ಶೋಷಿತ ಸಮುದಾಯಗಳಿಗೆ ತರಳಬಾಳು ಶ್ರೀ ನೆರವು

| Published : Sep 22 2024, 01:52 AM IST

ಸಾರಾಂಶ

ಶೋಷಿತ ಸಮುದಾಯಗಳ ಏಳಿಗೆಗೆ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ನೆರವು ಅಗತ್ಯವಾಗಿದೆ ಎಂದು ಮಾಜಿ ಸಚಿವ ಎಚ್.‌ಆಂಜನೇಯ ಹೇಳಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಶೋಷಿತ ಸಮುದಾಯಗಳ ಏಳಿಗೆಗೆ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ನೆರವು ಅಗತ್ಯವಾಗಿದೆ ಎಂದು ಮಾಜಿ ಸಚಿವ ಎಚ್.‌ಆಂಜನೇಯ ಹೇಳಿದರು.ಸಿರಿಗೆರೆಯಲ್ಲಿ ನಡೆಯುತ್ತಿರುವ ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಸಮಾರಂಭದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು ತರಳಬಾಳು ಮಠ ಯಾವಾಗಲು ಬಡವರ ಪರ ಕಾಳಜಿ ಇಟ್ಟುಕೊಂಡು ಅವರ ಏಳಿಗೆಗೆ ದುಡಿಯುತ್ತಿದೆ. ಮಠದ ಪರಂಪರೆ, ವಿಶಾಲತೆ ಎಲ್ಲಾ ಸಮುದಾಯಗಳನ್ನು ಕೈಹಿಡಿದೆ. ದುಗ್ಗಾಣಿ ಮಠವೆಂಬ ಅಪಕೀರ್ತಿ ಹೊಂದಿದ್ದ ಮಠಕ್ಕೆ ಆರ್ಥಿಕ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಂದಿದ್ದಾರೆ ಎಂದರು.

ಬಾಬಾ ಸಾಹೇಬ್‌ ಅಂಬೇಡ್ಕರ್ ಹೋರಾಟ ಮತ್ತು ಶಿಕ್ಷಣದ ಪರಿಕಲ್ಪನೆಯಲ್ಲಿ ಹೋರಾಟ ಮಾಡಿದರೆ, ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಗ್ರಾಮೀಣರ ಶಿಕ್ಷಣಕ್ಕಾಗಿ ಹೋರಾಟ ಮಾಡಿದ್ದರು ಎಂದು ಅಭಿಪ್ರಾಯಪಟ್ಟರು.ತರಳಬಾಳು ಮಠಕ್ಕೆ ಸಾಂಸ್ಕೃತಿಕ ಶಕ್ತಿಯಾಗಿ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿ ಇದ್ದಾರೆ. ಅವರ ಅಪಾರ ವಿದ್ವತ್‌ ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳ ಗಮನದಲ್ಲಿದೆ. ಆ ಕಾರಣದಿಂದಲೇ ಅವರ ಯೋಜನೆಗಳಿಗೆ ಸರ್ಕಾರ ಸ್ಪಂದಿಸುತ್ತಿದೆ. 56 ಕಿ.ಮೀ. ದೂರದ ಭರಮಸಾಗರ ಏತನೀರಾವರಿ ಪೈಪ್‌ ಲೈನ್‌ ಯೋಜನೆ ಕೇವಲ ಒಂದು ವರ್ಷದ ಅವಧಿಯಲ್ಲಿಯೇ ಮುಗಿದು, ರೈತ ಸಮುದಾಯಕ್ಕೆ ನೀರು ದೊರೆಯುವಂತಾಗಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, 1946 ರಷ್ಟು ಹಿಂದೆಯೇ ಶಿಕ್ಷಣ ಸಂಸ್ಥೆಯನ್ನು ಆರಂಭ ಮಾಡುವ ಮೂಲಕ ಸರ್ವ ಜನಾಂಗದ ಮಕ್ಕಳಿಗೆ ಅನ್ನದಾಸೋಹ, ಅಕ್ಷರ ದಾಸೋಹ ಮಾಡಿದ ಕೀರ್ತಿ ಶಿವಕುಮಾರ ಶ್ರೀಗಳಿಗೆ ಸಲ್ಲುತ್ತದೆ. ಬಸವಾದಿ ಶಿವಶರಣರ ಸಮಕಾಲೀನರು ಸಂಕಲ್ಪಿಸಿದ ಸಾಮಾಜಿಕ ಕ್ರಾಂತಿಯ ತೇರನ್ನು ಶಿವಕುಮಾರ ಶ್ರೀಗಳು ಎಳೆದರು. ಆ ಕೆಲಸದಿಂದ ತರಳಬಾಳು ಗುರುಪರಂಪರೆಗೆ ಕೀರ್ತಿ ಸಂದಿದೆ ಎಂದು ತಿಳಿಸಿದರು.

ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳಿಗೆ ರೈತರ ಅಭಿವೃದ್ಧಿಯ ಕನಸು ಬಿಟ್ಟು ಮತ್ತೊಂದು ಕೆಲಸವಿರಲಿಲ್ಲ. ಅವರ ಕಾರ್ಯಕ್ಷೇತ್ರವೆಲ್ಲವೂ ರೈತರ ಪರವಾಗಿಯೇ ಇವೆ. ಕೆರೆಗಳಿಗೆ ನೀರು, ಕೃಷಿಗೆ ಬೆಂಬಲ ಬೆಲೆ, ಅವರ ಸಾಮಾಜಿಕ ಬದುಕಿನ ಸ್ಥಿತಿಗತಿಗಳ ಬಗ್ಗೆಯೇ ಅವರು ಚಿಂತನೆ ನಡೆಸುತ್ತಾರೆ ಎಂದರು.ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊಟ್ಟಮೊದಲ ಮಹಿಳಾ ಕಾಲೇಜು ಆರಂಭ ಮಾಡಿದ ಕೀರ್ತಿ ಶಿವಕುಮಾರ ಶ್ರೀಗಳಿಗೆ ಸಲ್ಲುತ್ತದೆ. 12ನೆಯ ಶತಮಾನದಲ್ಲಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ತರಳಬಾಳು ಮಠ ನಡೆಯುತ್ತಿದೆ ಎಂದು ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಕಡೂರು ಮಾಜಿ ಶಾಸಕ ಬೆಳ್ಳಿಪ್ರಕಾಶ್‌ ಮಾತನಾಡಿ, ಹರಿದು ಹಂಚಿ ಹೋಗಿದ್ದ ಸಮಾಜವನ್ನು ಒಟ್ಟುಗೂಡಿಸಿ ದಾರಿದೀಪವಾಗಿದ್ದರು. ಅವರು ಸರ್ವಧರ್ಮ ಸಹಿಷ್ಣುಗಳಾಗಿದ್ದರು. ಮಠದಲ್ಲಿ ಎಲ್ಲ ಸಮುದಾಯದ ಮಕ್ಕಳಿಗೆ ಅವಕಾಶ ಮಾಡಿಕೊಟ್ಟು ಸಾಮಾಜಿಕ ಬದಲಾವಣೆಗೆ ಕೆಲಸ ಮಾಡಿದರು ಎಂದರು.ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಸುಮತಿ ಜಯಪ್ಪ ಶ್ರೀಗಳ ಕಲೋಪಾಸನೆ ಕುರಿತು ಉಪನ್ಯಾಸ ನೀಡಿದರು. ದಾವಣಗೆರೆ ಪಂಚಾಕ್ಷರ ಸಂಗೀತ ಶಾಲೆಯ ಶಿವಕುಮಾರ ಸ್ವಾಮಿ ತಂಡದವರು ವಚನ ಗೀತೆ ಹಾಡಿದರು. ತರಳಬಾಳು ಕಲಾಸಂಘದ ಬಾಲಕಿಯರು ಭರತನಾಟ್ಯ ಪ್ರಸ್ತುತಪಡಿಸಿದರು. ಎಂ.ಎನ್.‌ ಶಾಂತಾ ಸ್ವಾಗತಿಸಿದರು. ಈ. ದೇವರಾಜ ಕಾರ್ಯಕ್ರಮ ನಿರೂಪಿಸಿದರು.

ಇಂದಿನ ಕಾರ್ಯಕ್ರಮದ ವಿವರ

ಸಿರಿಗೆರೆ: ಬೆಳಿಗ್ಗೆ 10 ಗಂಟೆಗೆ ಸಭಾ ಮಂಟಪದಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಸ್ಪರ್ಧೆಗಳು, ಶ್ರೀ ತರಳಬಾಳು ಜಗದ್ಗುರು ಪಶು ಚಿಕಿತ್ಸಾಲಯದಲ್ಲಿ ಉಚಿತ ಪಶು ಚಿಕಿತ್ಸೆಗೆ ಶ್ರೀಗಳಿಂದ ಚಾಲನೆ, ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ಇವೆ. ಸಾನ್ನಿಧ್ಯವನ್ನು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಎಂ. ಚಂದ್ರಪ್ಪ, ಶಿವಗಂಗಾ ಬಸವರಾಜ್‌, ಬಿ. ದೇವೇಂದ್ರಪ್ಪ ಇರುವರು. ಅತಿಥಿಗಳಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ್‌, ರಂಗಕರ್ಮಿ ಎಸ್.ಎನ್.‌ ಸೇತುರಾಂ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್‌ ಉಪಸ್ಥಿತರಿರುವರು. ಉಪನ್ಯಾಸವನ್ನು ದಾವಣಗೆರೆ ಬಾಪೂಜಿ ಎಂಜಿನಿಯರಿಂಗ್ ಕಾಲೇಜು ನಿರ್ದೇಶಕ ವೈ. ವೃಷಭೇಂದ್ರಪ್ಪ ನಡೆಸಿಕೊಡುವರು. ಸಿಂದಗಿ ಹಿಂದುಸ್ತಾನಿ ಗಾಯಕ ಯಶವಂತ ಬಡಿಗೇರ, ಮಲ್ಲಿಹಗ್ಗ ಮತ್ತು ಯಕ್ಷಗಾನ, ತರಳಬಾಳು ಕಲಾಸಂಘದ ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವವು.