ಸಾರಾಂಶ
ಕರ ವಸೂಲಾತಿ, ಗ್ರಂಥಾಲಯ, ಎನ್.ಆರ್.ಎಲ್.ಎಂ ಚಟವಟಿಕೆ, ಘನ ತ್ಯಾಜ್ಯ ವಿಲೇವಾರಿ ಘಟಕ, ಇ ಸ್ವತ್ತು, ವಸತಿ ಯೋಜನೆ, ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ, ಕುಡಿಯುವ ನೀರು, ಶಾಲಾ ಶೌಚಾಲಯ, ಕೃಷಿ ಅರಣ್ಯೀಕರಣ, ಮೆಡಿಸನ್ ಪ್ಲಾಂಟ್, ಆರೋಗ್ಯ ಕರ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಯಾವುದೇ ಅಸಡ್ಡೆ ತೋರಬಾರದು.
ಕನ್ನಡಪ್ರಭ ವಾರ್ತೆ ಹುಣಸೂರು
ಜಲ್ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಜಿಪಂ ಸಿಇಒ ಕೆ.ಎಂ.ಗಾಯತ್ರಿ ಸೂಚಿಸಿದರು.ತಾಲೂಕಿನ ಹುಸೇನ್ ಪುರ ಮತ್ತು ಮನುಗನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ದಿಢೀರ್ ಪರಿಶೀಲನೆ, ಅಂಗನವಾಡಿ ಮತ್ತು ಕೂಸಿನ ಮನೆಗಳಿಗೆ ಭೇಟಿ ನೀಡಿದ ನಂತರ ಗ್ರಾಪಂ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ನರೇಗಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳ್ಳುವ ಕ್ರಿಯಾ ಯೋಜನೆಯಲ್ಲಿನ ಕಾಮಗಾರಿಯನ್ನು ಅನುಷ್ಠಾನ ಕೂಡಲೇ ಕೈಗೊಳ್ಳಬೇಕು. ಕೆರೆ ಅಭಿವೃದ್ಧಿ, ಬದು ನೀರು ನಿರ್ವಹಣಾ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಕರ ವಸೂಲಾತಿ, ಗ್ರಂಥಾಲಯ, ಎನ್.ಆರ್.ಎಲ್.ಎಂ ಚಟವಟಿಕೆ, ಘನ ತ್ಯಾಜ್ಯ ವಿಲೇವಾರಿ ಘಟಕ, ಇ ಸ್ವತ್ತು, ವಸತಿ ಯೋಜನೆ, ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ, ಕುಡಿಯುವ ನೀರು, ಶಾಲಾ ಶೌಚಾಲಯ, ಕೃಷಿ ಅರಣ್ಯೀಕರಣ, ಮೆಡಿಸನ್ ಪ್ಲಾಂಟ್, ಆರೋಗ್ಯ ಕರ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಯಾವುದೇ ಅಸಡ್ಡೆ ತೋರಬಾರದು ಎಂದರು.ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಜಲ್ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರಿನ ಸರಬರಾಜು ಯೋಜನೆಯ ಜಾರಿಯಲ್ಲಿ ಕೆಲವೊಂದು ದೂರು ಕೇಳಿ ಬಂದಿವೆ. ದೂರುಗಳು ಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಅವರು ಸೂಚಿಸಿದರು.
ನಂತರ ಎರಡೂ ಗ್ರಾಪಂಗಳ ವ್ಯಾಪ್ತಿಯ ಕೆಲ ಅಂಗನವಾಡಿ ಕೇಂದ್ರಗಳು ಮತ್ತು ಕೂಸಿನ ಮನೆಗಳಿಗೆ ಭೇಟಿ ಅಲ್ಲಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಶೌಚಾಲಯ ಅವ್ಯವಸ್ಥೆ, ಆಹಾರ ಪೂರೈಕೆ ಮತ್ತು ಆಹಾರದ ವಿತರಣೆಯ ರಿಜಿಸ್ಟರ್ ನಿರ್ವಹಣೆ ಕುರಿತು ಪರಿಶೀಲಿಸಿ, ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಪಿಡಿಒಗಳಿಗೆ ಸೂಚಿಸಿದರು.ನಂತರ ಬಿಳಿಕೆರೆ ಗ್ರಾಪಂನ ಪಟ್ಟಲದಮ್ಮನ ಕೆರೆ ಪ್ರದೇಶಕ್ಕೆ ತೆರಳಿ ಅರಣ್ಯೀಕರಣದ ಮೂಲಕ ಆ ಪ್ರದೇಶವನ್ನು ಅಭಿವೃದ್ಧಿಪಡಿಸುವಂತೆ ಪಿಡಿಒ ಅವರಿಗೆ ತಿಳಿಸಿದರು.
ಈ ವೇಳೆ ತಾಪಂ ಇಒ ಕೆ. ಹೊಂಗಯ್ಯ. ಪಿ.ಆರ್.ಇ.ಡಿ ಇಲಾಖೆ ಇಇ ರಂಜಿತ್ ಕುಮಾರ್, ಪಿ.ಆರ್.ಡಬ್ಲ್ಯೂ ಇಲಾಖೆಯ ಮಹಮ್ಮದ್ ಖಲೀಂ, ಎಇಇ ಪುಟ್ಟನಾಗರಾಜು, ಜೆಇ ಸಚಿನ್, ಎಇ ಮಹೇಂದ್ರ, ನರೇಗಾ ಸಹಾಯಕ ನಿರ್ದೇಶಕ ಎಸ್. ಗಿರಿಧರ್, ಹುಸೇನಪುರ ಗ್ರಾಪಂ ಅಧ್ಯಕ್ಷೆ ಗಾಯಿತ್ರಮ್ಮ, ಪಿಡಿಒಗಳಾದ ಛಾಯಾ, ಸಂತೋಷ್, ತಾಲೂಕು ತಾಂತ್ರಿಕ ಸಂಯೋಜಕರು, ನರೇಗಾ ಎಂಜಿನಿಯರ್ಗಳು, ಗ್ರಾಪಂ ಸದಸ್ಯರು, ಕಾರ್ಯದರ್ಶಿ ಸೇರಿದಂತೆ ಪಂಚಾಯಿತಿ ಸಿಬ್ಬಂದಿ ಇದ್ದರು.