ಕಣ್ಣಿನ ಬಗ್ಗೆ ವಿಶೇಷ ಕಾಳಜಿ ಇರಲಿ

| Published : Dec 29 2023, 01:30 AM IST

ಸಾರಾಂಶ

ಕಣ್ಣುಗಳ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಬೇಕು;‌ ಕಾಖಂಡಕಿ

ಕನ್ನಡಪ್ರಭ ವಾರ್ತೆ ಇಳಕಲ್ಲ

ಅಂಗಾಂಗಳಲ್ಲಿ ಶ್ರೇಷ್ಠವಾದ ಕಣ್ಣು ತಪಾಸಣೆಯಿಂದ ಕಣ್ಣುಗಳ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಬೇಕೆಂದು ಕಾಖಂಡಕಿ ಕಣ್ಣಿನ ಆಸ್ಪತ್ರೆಯ ರೋಟೆರಿಯನ್‌ ಡಾ.ಅಭಿಜಿತ ಕಾಖಂಡಕಿ ಹೇಳಿದರು.

ಇಲ್ಲಿನ ಪ್ರೇರಣಾ ಹೈಯರ್ ಪ್ರೈಮರಿ ಶಾಲೆ ಮತ್ತು ಬಸವಶ್ರೀ ಹೈಯರ್ ಪ್ರೈಮರಿ ಮತ್ತು ಹೈಸ್ಕೂಲ್‌ನಲ್ಲಿ ಇಳಕಲ್ಲ ರೋಟರಿ ಸಂಸ್ಥೆ ಆಯೋಜಿಸಿದ್ದ ವಿದ್ಯಾರ್ಥಿಗಳ ಕಣ್ಣು ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನುಷ್ಯನ ಅಂಗಗಳಲ್ಲಿ ಕಣ್ಣು ಕೂಡಾ ಪ್ರಮುಖ ಅಂಗವಾಗಿದ್ದು, ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದೆಂದರು.

ಜನರು ಇಂದಿನ ಎಲೆಕ್ಟ್ರಾನಿಕ್ಸ್ ಉಪಕರಣಗಳು ಹಾಗೂ ಮಾನಸಿಕ ಒತ್ತಡಗಳಿಂದ ಬಳಲುತ್ತಿದ್ದಾರೆ ಎಂದರು. ವಿದ್ಯಾರ್ಥಿಗಳು ಪ್ರಾರಂಭಿಕ ಹಂತದಲ್ಲೇ ತಪಾಸಿಸಿಕೊಂಡು ತಮ್ಮಕಣ್ಣಿನ ರಕ್ಷಣೆ ಮಾಡಿಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಳಕಲ್ಲ ರೋಟರಿ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ತೋಟಿಗೇರ ಹಾಗೂ ಬಸವಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗುರಪ್ಪ ಜಿ. ರೇಶ್ಮಿ ವಹಿಸಿದ್ದರು. ರೋಟರಿ ಖಜಾಂಚಿ ಬಸಲಿಂಗಪ್ಪತೋಟದ, ಡಾ.ಅಭಿಜಿತ್‌ ಕಾಖಂಡಕಿ, ಶಾಲೆಯ ಮುಖ್ಯಗುರುಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭಾಗ್ಯ ಜ್ಯೋತಿ ಜಿ. ರೇಶ್ಮಿ ಹಾಗೂ ತೋಟಿಗೇರ ಮಾತನಾಡಿದರು.

ಈ ಕಣ್ಣು ತಪಾಸಣಾ ಶಿಬಿರದಲ್ಲಿ ಪ್ರೇರಣಾ ಹಾಗೂ ಬಸವಶ್ರೀ ಶಾಲೆಯ 190ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಣ್ಣು ತಪಾಸಣೆ ಮಾಡಲಾಯಿತು. ಈ ಕಾರ್ಯಕ್ರಮದ ವೇಳೆ ಇಳಕಲ್ಲ ರೋಟರಿ ಕ್ಲಬ್‌ನ ಹಿರಿಯ ಸದಸ್ಯರಾದ ಚಂದ್ರಶೇಖರ ಮಾಳಿ, ಬಸವರಾಜ ಗೋಟೂರ, ರಾಜಶೇಖರ ಸಿಕ್ಕೇರಿಮಠ, ಶ್ರೀನಿವಾಸ ಮಾರಾ, ಸಿದ್ಧಾರ್ಥ ಪಟ್ಟಣಶೆಟ್ಟಿ, ರೋಟರಿ ಸದಸ್ಯರು, ಆಸ್ಪತ್ರೆಯ ಕಾರ್ಯಕರ್ತರು ಇತರರು ಇದ್ದರು.