ಮಳೆಯ ಅನಾಹುತ ತಡೆಗೆ ಮುಂಜಾಗ್ರತೆ ವಹಿಸಿ

| Published : May 17 2024, 12:37 AM IST / Updated: May 17 2024, 12:38 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಪ್ರಸಕ್ತ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಉಂಟಾದಲ್ಲಿ ಸಂಭವಿಸಬಹುದಾದ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಸಕ್ತ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಉಂಟಾದಲ್ಲಿ ಸಂಭವಿಸಬಹುದಾದ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಜರುಗಿದ ಬರ ನಿರ್ವಹಣೆ ಹಾಗೂ ಮುಂಗಾರು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಂಭವವಿದ್ದು, ಜಿಲ್ಲೆಯಲ್ಲಿ ಪ್ರವಾಹಕ್ಕೆ ತುತ್ತಾಗುವಂತಹ ಪ್ರದೇಶಗಳನ್ನು ಗುರುತಿಸಿ ಸ್ಥಳೀಯರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಈ ಅವಧಿಯಲ್ಲಿ ಅಧಿಕಾರಿಗಳು ಜವಾಬ್ದಾರಿತನದಿಂದ ಕೆಲಸ ಮಾಡಬೇಕು. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾ ತುರ್ತು ನಿರ್ವಹಣೆ ಕೇಂದ್ರ ಸುಸಜ್ಜಿತವಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಕ್ರಮವಹಿಸಬೇಕು. ತಾಲೂಕು ಹಂತದಲ್ಲಿ ತುರ್ತು ಕಾರ್ಯಾಚರಣೆ ಕೇಂದ್ರ ತೆರೆಯುವುದು, ಇಲಾಖೆಯ ಅಧಿಕಾರಿಗಳು ತಮ್ಮ ಹಂತದಲ್ಲಿ ಸಭೆ ನಡೆಸಿ ಅವರವರ ಕರ್ತವ್ಯ ಹಾಗೂ ಜವಾಬ್ದಾರಿ ಮನದಟ್ಟು ಮಾಡಬೇಕು. ಹವಾಮಾನ, ನೀರಿನ ಹರಿವು, ಸಮುದ್ರದ ಸ್ಥಿತಿ ಕುರಿತು ನೀಡುವ ಮುನ್ಸೂಚನೆ ಮತ್ತು ಮುನ್ನಚ್ಚರಿಕೆ ಕ್ರಮಕೈಗೊಳ್ಳಬೇಕು. ವರುಣ ಮಿತ್ರ ಸಹಾಯವಾಣಿ (9243345433) ಸಂಪರ್ಕಿಸಿ ಗುಡುಗು, ಸಿಡಿಲಿನಿಂದಾಗುವ ಅಪಾಯ ತಗ್ಗಿಸಬಹುದಾಗಿದೆ ಎಂದರು.

ವಿವಿಧ ಜಲಾಶಯಗಳ ನೀರಿನ ಮಟ್ಟ, ಸಂಗ್ರಹ, ಒಳಹರಿವು ಮತ್ತು ಹೊರಹರಿವು ಮಾಹಿತಿ ಪಡೆದು ಸಂಬಂಧಪಟ್ಟ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಕ್ರಮವಹಿಸಬೇಕು. ಉಂಟಾಗಬಹುದಾದ ವಿಪತ್ತುಗಳಿಂದ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ, ನಾಗರಿಕ ರಕ್ಷಣಾ ದಳ, ಗೃಹ ರಕ್ಷಕ ದಳ, ಆಪತ್ತು ಮಿತ್ರ ಅಡಿಯಲ್ಲಿ ತರಬೇತಿ ಪಡೆದ ಸ್ವಯಂ ಸೇವಕರನ್ನು ಜಾಗೃತಿಗೊಳಿಸಿ ಸನ್ನದ್ಧರಾಗುವಂತೆ ಮಾಡಬೇಕು. ಈಜುಗಾರರು, ಹಾವು ಹಿಡಿಯುವವರ ತಾಲೂಕಾವಾರು ಪಟ್ಟಿ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಮಳೆ ನೀರು ಸರಾಗಿವಾಗಿ ಹರಿಯುವಂತೆ ಕಾಲುವೆ, ಚರಂಡಿ, ಸೇತುವೆಗಳಲ್ಲಿಯ ಹೂಳು ತೆಗೆದು ಸ್ವಚ್ಛಗೊಳಿಸಲು ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದರು. ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮಳೆಗಾಲದಲ್ಲಿ ವಿದ್ಯುತ್ ಮೂಲ ಸೌಕರ್ಯ ಬಲಪಡಿಸುವುದು, ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆಯಾಗಿ ಸೋಂಕು ನಿವಾರಕ, ಲಸಿಕೆ ಸೇರಿದಂತೆ ಔಷಧಿಗಳ ದಾಸ್ತಾನು ಮಾಡಲು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಆಹಾರ ಇಲಾಖೆಯ ಉಪ ನಿರ್ದೇಶಕ ಚನಬಸಪ್ಪ ಕೊಡ್ಲಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ, ಜಂಟಿ ಕೃಷಿ ನಿರ್ದೇಶಕ ಕಳ್ಳೇನ್ನವರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ. ಬಂದನೂರ, ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅಧಿಕಾರಿ ಪುರೋಹಿತ, ತಹಸೀಲ್ದಾರ್‌ ಅಮರೇಶ ಪಮ್ಮಾರ ಸೇರಿದಂತೆ ಇತರೆ ಅಧಿಕಾರಿಗಳು ವಿಡಿಯೋ ಸಂವಾದದ ಮೂಲಕ ಪಾಲ್ಗೊಂಡಿದ್ದರು.

----ಕೋಟ್‌ . . .

ಜಿಲ್ಲೆಯಲ್ಲಿ ಪ್ರತಿ ಮಾಹೆಯಲ್ಲಿ ಸಂಭವಿಸಬಹದಾದ ಸಮಸ್ಯಾತ್ಮಕ ಗ್ರಾಮಗಳನ್ನು ಗುರುಸಲಾಗಿದೆ. ಮೇ ಮಾಹೆಯಲ್ಲಿ 142, ಜೂನ್ 117, ಜುಲೈ 81 ಗ್ರಾಮಗಳನ್ನು ಗುರುತಿಸಿದ್ದು, ಖಾಸಗಿ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡ ಕೊಳವೆಬಾಯ ನೀರು ಪೂರೈಸಲಾಗುತ್ತಿದೆ. ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ. ಅಗತ್ಯ ಸಂದರ್ಭದಲ್ಲಿ ಮಾತ್ರ ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಜಿಲ್ಲೆಯಲ್ಲಿ 22 ಗ್ರಾಮಗಳಲ್ಲಿ 29 ಖಾಸಗಿ ಬೋರವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ. ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ತೊಂದರೆಯಾಗಿದ್ದು, ಸಮಸ್ಯೆ ನಿವಾರಣೆಯಾಗಲಿದೆ. ಅಲ್ಲದೆ, ಮುಂಗಾರು ಮಳೆ ಮುನ್ಸೂಚನೆ ಇದೆ,-ಜಾನಕಿ ಕೆ.ಎಂ ಜಿಲ್ಲಾಧಿಕಾರಿ