ಸಾರಾಂಶ
ಮಹಾಲಿಂಗಪುರ: ಮಹಾಲಿಂಗಪುರ ತಾಲೂಕು ಹೋರಾಟ ಸುಮಾರು 37 ವರ್ಷಗಳ ಇತಿಹಾಸ ಹೊಂದಿದೆ. ನಮ್ಮ ಧರಣಿ ಸತ್ಯಾಗ್ರಹ ಪ್ರಾರಂಭವಾಗಿ ಏ.14ಕ್ಕೆ ಎರಡು ವರ್ಷಗಳು ಗತಿಸಿದ್ದರೂ ತಾಲೂಕು ರಚನೆ ಮರೀಚಿಕೆಯಾಗಿದೆ ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ವಿಷಾದ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಮಹಾಲಿಂಗಪುರ ತಾಲೂಕು ಹೋರಾಟ ಸುಮಾರು 37 ವರ್ಷಗಳ ಇತಿಹಾಸ ಹೊಂದಿದೆ. ನಮ್ಮ ಧರಣಿ ಸತ್ಯಾಗ್ರಹ ಪ್ರಾರಂಭವಾಗಿ ಏ.14ಕ್ಕೆ ಎರಡು ವರ್ಷಗಳು ಗತಿಸಿದ್ದರೂ ತಾಲೂಕು ರಚನೆ ಮರೀಚಿಕೆಯಾಗಿದೆ ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ವಿಷಾದ ವ್ಯಕ್ತಪಡಿಸಿದರು.ಭಾನುವಾರ ತಾಲೂಕು ಹೋರಾಟ ವೇದಿಕೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಜಯಂತಿ ನಿಮಿತ್ತ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಸರ್ವ ಕಾಲಕ್ಕೂ ಸರ್ವ ಜನಾಂಗಕ್ಕೂ ಒಳ್ಳೆಯದಾಗಲೆಂಬ ಉದ್ದೇಶ ಹೊಂದಿದ್ದ ಅಂಬೇಡ್ಕರ್ ಅವರು ತಾವು ರಚಿಸದ ಸಂವಿಧಾನದಂತೆ ತಾವು ಕೂಡಾ ನಡೆದು ತೋರಿಸಿದರು. ಅದರಂತೆ ನಾವು ಕೂಡಾ ಅವರ ಆಶಯದಂತೆ ಕಾನೂನು ಗೌರವಿಸುತ್ತಾ ಮಹಾತ್ಮಾ ಗಾಂಧಿಯವರ ಶಾಂತಿ ಸಂದೇಶದ ಮಾರ್ಗದಲ್ಲಿ ಹೋರಾಟ ಮುಂದುವರೆಸಿದ್ದೇವೆ. ನಮ್ಮ ಹೋರಾಟಕ್ಕೆ ಜಯ ಸಿಗುವ ಕಾಲ ದೂರವಿಲ್ಲ ಎಂಬ ನಂಬಿಕೆ ನಮ್ಮದಾಗಿದೆ ಎಂದರು.
ಭಾನುವಾರದ ಧರಣಿ ಸತ್ಯಾಗ್ರಹದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ರಫಿಕ್ ಮಾಲದಾರ, ಸಿದ್ದು ಶಿರೋಳ, ಮಹಾಲಿಂಗಪ್ಪ ಅವರಾದಿ, ದುಂಡಪ್ಪ ಇಟ್ನಾಳ, ಸತ್ಯಪ್ಪ ಬ್ಯಾಳಿ, ಸುನೀಲ ಸುತಗುಂಡ, ಭೀಮಶಿ ನಾಯಕ, ಎಸ್.ಎಚ್.ನಾವಿ, ಬಸಪ್ಪ ದೇಸಾಯಿ ಮುಂತಾದವರು ಭಾಗವಹಿಸಿದ್ದರು.