ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದ ಡಿ ದೇವರಾಜು ಅರಸ್ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಂದಲೇ ಟ್ಯಾಂಕ್ ಸ್ವಚ್ಛಗೊಳಿಸುತ್ತಿರುವ ಘಟನೆ ಭಾನುವಾರ ಬೆಳಗ್ಗೆ ಜರುಗಿದೆ.ವಿದ್ಯಾರ್ಥಿನಿಲಯದ ಸುಮಾರು ಎಂಟಕ್ಕು ಹೆಚ್ಚು ವಿದ್ಯಾರ್ಥಿಗಳು ತಮ್ಮ ಸಮವಸ್ತ್ರ ಬಿಚ್ಚಿ ಟವೆಲ್ ಸುತ್ತಿಕೊಂಡು ಸುಮಾರು 10 ಅಡಿ ಎತ್ತರದ ಟ್ಯಾಂಕ್ ಸ್ವಚ್ಛಗೊಳಿಸುತ್ತಿರುವ ಬಗ್ಗೆ ಪಟ್ಟಣದ ನಾಗರಿಕರು ಮಾಧ್ಯಮದವರಿಗೆ ತಿಳಿಸಿದ್ದಾರೆ. ತಕ್ಷಣ ಮಾಧ್ಯಮದವರು ಟ್ಯಾಂಕ್ ಸ್ವಚ್ಛಗೊಳಿಸುತ್ತಿರುವ ವಿದ್ಯಾರ್ಥಿಗಳ ವಿಡಿಯೋ ಹಾಗೂ ಫೋಟೋ ಚಿತ್ರೀಕರಣ ಮಾಡಿದ್ದಾರೆ. ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಂತೆ ಸ್ವಚ್ಛಗೊಳಿಸುತ್ತಿದ್ದ ವಿದ್ಯಾರ್ಥಿಗಳು ನಿಲಯದ ಒಳಗೆ ಓಡಿಹೋಗಿ ರೂಮ್ ಗಳಲ್ಲಿ ಅವಿತುಕೊಂಡಿದ್ದಾರೆ.ಈ ಸಂಬಂಧ ಮಾಧ್ಯಮದವರು ವಾರ್ಡನ್ ಮಣಿಕಂಠನಿಗೆ ದೂರವಾಣಿ ಕರೆ ಮಾಡಿ ವಿದ್ಯಾರ್ಥಿಗಳಿಂದ ಟ್ಯಾಂಕ್ ಸ್ವಚ್ಛಗೊಳಿಸುತ್ತಿರುವುದು ಸರಿಯೇ? ಯಾವುದೇ ಸುರಕ್ಷತೆ ವಹಿಸದೆ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾರೆ, ಯಾವುದಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನಿಲಯ ಪಾಲಕ ಮಣಿಕಂಠ ಮಾತನಾಡಿ, ನಾನು ವಿದ್ಯಾರ್ಥಿಗಳಿಂದ ಸ್ವಚ್ಛ ಮಾಡಿಸುತ್ತಿರುವುದು ನೂರಕ್ಕೆ ನೂರರಷ್ಟು ಸರಿ, ಪ್ರತಿ ಭಾನುವಾರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು. ಆಗ ಸ್ವಚ್ಛತಾ ಕಾರ್ಯಕ್ರಮ ನಿಲಯದ ಸುತ್ತಮುತ್ತ ಮಾಡಬೇಕು ಅದನ್ನು ಹೊರತುಪಡಿಸಿ ಟ್ಯಾಂಕ್ ಸ್ವಚ್ಛಗೊಳಿಸುತ್ತಿರುವುದು ಸರಿಯೇ? ಎಂದಾಗ, ಹೆಚ್ಚು ಕಡಿಮೆಯಾದಾಗ ನಾವು ಅದನ್ನು ಒಪ್ಪಿಕೊಳ್ಳುತ್ತೇವೆ, ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಮಾತನಾಡುತ್ತೇವೆ ಬಿಡಿ ಎಂದರೆ, ನೀವು ಏನಾದರೂ ಮಾತನಾಡಿಕೊಳ್ಳಿ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಇವರ ದರ್ಪ ಹಾಗೂ ಅಹಂಕಾರದ ಮಾತುಗಳು ಯಾವ ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಕಮ್ಮಿ ಇಲ್ಲ.ಇದಲ್ಲದೆ ಫೆ. 23ರಂದು ನಿಲಯದ ವಿದ್ಯಾರ್ಥಿಗಳು ತಡರಾತ್ರಿ ಓಡಾಡುತ್ತಿರುವ ಬಗ್ಗೆ ವಾರ್ಡನ್ ಗೆ ಮಾಹಿತಿ ಕೇಳಿದರೆ ಆಗಲು ಸಹ ಬೇಜವಾಬ್ದಾರಿ ಉತ್ತರ ನೀಡಿದ್ದರು ಎಂದು ತಿಳಿದುಬಂದಿದೆ. ಕಳೆದು ಒಂದು ತಿಂಗಳ ಹಿಂದೆ ವಸತಿ ನಿಲಯದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದಲೇ ಶೌಚಾಲಯ ಸ್ವಚ್ಛತೆ ಮಾಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿ ವಾರ್ಡನ್ ಹಾಗೂ ಸಹಶಿಕ್ಷಕರನ್ನು ಅಮಾನತು ಮಾಡಲಾಗಿತ್ತು ಆದರೂ ರಾಜ್ಯದಲ್ಲಿ ಇಂತಹ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇನ್ನು ಮುಂದಾದರೂ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ನಡೆದಿರುವ ಘಟನೆಯ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಭಾನುವಾರ ಮಕ್ಕಳ ಕೈಯಲ್ಲಿ ಎತ್ತರದ ಟ್ಯಾಂಕ್ ನಲ್ಲಿ ಸ್ವಚ್ಛಗೊಳಿಸುವ ಕೆಲಸ ಮಾಡಿಸಿರುವ ನಿಲಯ ಪಾಲಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಮಕ್ಕಳನ್ನು ಪೋಷಕರು ವಸತಿ ನಿಲಯಗಳಲ್ಲಿ ಬಿಡುವುದು ಓದುವುದಕ್ಕಾಗಿ ನಿಲಯ ಸ್ವಚ್ಛಗೊಳಿಸುವುದಕ್ಕಲ್ಲ ಹೀಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಸಂಬಂಧಪಟ್ಟ ನಿಲಯದ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ. - ಬಸವರಾಜ್, ಛಲವಾದಿ ಮಹಾಸಭಾ ಸಮಿತಿ ಅಧ್ಯಕ್ಷರು, ಹನೂರು ಟೌನ್
;Resize=(128,128))
;Resize=(128,128))
;Resize=(128,128))
;Resize=(128,128))