ಮಂಡ್ಯದಲ್ಲಿ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ತಮಟೆ ಚಳವಳಿ

| Published : Oct 17 2024, 12:12 AM IST

ಸಾರಾಂಶ

ಒಳಮೀಸಲಾತಿ ಜಾರಿಯಾಗುವರೆಗೆ ಬ್ಯಾಕ್‌ಲಾಗ್ ಹುದ್ದೆಗಳನ್ನು ಮತ್ತೆ ಇತರೆ ನೇಮಕಾತಿಗಳನ್ನು ರದ್ದು ಪಡಿಸಬೇಕು. ಜಾತಿ ಜನಗಣಿತಿ ವರದಿ ಮುನ್ನೆಲೆಗೆ ತಂದು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಗೊಂದಲ ಸೃಷ್ಟಿಸುವ ಜಾತಿ ಜನಗಣತಿ ವರದಿಯನ್ನು ಕೈಬಿಟ್ಟು ಮೊದಲು ಒಳಮೀಸಲಾತಿ ಜಾರಿಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳಮೀಸಲಾತಿಯನ್ನು ಕಾಂಗ್ರೆಸ್‌ನ ಆರನೇ ಗ್ಯಾರಂಟಿಯಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮಾದಿಗರ ಒಳಮೀಸಲಾತಿ ಜಾರಿಗಾಗಿ ಹೋರಾಟ ಸಮಿತಿ ಕಾರ್ಯಕರ್ತರು ನಗರದಲ್ಲಿ ಬುಧವಾರ ತಮಟೆ ಚಳವಳಿ ನಡೆಸಿದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಸೇರಿದ ಸಮಿತಿ ಕಾರ್ಯಕರ್ತರು ನಂತರ ಬೆಂಗಳೂರು- ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದರು.ಒಳಮೀಸಲಾತಿ ಜಾರಿಯಾಗುವರೆಗೆ ಬ್ಯಾಕ್‌ಲಾಗ್ ಹುದ್ದೆಗಳನ್ನು ಮತ್ತೆ ಇತರೆ ನೇಮಕಾತಿಗಳನ್ನು ರದ್ದು ಪಡಿಸಬೇಕು. ಜಾತಿ ಜನಗಣಿತಿ ವರದಿ ಮುನ್ನೆಲೆಗೆ ತಂದು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಗೊಂದಲ ಸೃಷ್ಟಿಸುವ ಜಾತಿ ಜನಗಣತಿ ವರದಿಯನ್ನು ಕೈಬಿಟ್ಟು ಮೊದಲು ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟರಿಗೆ ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಲೇ ಇದ್ದೇವೆ ಆದರೂ ಸ್ಪಂದಿಸಿಲ್ಲ. ಸದಾಶಿವ ಆಯೋಗದ ವರದಿ ಮತ್ತು ಸುಪ್ರೀಂಕೋರ್ಟ್ ಆದೇಶದಂತೆ ಜಾರಿಗೊಳಿಸಬೇಕು. ಕಳೆದ 30 ವರ್ಷಗಳಿಂದ ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಚಳವಳಿ ನಡೆಸಿಕೊಂಡು ಬಂದಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಮೂರ್ತಿ ಎ.ಜೆ.ಸದಾಶಿವರವರ ನೇತೃತ್ವದಲ್ಲಿ ಸದಾಶಿವ ಆಯೋಗವನ್ನು 2005ರಲ್ಲಿ ರಚನೆ ಮಾಡಿ ಸಂಪೂರ್ಣ ವರದಿಯನ್ನು 2012 ಅಂದಿನ ಮುಖ್ಯಮಂತ್ರಿ ಸದಾನಂದಗೌಡರಿಗೆ ಸಲ್ಲಿಸಿದೆ. ಸರ್ಕಾರಗಳು ಇದುವರೆಗೂ ವರದಿ ಜಾರಿ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ಅಂದಿನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಆಡಳಿತದ ವೇಳೆ ಸದಾಶಿವ ಆಯೋಗದ ವರದಿ ಮತ್ತು ನಾಗಮೋಹನ್ ದಾಸ್ ವರದಿಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜಿ.ಸಿ.ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಿದ್ದು, ಸಂಪುಟ ಸಮಿತಿ ತನ್ನ ವರದಿಯನ್ನು ಮೂರು ತಿಂಗಳ ಒಳಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಹೀಗಿರುವ 15ರ ಬದಲಾಗಿ ಪರಿಶಿಷ್ಟ ಜಾತಿಗೆ 17 ಮತ್ತು ಪರಿಶಿಷ್ಟ ಪಂಗಡಕ್ಕೆ 3ರ ಬದಲಾಗಿ 7 ಕ್ಕೆ ಮೀಸಲಾತಿಯನ್ನು ಒಟ್ಟು ಶೇ.24 ಹೆಚ್ಚಿಸಿ ಸಂಪುಟದಲ್ಲಿ ತೀರ್ಮಾನ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೂ ತಡ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಪರಿಶಿಷ್ಟ ಜಾತಿಗಳ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದಲ್ಲಿ 7 ಜನ ನ್ಯಾಯಾಧೀಶರ ಸಂವಿಧಾನ ಪೀಠ ತನ್ನ ಆದೇಶದಲ್ಲಿ ಮಹತ್ವದ ತೀರ್ಪನ್ನು ನೀಡಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ತನ್ನ ತೀರ್ಪಿನಲ್ಲಿ ತಿಳಿಸಿರುವುದರಿಂದ ರಾಜ್ಯ ಸರ್ಕಾರ ವರದಿ ಜಾರಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಎನ್.ಆರ್.ಚಂದ್ರಶೇಖರ್, ಸಿ.ಕೆ.ಪಾಪಯ್ಯ, ಶಂಕರಪ್ರಸಾದ್, ಬಿ.ಕೃಷ್ಣ, ಅನ್ನದಾನಿ, ನಂಜುಂಡ ಮರ್ಯ, ಕನ್ನಲಿ ಪುಟ್ಟಸ್ವಾಮಿ, ವಿಜಯಕುರ್ಮಾ, ನಂಜುಂಡಸ್ವಾಮಿ, ಎಚ್.ಸಿ.ಶ್ಯಾಂಪ್ರಸಾದ್, ಶಿವರಾಜ ಮರಳಿಗ, ಕೆಂಪಯ್ಯ, ಕೃಷ್ಣ, ಅವಿನಂದನ್, ತಿಮ್ಮೇಶ್, ಚಾಮನಹಳ್ಳಿ ಮಂಜು ಭಾಗವಹಿಸಿದ್ದರು.