ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಡಿಯಲ್ಲಿ ಬರುವ ಪ್ರತಿ ಹಾಸ್ಟೆಲ್ಗೆ ಒಬ್ಬರು ವಾರ್ಡನ್ನಂತೆ ಎಲ್ಲ ಹಾಸ್ಟೆಲ್ಗಳಿಗೆ ಮುಂದಿನ 15 ದಿನಗಳೊಳಗೆ ವಾರ್ಡನ್ಗಳನ್ನು ನೇಮಿಸುವಂತೆ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ನಿರ್ದೇಶಿಸಿದೆ.
ಮಂಗಳೂರು: ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಡಿಯಲ್ಲಿ ಬರುವ ಪ್ರತಿ ಹಾಸ್ಟೆಲ್ಗೆ ಒಬ್ಬರು ವಾರ್ಡನ್ನಂತೆ ಎಲ್ಲ ಹಾಸ್ಟೆಲ್ಗಳಿಗೆ ಮುಂದಿನ 15 ದಿನಗಳೊಳಗೆ ವಾರ್ಡನ್ಗಳನ್ನು ನೇಮಿಸುವಂತೆ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ನಿರ್ದೇಶಿಸಿದೆ.
ಗುರುವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸಭೆ ನಡೆಯಿತು.ಜಿಲ್ಲೆಯ ಹಾಸ್ಟೆಲ್ಗಳಲ್ಲಿ ಪೂರ್ಣ ಪ್ರಮಾಣದ ವಾರ್ಡನ್ಗಳ ತೀವ್ರ ಕೊರತೆ ಇದ್ದು, ಒಬ್ಬೊಬ್ಬ ವಾರ್ಡನ್ಗೆ 3-4 ಹಾಸ್ಟೆಲ್ ಉಸ್ತುವಾರಿ ವಹಿಸಿರುವುದು ಸರಿಯಲ್ಲ. ವಿದ್ಯಾರ್ಥಿಗಳ ಹಿತ ರಕ್ಷಣೆ, ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳ ಮೂಲಸೌಕರ್ಯ, ಊಟದ ವ್ಯವಸ್ಥೆ ಹಾಗೂ ಭದ್ರತೆಯಲ್ಲಿ ಲೋಪ ಬಾರದಂತೆ ನೋಡಿಕೊಳ್ಳಲು ಪ್ರತಿ ಹಾಸ್ಟೆಲ್ಗೆ ಪೂರ್ಣ ಪ್ರಮಾಣದ ವಾರ್ಡನ್ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಂದಿನ 15 ದಿನಗಳೊಳಗೆ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮ ಕೈಗೊಂಡು ಪ್ರತಿ ಹಾಸ್ಟೆಲ್ಗೆ ಒಬ್ಬರಂತೆ ವಾರ್ಡನ್ ನಿಯುಕ್ತಿಗೊಳಿಸುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಯಾವುದೇ ಹಾಸ್ಟೆಲ್ ವಾರ್ಡನ್ ಇಲ್ಲದೆ ಖಾಲಿ ಉಳಿಯಬಾರದು. ಹೆಚ್ಚುವರಿ ಪ್ರಭಾರ ವ್ಯವಸ್ಥೆಗೆ ಬದಲಾಗಿ ಪ್ರತಿಯೊಂದು ಹಾಸ್ಟೆಲಿಗೆ ನಿಯಮಿತವಾದ ವಾರ್ಡನ್ ನಿಯೋಜಿಸಬೇಕು ಎಂದು ಅವರು ಸೂಚಿಸಿದರು.ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ 23 ಹಾಸ್ಟೆಲ್ಗಳು ಬಾಡಿಗೆ ಕಟ್ಟಡದಲ್ಲಿದ್ದು, ಇವುಗಳಿಗೆ ಜಮೀನು ಮಂಜೂರು ಮಾಡಿ ಸ್ವಂತ ಕಟ್ಟಡ ನಿರ್ಮಿಸಬೇಕು. ಪ್ರತಿ ಹಾಸ್ಟೆಲ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಬೇಕು ಎಂದು ಸಮಿತಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿತು.ಹಾಸ್ಟೆಲ್ ಸೀಟ್ ಸಿಗದವರಿಗೆ ವಿದ್ಯಾಸಿರಿ ಯೋಜನೆಯಲ್ಲಿ ಕಡಿಮೆ ವಿದ್ಯಾರ್ಥಿಗಳಿಗೆ ಪ್ರಯೋಜನ ದೊರಕಿದ್ದು, ಅಗತ್ಯ ಅನುದಾನ ಪಡೆದುಕೊಂಡು ಎಲ್ಲರಿಗೂ ಯೋಜನೆಯ ಲಾಭ ನೀಡಬೇಕು. ಹಾಸ್ಟೆಲ್ಗಳಿಗೆ ಕಟ್ಟಡ ನಿರ್ಮಾಣ, ಹಾಸಿಗೆ, ಮಂಚ ಖರೀದಿಸುವಾಗ ಆಯಾ ಪ್ರದೇಶದ ಹವಾಮಾನಕ್ಕೆ ಅನುಗುಣವಾಗಿ ಖರೀದಿಸಬೇಕು ಎಂದು ಅವರು ಸೂಚಿಸಿದರು. ಖಾಸಗಿ ಅನುದಾನಿತ ವಿದ್ಯಾರ್ಥಿಗಳಿಗೆ ನೀಡುವ ಪ್ರತಿ ವಿದ್ಯಾರ್ಥಿಗಳ ಊಟದ ವೆಚ್ಚ ಅತಿ ಕಡಿಮೆಯಾಗಿದ್ದು, ಇದನ್ನು ಸರ್ಕಾರಿ ಹಾಸ್ಟೆಲ್ನಲ್ಲಿರುವಷ್ಟೇ ಮೊತ್ತ ಮಂಜೂರು ಮಾಡಬೇಕು ಎಂದು ಅವರು ತಿಳಿಸಿದರು.
ಅಗತ್ಯ ಹಾಸ್ಟೆಲ್ ನಿರ್ಮಿಸಿ: ಅಲ್ಪಸಂಖ್ಯಾತರ ಇಲಾಖೆಯಲ್ಲಿ ಹಾಸ್ಟೆಲ್ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದರೂ ಸಿಗುತ್ತಿಲ್ಲ. ಈ ವರ್ಷ ಜಿಲ್ಲೆಯಲ್ಲಿ 12 ಸಾವಿರ ಮಂದಿ ಹಾಸ್ಟೆಲ್ ಸೀಟಿಗೆ ಅರ್ಜಿ ಸಲ್ಲಿಸಿದ್ದರೂ ಕೇವಲ 275 ಮಂದಿಗೆ ಹೊಸದಾಗಿ ಸೀಟ್ ದೊರಕಿದೆ. ಈ ನಿಟ್ಟಿನಲ್ಲಿ ಬೇಡಿಕೆಗೆ ತಕ್ಕಂತೆ ಹಾಸ್ಟೆಲ್ಗಳನ್ನು ಹೆಚ್ಚಿಸುವಂತೆ ಅವರು ಸೂಚಿಸಿದರು.ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯಕ್, ಬಿ.ಪಿ. ಹರೀಶ್ ಇಕ್ಬಾಲ್ ಹುಸೇನ್, ಕರೆಮ್ಮ ನಾಯಕ್, ಕೆ.ಅಬ್ದುಲ್ ಜಬ್ಬಾರ್, ಕೇಶವ ಪ್ರಸಾದ್, ಹಿಂದುಳಿದ ವರ್ಗಗಳ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಭಾರಿ, ಮಹಾನಗರಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಮತ್ತಿತರರು ಇದ್ದರು.