ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪ್ರತಿಭಾ ಕಾರಂಜಿ ಪೂರಕ: ಶಾಸಕ ಭೀಮಣ್ಣ

| Published : Aug 31 2024, 01:36 AM IST

ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪ್ರತಿಭಾ ಕಾರಂಜಿ ಪೂರಕ: ಶಾಸಕ ಭೀಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಳ್ಳುವಂತೆ ಮಾಡುವ ಹಾಗೂ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಸರ್ಕಾರ ರೂಪಿಸಿದ ಕಾರ್ಯಕ್ರಮವೇ ಪ್ರತಿಭಾ ಕಾರಂಜಿ.

ಶಿರಸಿ: ಪ್ರತಿಭಾ ಕಾರಂಜಿಯು ಗ್ರಾಮೀಣದ ಸಂಸ್ಕೃತಿಯನ್ನು ಉಳಿಸಲು ಸಹಕಾರಿಯಾಗಿದ್ದು, ಮಕ್ಕಳಲ್ಲಿ ಸಂಸ್ಕಾರ ಬೆಳೆದು ಅವರು ದೇಶದ ಭವಿಷ್ಯವಾಗಿ ರೂಪುಗೊಳ್ಳಲು ಸಾಧ್ಯವಾಗಲಿದೆ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ಶುಕ್ರವಾರ ತಾಲೂಕಿನ ಶಿರಸಿಮಕ್ಕಿ ಸಹಿಪ್ರಾ ಶಾಲೆಯಲ್ಲಿ ಹುಣಸೇಕೊಪ್ಪ ಕ್ಲಸ್ಟರ್ ಮಟ್ಟದ ೨೦೨೪- ೨೫ನೇ ಸಾಲಿನ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಸಕಲ ವ್ಯವಸ್ಥೆ ಕಲ್ಪಿಸುತ್ತಿದ್ದರೂ ದೇಶದಲ್ಲಿ ಶೇ. ೧೮ರಿಂದ ೨೦ ಜನ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯಬೇಕು. ನಮ್ಮ ಪೂರ್ವಜರು ಕಂಡ ರಾಮರಾಜ್ಯದ ಕನಸು ನನಸಾಗಬೇಕಾದರೆ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಅದರ ಜತೆ ಸಂಸ್ಕಾರ ನೀಡಬೇಕು.

ರಾಜ್ಯ ಸರ್ಕಾರ ೧೩೦೦೦ ಪ್ರತಿಭಾವಂತ ಶಿಕ್ಷಕರನ್ನು ನೇಮಿಸಿದೆ. ಸರ್ಕಾರಿ ಶಾಲಾ- ಕಾಲೇಜುಗಳಲ್ಲೂ ಒಳ್ಳೆಯ ಶಿಕ್ಷಕರಿದ್ದಾರೆ. ಸರ್ಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳಲ್ಲಿ ನೀಡುವಂಥ ಗುಣಮಟ್ಟದ ಕಲಿಕೆ ನೀಡಲಾಗುತ್ತಿದೆ. ಆದ್ದರಿಂದ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ಕಳುಹಿಸಬೇಕು. ಗ್ರಾಮಿಣದ ಜನರು ತಮ್ಮ ಮಕ್ಕಳನ್ನು ಊರಿನಲ್ಲೆ ಇರುವ ಶಾಲೆಗಳಿಗೆ ಕಳುಹಿಸಿ ತಮ್ಮ ಊರಿನ ಶಾಲೆಗಳನ್ನು ಉಳಿಸಿಕೊಳ್ಳಬೇಕು ಎಂದರು.ಮುಖಂಡ ಎಸ್.ಕೆ. ಭಾಗ್ವತ್ ಪ್ರಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಪ್ರತಿಭಾ ಕಾರಂಜಿ ಆಕರ್ಷಣೆ ಕಳೆದುಕೊಂಡಿದೆ. ಗುಂಪು ಸ್ಪರ್ಧೆ ಮರೆಯಾಗಿದೆ. ವೈಯಕ್ತಿಕ ಸ್ಪರ್ಧೆಗಳಲ್ಲಿ ಮಕ್ಕಳು ಅಷ್ಟೇನು ಆಸಕ್ತಿ ತೋರುತ್ತಿಲ್ಲ. ಕಾಟಾಚಾರಕ್ಕೆ ಕಾರ್ಯಕ್ರಮ ಮಾಡುವಂತೆ ಆಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ಗುಂಪು ಸ್ಪರ್ಧೆಗಳನ್ನೂ ಅಳವಡಿಸಿ ಇನ್ನಷ್ಟು ಜನಪ್ರಿಯವಾಗುಂವತೆ ಮಾಡಬೇಕು ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಮಹೇಶ ಹೆಗಡೆ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಯಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ಶೆಟ್ಟಿ, ಉಪಾಧ್ಯಕ್ಷೆ ರಾಜೇಶ್ವರಿ ಗೌಡ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು. ಶಾಲಾ ಮುಖ್ಯಾಧ್ಯಾಪಕಿ ತಾರಾ ಹೆಗಡೆ, ಸಹಶಿಕ್ಷಕಿ ಸುಮಲತಾ ಮುರ್ಡೇಶ್ವರ ನಿರೂಪಿಸಿದರು. ಸಿಆರ್‌ಪಿ ರಜನಿ ಭಟ್ ಸ್ವಾಗತಿಸಿದರು.ಸರ್ಕಾರದ ಕಾರ್ಯಕ್ರಮ: ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಳ್ಳುವಂತೆ ಮಾಡುವ ಹಾಗೂ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಸರ್ಕಾರ ರೂಪಿಸಿದ ಕಾರ್ಯಕ್ರಮವೇ ಪ್ರತಿಭಾ ಕಾರಂಜಿ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.