ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಎಡಿಜಿಪಿ ಆರ್.ಹಿತೇಂದ್ರ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರನ್ನು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ನಾಯಕರು ಭೇಟಿ ಮಾಡಿ, ನಗರದಲ್ಲಿ ಅಶಾಂತಿ ಸೃಷ್ಟಿಸಿದವರನ್ನು ಶೀಘ್ರ ಬಂಧಿಸಿ ಗಡಿಪಾರು ಮಾಡಬೇಕು, ಅಮಾಯಕರನ್ನು ಬಂಧಿಸದೇ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಶಾಂತಿ ಮರುಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.ಸೆ.15ರಂದು ಅಹ್ಮದ್ ನಗರದಲ್ಲಿ ಬಾವುಟ ಕಟ್ಟುವ ವಿಚಾರದ ಗಲಾಟೆ ಬಗ್ಗೆ ಪೊಲೀಸರು ದೂರು ದಾಖಲಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಆದರೆ, ಮರುದಿನ ನಗರದ ಮಹಾನಗರ ಪಾಲಿಕೆ ಎದುರು ನಡೆದ ಪ್ರತಿಭಟನೆಯಲ್ಲಿ ಸತೀಶ್ ಪೂಜಾರಿ ಹಾಗೂ ಇತರರು ಒಂದು ಕೋಮಿನ ವಿರುದ್ಧ ನೀಡಿದ ಹೇಳಿಕೆ ವಿಡಿಯೋ ವೈರಲ್ ಆದ ನಂತರ ಮುಸ್ಲಿಂ ಮುಖಂಡರು, ಮಂಡಕ್ಕಿ ಭಟ್ಟಿಗಳ ಅಧ್ಯಕ್ಷರು ಒಟ್ಟುಗೂಡಿ ಆಜಾದ್ ನಗರ ಮತ್ತು ಪಿ.ಜೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪೊಲೀಸ್ ಅಧಿಕಾರಿಗಳು ಕಾನೂನು ಕ್ರಮ ಕೈಗೂಳ್ಳುವ ಆಶ್ವಾಸನೆ ನೀಡಿದ್ದರು ಎಂದು ಮುಖಂಡರು ಹೇಳಿದರು.
ಇದೇ ವೇಳೆ ಮರುದಿನ ಬೇತೂರು ರಸ್ತೆಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲೂ ಸತೀಶ್ ಪೂಜಾರಿ ಕಾಣಿಸಿಕೊಂಡಾಗ ಮತ್ತೆ ಪ್ರಚೋದನಕಾರಿ ಹೇಳಿಕೆ ನೀಡಲು ಬಂದಿದ್ದಾನೆಂದು ತಿಳಿದು ಹಾಗೂ ಕೋಮು ಸಂಘರ್ಷ ಉಂಟುಮಾಡುವ ಹೇಳಿಕೆ ನೀಡಿದ ಮೇಲೆ ಎಫ್.ಐ.ಆರ್. ದಾಖಲಿಸಲಾಯಿತು. ಆದರೂ ಸತೀಶ್ ಪೂಜಾರಿಯನ್ನು ಬಂಧಿಸದೇ ಗಣೇಶ ಮೆರವಣಿಗೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಯಿತು. ಇದರಿಂದಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೆಲವರ ಮೇಲೆ ಹಲ್ಲೆಗಳೂ ನಡೆದಿದ್ದವು ಎಂದು ಮುಖಂಡರು ಈ ವೇಳೆ ಅಧಿಕಾರಿಗಳ ಗಮನಕ್ಕೆ ತಂದರು.ಪ್ರಚೋದನಕಾರಿ ಹೇಳಿಕೆ ನೀಡಿದ ಸತೀಶ್ ಪೂಜಾರಿ ಹಾಗೂ ದಾವಣಗೆರೆ ಶಾಂತಿಗೆ ಭಂಗ ತಂದ ಪ್ರತಿಭಟನೆ ನೇತೃತ್ವ ವಹಿಸಿದ್ದ ಎಸ್.ಟಿ. ವೀರೇಶ್, ರಾಜನಹಳ್ಳಿ ಶಿವಕುಮಾರ್, ಜೋಳ್ಳಿಗುರು, ಎಂ.ವೀರೇಶ್, ಲೋಕಿಕೆರೆ ನಾಗರಾಜ್ ಮತ್ತು ಇತರರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು. ಅಮಾಯಕರನ್ನು ಶೀಘ್ರವಾಗಿ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷರಾದ ಯಹಿಯಾ, ಜಿಲ್ಲಾ ಉಪಾಧ್ಯಕ್ಷ ರಜ್ವಿ ರಿಯಾಝ್ ಅಹಮದ್, ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್, ಜಿಲ್ಲಾ ಸಮಿತಿ ಸದಸ್ಯರಾದ ಇಸ್ಮಾಯಿಲ್ ಜಬಿವುಲ್ಲಾ, ಮನ್ಸೂರ್ ಆಲಿ, 2ನೇ ವಾರ್ಡಿನ ಕಾರ್ಪೊರೇಟರ್ ದಾದಾಪೀರ್ ಇತರರು ಇದ್ದರು.