ಸಾರಾಂಶ
ತಲಕಾವೇರಿ ಜಾತ್ರೋತ್ಸವಕ್ಕೆ ಸಂಬಂಧಿಸಿದಂತೆ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಯಾವುದೇ ವಿಘ್ನ ಬಾರದಿರಲಿ ಎಂದು ಪ್ರಾರ್ಥಿಸಿ ನಂದಾ ದೀಪ ಬೆಳಗಿಸಿ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ತಲಕಾವೇರಿ ಜಾತ್ರೋತ್ಸವಕ್ಕೆ ಸಂಬಂಧಿಸಿದಂತೆ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಯಾವುದೇ ವಿಘ್ನ ಬಾರದಿರಲಿ ಎಂದು ಪ್ರಾರ್ಥಿಸಿ, ಭಾಗಮಂಡಲದ ಶ್ರೀ ಭಗ೦ಡೇಶ್ವರ ದೇವಾಲಯದಲ್ಲಿ ಮಂಗಳವಾರ ನಂದಾ ದೀಪ ಬೆಳಗಿಸಿ ಚಾಲನೆ ನೀಡಲಾಯಿತು.ಸೆ. 26 ರಿಂದ ಆರಂಭಗೊಂಡ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಜ್ಞಾ ಮುಹೂರ್ತ, ಪತ್ತಾಯಕ್ಕೆ ಅಕ್ಕಿ ಹಾಕುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದ್ದು ಮಂಗಳವಾರ ಅಕ್ಷಯಪಾತ್ರೆಗೆ ಅಕ್ಕಿ ಹಾಕುವ ಕಾರ್ಯಕ್ರಮ ಜರುಗಿತು. ಅರ್ಚಕ ರವಿ ಭಟ್ ನೇತೃತ್ವದಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಜರುಗಿದ ಬಳಿಕ ಅಪರ ಜಿಲ್ಲಾಧಿಕಾರಿ ಐಶ್ವರ್ಯ ಹಾಗೂ ತಲಕಾವೇರಿ ಕ್ಷೇತ್ರದ ತಕ್ಕರಾದ ಕೋಡಿ ಮೋಟಯ್ಯ ನಂದಾದೀಪವನ್ನು ಬೆಳಗಿಸಿದರು. ಬೆಳಗ್ಗೆ 11:45 ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆಗೆ ಭಾಗಮಂಡಲ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಅಕ್ಷಯ ಪಾತ್ರೆಗೆ ಅಕ್ಕಿಯನ್ನು ಸುರಿದು ಚಾಲನೆ ನೀಡಿದರು. ಇಂದಿನಿಂದ ಒಂದು ತಿಂಗಳ ಕಾಲ ಕಿರು ಸಂಕ್ರಮಣದವರೆಗೆ ನಂದಾದೀಪ ತುಪ್ಪದಿಂದ ಉರಿಯಲಿದೆ. ತುಲಾ ಮಾಸದಲ್ಲಿ ಜಾತ್ರೆಗೆ ಯಾವುದೇ ವಿಘ್ನ ಬಾರದಿರಲಿ ಎಂಬ ನಂಬಿಕೆಯಿಂದ ನಂದಾ ದೀಪವನ್ನು ಉರಿಸಲಾಗುತ್ತಿದೆ. ಬಳಿಕ ಮಹಿಳೆಯರು ಭಕ್ತರು ಪಡಿಯಕ್ಕಿಯನ್ನು ಮನೆಗಳಿಗೆ ಕೊಂಡೊಯ್ದರು.ಅಕ್ಷಯಪಾತ್ರೆಯಿಂದ ಕೊಂಡೊಯ್ದ ಅಕ್ಕಿಯಿಂದ ಸಂಪತ್ತು ವೃದ್ದಿಸಲಿದೆ ಎಂಬ ನಂಬಿಕೆ ಭಕ್ತರದ್ದು. ಸಂಜೆ 4:45 ಕ್ಕೆ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿಯನ್ನು ಇರಿಸಲಾಯಿತು. ಸಾಂಪ್ರದಾಯಿಕ ಆಚರಣೆಯಲ್ಲಿ ಭಾಗಮಂಡಲ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ , ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ, ಕಾರ್ಯದರ್ಶಿ ಪೇರಿಯನ ಉದಯ ಅಕಾಡೆಮಿ ಸದಸ್ಯರಾದ ಕುದುಪಜೆ ಪ್ರಕಾಶ್, ಪಟ್ಟ ಮಾಡ ಗಿರಿ, ಮಣವಟ್ಟಿರ ಪಾಪು, ಅಪಾಡಂಡ ಕೌಂಡಿನ್ಯ, ಬಡ್ಡಿರ ನಂದ, ದೇವಂಗೋಡಿ ಹರ್ಷ, ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಅಧ್ಯಕ್ಷರಾದ ಕುದುಕುಳಿ ಕಿಶೋರ್ ಸ್ಥಳೀಯ ಬಳ್ಳಡ್ಕ ಕುಟುಂಬಸ್ಥರು ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.