ತಂಬಾಕಿಗೆ 350 ರು. ದರ ಸಿಗುವಂತಾಗಲು ಕ್ರಮ ಕೈಗೊಳ್ಳಿ

| Published : Sep 30 2025, 12:00 AM IST

ತಂಬಾಕಿಗೆ 350 ರು. ದರ ಸಿಗುವಂತಾಗಲು ಕ್ರಮ ಕೈಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಅ. 8 ರಂದು ಪ್ರಾರಂಭಿಸಲು ಮಂಡಳಿ ನಿರ್ಧರಿಸಿರುವುದು ಸರಿಯಷ್ಟೆ. ಈ ವರ್ಷದಲ್ಲಿ ಅತಿವೃಷ್ಟಿಯಿಂದ ನಿಗದಿತ ಪ್ರಮಾಣದಷ್ಟು ತಂಬಾಕು ಬೆಳೆ ಬೆಳೆಯಲು ಸಾಧ್ಯವಾಗಿಲ್ಲ.

ಕನ್ನಡಪ್ರಭ ವಾರ್ತೆ ಹುಣಸೂರು ಪ್ರಸ್ತುತ ಸಾಲಿನಲ್ಲಿ (2025-26) ತಂಬಾಕಿಗೆ ಕೆ.ಜಿಯೊಂದಕ್ಕೆ ಸರಾಸರಿ 350 ರು. ಗಳ ದರ ಸಿಗುವಂತಾಗಲು ತಂಬಾಕು ಮಂಡಳಿ ಅಗತ್ಯ ಉಪಕ್ರಮಗಳನ್ನು ಕೈಗೊಳ್ಳಬೇಕೆಂದು ರೈತ ಸಂಘ ಮತ್ತು ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.ಬೆಂಗಳೂರಿನಲ್ಲಿ ರೈತಸಂಘ ಮತ್ತು ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಮುಖಂಡರ ನಿಯೋಗ ಮಂಡಳಿಯ ನಿರ್ದೇಶಕ ಶ್ರೀನಿವಾಸ್‌ ಅವರನ್ನು ಸೋಮವಾರ ಭೇಟಿಯಾಗಿ ರೈತರ ಬೇಡಿಕೆಗಳ ಕುರಿತಾದ ಮನವಿ ಸಲ್ಲಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಈ ಸಾಲಿನ ತಂಬಾಕು ಹರಾಜು ಮಾರುಕಟ್ಟೆ ಅ. 8 ರಂದು ಪ್ರಾರಂಭಿಸಲು ಮಂಡಳಿ ನಿರ್ಧರಿಸಿರುವುದು ಸರಿಯಷ್ಟೆ. ಈ ವರ್ಷದಲ್ಲಿ ಅತಿವೃಷ್ಟಿಯಿಂದ ನಿಗದಿತ ಪ್ರಮಾಣದಷ್ಟು ತಂಬಾಕು ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಆದರೆ ಉತ್ತಮ ಗುಣಮಟ್ಟದ ತಂಬಾಕು ಉತ್ಪನ್ನವಾಗಿರುವುದರಿಂದ ಆಂಧ್ರದ ಮಾರುಕಟ್ಟೆಯಲ್ಲಿ ಪ್ರಥಮ ದರ್ಜೆಯ ತಂಬಾಕಿಗೆ 420 ರು. ಗಳವರೆಗೆ ದರ ದೊರೆತಿದ್ದು, ಅದರಂತೆ ನಮ್ಮ ರಾಜ್ಯದ ರೈತರಿಗೆ ದೊರಕುವಂತೆ ಮಂಡಳಿ ಕ್ರಮ ಕೈಗೊಳ್ಳಬೇಕು. ಪ್ರಾರಂಭದಲ್ಲಿ 375 ರು. ಗಳಿಗೂ ಮೇಲ್ಪಟ್ಟು ಹರಾಜನ್ನು ಪ್ರಾರಂಭಿಸಬೇಕು. ಸರಾಸರಿ ಬೆಲೆ ರು. 350 ಗಳಿಗಿಂತ ಕಡಿಮೆಯಾಗದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಲಾಗಿದೆ ಎಂದರು. ತಂಬಾಕು ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಸಿ. ಚಂದ್ರೇಗೌಢ ಮಾತನಾಡಿ, ಹರಾಜು ಪ್ರಕ್ರಿಯೆ ಪ್ರಾರಂಭದಲ್ಲಿ ಮಂಡಳಿಯ ಅಧಿಕಾರಿಗಳು, ನೌಕರ ವರ್ಗ ಹಾಗೂ ಕಂಪನಿಗಳ ನೌಕರರು ಮತ್ತು ಸೆಕ್ಯೂರಿಟಿ ಗಾರ್ಡುಗಳು ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ಕ್ರಮ ಕೈಗೊಂಡು ರೈತರಲ್ಲದ ವ್ಯಾಪಾರಿಗಳಿಗೆ ಮಂಡಳಿಯಲ್ಲಿ ಯಾವುದೇ ರೀತಿಯಲ್ಲಿ ರೈತರನ್ನು ಶೋಷಣೆ ಮಾಡುವುದಕ್ಕೆ ಅವಕಾಶವಿಲ್ಲದಂತೆ ನಿರ್ದಿಷ್ಟವಾದ ಕ್ರಮವನ್ನು ತೆಗೆದುಕೊಳ್ಳಬೇಕು ಹಾಗೂ ಗೊಬ್ಬರದ ಅಡ್ವಾನ್ಸ್ ಹಣವನ್ನು ಸಹ ಮಾರುಕಟ್ಟೆ ಪ್ರಾರಂಭದಲ್ಲಿ ಜಮಾ ಮಾಡಿಕೊಂಡು ಸಕಾಲದಲ್ಲಿ ಗೊಬ್ಬರ ವಿತರಣೆ ಮಾಡಬೇಕೆಂದು ಆಗ್ರಹಿಸಿದರು.ಭೇಟಿ ವೇಳೆ ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೋದೂರು ಶಿವಣ್ಣ, ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ರಾಜೆ ಅರಸ್, ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಮುಖಂಡರಾದ ಶಂಕರಪ್ಪ, ಧನಂಜಯ, ಪಿರಿಯಾಪಟ್ಟಣ ದಶರಥ, ಮಹದೇವು ನಿಲುವಾಗಿಲು, ಕಾಂತರಾಜು, ಕರಿಶೆಟ್ಟಿ ಇದ್ದರು.