, ಕೈಗಾರಿಕೆ, ಬೇಕರಿ, ಹೋಟೆಲ್ ಮುಂತಾದ ಸ್ಥಳಗಳಲ್ಲಿ ನಡೆಯುವ ಸಂಭವವಿದೆ. ಎಚ್ಚರಿಕೆಯಿಂದ ಅಲ್ಲಿರುವ ಕೆಲಸಗಾರರು ತಮ್ಮ ಕಾರ್ಯಗಳನ್ನು ಮಾಡಬೇಕಾಗುತ್ತದೆ. ವೃದ್ಧರು ಮತ್ತು ಮಕ್ಕಳು ವಿದ್ಯುತ್ ಸ್ವಿಚ್ ಪ್ಲೇಟ್, ಫ್ರೀಜ್‌ಗಳನ್ನು ಮುಟ್ಟದ ಹಾಗೆ ಜಾಗೃತರಾಗಿರಬೇಕು. ಪ್ರಾಕೃತಿಕ ವಿಪತ್ತಿನ ಸಂದರ್ಭದಲ್ಲಿಯೂ ನಮ್ಮ ಇಲಾಖೆಯ ಸಿಬ್ಬಂದಿ ಕಾರ್ಯನಿರ್ವಹಿಸಿ, ಜನರ ಜೀವ ರಕ್ಷಣೆಗೆ ಶ್ರಮಿಸುತ್ತೇವೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅಗ್ನಿಯನ್ನು ನಂದಿಸುವ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ಕಾಲೇಜಿನ ಪ್ರಾಚಾರ್ಯರು, ಬಿ.ಇಡಿ ಪ್ರಶಿಕ್ಷಣಾರ್ಥಿಗಳು, ಸಿಬ್ಬಂದಿ, ಅಗ್ನಿಶಾಮಕ ಠಾಣೆಯ ದಿನೇಶ್, ಯಲ್ಲಪ್ಪ, ಸುಭಾಷ್‌ಚಂದ್ರ ಮುಂತಾದವರು ಉಪಸ್ಥಿತರಿದ್ದರು.

ಸಂಡೂರಿನ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಗ್ನಿ ಅವಘಡಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಬಿ.ಜಿ. ಮಂಜುನಾಥ್ ಅಗ್ನಿ ಅವಘಡಗಳ ಕಾರಣ ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಸಂಡೂರಿನ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಗುರುವಾರ ಅಗ್ನಿ ಅವಘಡಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.