ಸಾರಾಂಶ
- ಪಟ್ಟಣದಲ್ಲಿ ಮೂರು ದಿನಕ್ಕೊಮ್ಮೆ ನಲ್ಲಿ ನೀರು ಸರಬರಾಜು
ಅನಂತ ನಾಡಿಗ್ಕನ್ನಡಪ್ರಭ ವಾರ್ತೆ, ತರೀಕೆರೆಪಟ್ಟಣದಲ್ಲಿ ತಲೆದೋರಿರುವ ಕುಡಿಯುವ ನೀರು ಸರಬರಾಜು ಸಮಸ್ಯೆ ಇಂದು, ನಿನ್ನೆ, ಮೊನ್ನೆಯದಲ್ಲ. ಹಲವು ದಶಕಗಳಿಂದ ಈ ಸಮಸ್ಯೆ ನಿರಂತರವಾಗಿ ನಾಗರಿಕರನ್ನು ಕಾಡುತ್ತಿದೆ. ಕುಡಿಯುವ ನೀರಿನ ಬವಣೆಗೆ ಬೇಸಿಗೆಯೇ ಬರಬೇಕೆಂದೇನಿಲ್ಲ, ವರ್ಷದ ಯಾವ ತಿಂಗಳಿನಲ್ಲೂ ಈ ಸಮಸ್ಯೆಗೆ ಪರಿಹಾರ ದೊರೆತಿಲ್ಲ, ತರೀಕೆರೆ ಮಟ್ಟಿಗೆ ಮಾತ್ರ ಈ ಸಮಸ್ಯೆ ಈವರೆಗೂ ಜೀವಂತವಾಗಿಯೇ ಇದೆ.ತರೀಕೆರೆ ಪಟ್ಟಣಕ್ಕೆ ಸಮೀಪದಲ್ಲೇ ಭದ್ರಾನದಿ ಇದೆ. ಭದ್ರಾ ಬಲದಂಡೆ ನಾಲೆಯ ವಿಶಾಲವಾದ ಜಾಗದಲ್ಲಿ ಪ್ರಕೃತಿ ಕರುಣಿಸಿದ ಪರಿಶುದ್ಧವಾದ ನೀರು ವರ್ಷದ ಎಲ್ಲಾ ತಿಂಗಳುಗಳಲ್ಲಿ ಯಥೇಚ್ಚವಾಗಿ ಹರಿದುಹೋಗುತ್ತಿದೆ. ಆದರೆ ತರೀಕೆರೆ ಪಟ್ಟಣಕ್ಕೆ ಮಾತ್ರ ಸಮರ್ಪಕ ನೀರು ಸರಬರಾಜು ಮರೀಚಿಕೆಯಾಗಿಯೇ ಇದೆ. ದೀಪದ ಕೆಳಗೆ ಕತ್ತಲು ಎನ್ನುವಂತೆ, ಭದ್ರಾ ಅಣೆಕಟ್ಟು ನಿರ್ಮಾಣವಾಗಿ ದಶಕಗಳೇ ಉರುಳಿಹೋದರೂ ನದಿ ದಡದಲ್ಲೇ ಇರುವ ತರೀಕೆರೆ ಪಟ್ಟಣಕ್ಕೆ ಮಾತ್ರ ಮೂರು ದಿನಕ್ಕೊಮ್ಮೆ ನಲ್ಲಿ ನೀರು ಸರಬರಾಜು ಆಗುತ್ತಿದೆ. ಪಟ್ಟಣದ ಜನತೆ ಕುಡಿಯುವ ನೀರಿಗೆ ಭದ್ರಾ ನದಿ ಬಲದಂಡೆ ನೀರೇ ಏಕೈಕ ಆಸರೆ, ಭದ್ರಾ ನದಿ ಬಲದಂಡೆ ನಾಲೆಯಿಂದ ದುಗ್ಲಾಪುರ ಬಳಿ ಜಾಕ್ ವೆಲ್ ಮೂಲಕ ನೀರು ಶುದ್ಧೀಕರಣ ಕೇಂದ್ರಕ್ಕೆ ಹಾಯಿಸಿಕೊಂಡು ಅಲ್ಲಿ ನೀರನ್ನು ಶುದ್ಧೀಕರಿಸಿ ಪಟ್ಟಣಕ್ಕೆ ಸರಬ ರಾಜು ಮಾಡಬೇಕು. ಜಾಕ್ ವೆಲ್ ನಿಂದ ನೀರೆತ್ತುವ ಮೋಟಾರ್ ಅದಕ್ಕನುಗುಣವಾಗಿ ವಿದ್ಯುತ್ ಇತ್ಯಾದಿ ಎಲ್ಲವೂ ಸರಿ ಯಾಗಿ ಕೆಲಸ ನಿರ್ವಹಿಸಿದರೆ ಮಾತ್ರ ಪಟ್ಟಣಕ್ಕೆ ಕುಡಿಯುವ ನೀರು.5.40 ಎಂಎಲ್ ಡಿ:
ತರೀಕೆರೆ ಪಟ್ಟಣ ದಿನದಿಂದ ದಿನಕ್ಕೆ ನಾಲ್ಕು ದಿಕ್ಕಿನಲ್ಲೂ ಬೆಳೆಯುತ್ತಿದೆ. ಎಲ್ಲಾ ಕಡೆ ಜನವಸತಿಯ ಹೊಸ ಹೊಸ ಕಟ್ಟಡಗಳು ನಿರ್ಮಾಣವಾಗುತ್ತಿರುವ ಜತೆಗೆ ಸಣ್ಣ ಪುಟ್ಟ ಗೃಹ ಕೈಗಾರಿಕೆಗಳು ಆರಂಭವಾಗುತ್ತಲೇ ಇದೆ. ಹಾಗಾಗಿ ಉದ್ಯಮ ವ್ಯಾಪಾರ ವಹಿವಾಟುಗಳು ಹೆಚ್ಚಾಗುತ್ತಿರುವುದರಿಂದ ತರೀಕೆರೆ ಪಟ್ಟಣದ ಜನಸಂಖ್ಯೆ ಸುಮಾರು 40 ರಿಂದ 45 ಸಾವಿರ ಇದೆ. ಪಟ್ಟಣಕ್ಕೆ 5.40 ಎಂ.ಎಲ್.ಡಿ.ಯಷ್ಟು ನೀರು ಅಗತ್ಯವಿದೆ. ಪಟ್ಟಣದಲ್ಲಿ ಪುರಸಭೆ ವ್ಯಾಪ್ತಿಯ 23 ವಾರ್ಡುಗಳಲ್ಲೂ 3 ದಿನಕ್ಕೊಮ್ಮೆ ನಲ್ಲಿ ನೀರು ಸರಬರಾಜಾಗುತ್ತದೆ. ಮುಂದಿನ 3 ದಿವಸಕ್ಕಾಗುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಹಬ್ಬ ಹರಿದಿನ ಜಾತ್ರೆ ಉತ್ಸವ ವಿಶೇಷ ದಿನಗಳು ಬಂದರೆ ನೀರು ಹಿಡಿಯಬೇಕೋ ನೆಮ್ಮದಿಯಾಗಿ ಹಬ್ಬ ಮಾಡಬೇಕೋ ತಿಳಿಯುವುದಿಲ್ಲ. ತರೀಕೆರೆ ಪಟ್ಟಣದಲ್ಲಿ 65 ಬೋರ್ ವೆಲ್ ಗಳು, 233 ಕಿರು ನೀರು ಸರಬರಾಜು ಘಟಕಗಳಿವೆ. 8 ಓವರ್ ಹೆಡ್ ಟ್ಯಾಂಕ್ ಗಳಿವೆ. ಕೊಳವೆ ಬಾವಿ, ಕಿರುನೀರು ಸರಬರಾಜು ಘಟಕಗಳಿಂದ ಪಟ್ಟಣದಲ್ಲಿ ನಲ್ಲಿಗಳ ಮೂಲಕ ಪ್ರತಿನಿತ್ಯ ನೀರು ಬಿಡಲಾಗುತ್ತಿದೆ. ಇಷ್ಟಾದರೂ ತರೀಕೆರೆ ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಇದೀಗ ಬೇಸಿಗೆ ಯಲ್ಲಿ ಅದರಲ್ಲೂ ತರೀಕೆರೆ ಪಟ್ಟಣದಲ್ಲಿ 40 ಡಿಗ್ರಿ ಹೆಚ್ಚಿನ ಉಷ್ಣಾಂಶ ಇದೆ. ಬಾಯಾರಿಕೆಗೆ ಎಷ್ಟು ನೀರು ಕುಡಿದರೂ ದಾಹ ತಣಿಯುವುದಿಲ್ಲ. ನಿತ್ಯ ಕುಡಿಯಲು , ಆಹಾರ ಪದಾರ್ಥ ಸಿದ್ಧಗೊಳಿಸಲು ನೀರು ಬೇಕು. ಇದಕ್ಕೆಲ್ಲಾ ಅಪಾರ ಪ್ರಮಾಣದಲ್ಲಿ ನೀರಿನ ಪೂರೈಕೆ ಅತ್ಯಗತ್ಯ. ನೀರಿನ ಅತ್ಯಗತ್ಯತೆಗೆ ಪುರಸಭೆ ಸರ್ಕಾರದ ನೆರವಿನಿಂದ ಪಟ್ಟಣದಲ್ಲಿ ನೀರು ಸಂಗ್ರಹಿಸುವ ಒವರ್ ಹೆಡ್ ಟ್ಯಾಂಕ್ ಹೆಚ್ಚಾಗಬೇಕು ಎಂಬ ಹಿನ್ನೆಲೆಯಲ್ಲಿ ಈಗಿರುವ 8 ಓವರ್ ಹೆಡ್ ಟ್ಯಾಂಕ್‌ಗಳ ಜೊತೆಗೆ ಹೆಚ್ಚು ನೀರಿನ ಸಾಮರ್ಥ್ಯದ ಮತ್ತೆರಡು ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಎಲ್ಲ ಸಿದ್ಧತೆ ಕೈಗೊಂಡಿದೆ. ಅಮೃತ್-2 ಯೋಜನೆಯಡಿ ನಿತ್ಯನೀರು ಸರಬರಾಜಿಗೆ ಕ್ರಮ ವಹಿಸುತ್ತಿದೆ.ಅಲ್ಲದೆ ಸಮೀಪದ ದುಗ್ಲಾಪುರದ ಬಳಿ ಭದ್ರಾನದಿಯಿಂದ ಪಟ್ಟಣಕ್ಕೆ ಸರಬರಾಜಾಗುವ ಕುಡಿಯುವ ನೀರಿನ ಕಾಲುವೆ ಯಿಂದ ಅಕ್ರಮವಾಗಿ ನಿರೆತ್ತುತ್ತಿದ್ದ ಹಲವಾರು ಮೋಟಾರ್ ಪಂಪುಗಳನ್ನು ಪುರಸಭೆ ತೆರವುಗೊಳಿಸಿದ್ದು, ನೀರಿನ ಹರಿವಿನ ವೇಗ ಸರಿಪಡಿಸಿದೆ. ಯಾವುದೇ ತುರ್ತು ಸಮಯದಲ್ಲೂ ತರೀಕೆರೆ ಪಟ್ಟಣಕ್ಕೆ ಸುಮಾರು 25 ದಿನಗಳ ಕಾಲ ಕುಡಿವ ನೀರು ಸರಬರಾಜು ಮಾಡಲು ಮಾನಸಿ ಕೆರೆಯಲ್ಲಿ ನೀರನ್ನು ಮುಂಜಾಗ್ರತೆಯಾಗಿ ಸಂಗ್ರಹಿಸಲಾಗಿದೆ.ಅಮೃತ್-2.0 ಯೋಜನೆ ಶೀಘ್ರವಾಗಿ ಕಾರ್ಯಗತವಾಗಿ 24X 7 ಕುಡಿಯುವ ನೀರು ಪಟ್ಟಣಕ್ಕೆ ಸರಬರಾಜಾ ಗುವಂತಾದರೆ ತರೀಕೆರೆ ಪಟ್ಟಣದ ನೀರಿನ ಸಮಸ್ಯೆಗೆ ಸ್ವಲ್ಪ ಮಟ್ಟಿಗೆ ಪರಿಹಾರ ದೊರೆಯಬಹುದು ಎಂಬುದು ಪಟ್ಟಣದ ಜನರ ನಿರೀಕ್ಷೆ.ಕೋಟ್ಃ
ಪಟ್ಟಣದಲ್ಲಿ 3 ದಿವಸಕ್ಕೊಮ್ಮೆ ಕುಡಿವ ನೀರು ಸರಬರಾಜಾಗುತ್ತಿದ್ದು, ಇದೀಗ ಕಡು ಬೇಸಿಗೆ ಇರುವುದರಿಂದ ನೀರಿನ ಅವಶ್ಯಕತೆ ಹೆಚ್ಚಿದೆ. ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡಲು ಪುರಸಭೆ ಅಡಳಿತ ಅಗತ್ಯ. ಕ್ರಮ ವಹಿಸ ಬೇಕುಎಸ್.ಎನ್.ಸಿದ್ರಾಮಪ್ಪ
ಉಪವಿಭಾಗೀಯ ಮಟ್ಟದ ದೌರ್ಜನ್ಯ ನಿಯಂತ್ರಣ ಉಸ್ತುವಾರಿ ಸಮಿತಿ ಸದಸ್ಯ---ಕೋಟ್ಃ
ತರೀಕೆರೆ ಪಟ್ಟಣದ ಸುಂದರೇಶ್ ಬಡಾವಣೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕೋಡಿಕ್ಯಾಂಪ್ ಟ್ಯಾಂಕ್ ನಿಂದ ನೀರು ಬಿಡುತ್ತಿದ್ದು, 4 ದಿನಕ್ಕೊಮ್ಮೆ ನೀರು ಬಿಡುವಾಗ ನೀರಿನ ಪ್ರಶರ್ ಇಲ್ಲದೆ ನಾಲ್ಕೈದು ಕೊಡ ನೀರು ತುಂಬುವುದು ಕಷ್ಟ ವಾಗುತ್ತಿದೆ. ಒಂದು ಗಂಟೆಯಾದರೂ ನೀರು ಬಿಟ್ಟರೆ ಅನುಕೂಲವಾಗುತ್ತದೆ.ಎಸ್.ಕೆ.ಸ್ವಾಮಿ, ತಾಲೂಕು ಅಧ್ಯಕ್ಷ, ಛಲವಾದಿ ಮಹಾಸಭಾ
-- ---ಬಾಕ್ಸ್--ಕೊಳವೆ ಬಾವಿ ಮೂಲಗಳಿಂದ 233 ಕಿರು ನೀರು ಸರಬರಾಜಿನಿಂದ ಪ್ರತಿನಿತ್ಯ ಬಳಕೆಗೆ ಪುರಸಭೆಯಿಂದ ನೀರು ಸರಬ ರಾಜು ಮಾಡುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಅಗತ್ಯ ಕಂಡುಬಂದಲ್ಲಿ, ಸಮಸ್ಯೆ ಉಂಟಾದರೆ ಪುರಸಭೆ 3 ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅಮೃತ್ 2.0 ಯೋಜನೆಯಡಿ ತರೀಕೆರೆ ಪಟ್ಟಣದಲ್ಲಿ 24X 7 ನೀರು ಸರಬರಾಜಿಗೆ ಈಗಾಗಲೇ ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ ಎಂದು ಪುರಸಬೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ತಿಳಿಸಿದ್ದಾರೆ.
2ಕೆಟಿಆರ್.ಕೆ.1ಃಭದ್ರಾ ಬಲ ದಂಡೆ ಕಾಲುವೆಯಲ್ಲಿ ಅಕ್ರಮವಾಗಿ ನೀರೆತ್ತುತ್ತಿದ್ದ ಮೋಟಾರ್ ಪಂಪುಗಳನ್ನು ಪುರಸಭೆ ತೆರವುಗೊಳಿಸಿದೆ.2ಕೆಟಿಆರ್.ಕೆ.2ಃ ಎಸ್.ಎನ್.ಸಿದ್ರಾಮಪ್ಪ.2ಕೆಟಿಆರ್.ಕೆ.3ಃ ಎಸ್.ಕೆ.ಸ್ವಾಮಿ.2ಕೆಟಿಆರ್.ಕೆ.4ಃ ಹೆಚ್.ಪ್ರಶಾಂತ್, ಪುರಸಭೆ ಮುಖ್ಯಾಧಿಕಾರಿ -------------------