ಸಾರಾಂಶ
ಕನ್ನಡ ತತ್ವಪದ ಸಾಹಿತ್ಯ, ಪ್ರತಿರೋಧದ ನೆಲೆಗಳು ವಿಚಾರ ಬಗ್ಗೆ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ
ಕನ್ನಡಪ್ರಭ ವಾರ್ತೆ ದಾವಣಗೆರೆಅನಾದಿಯಿಂದಲೂ ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಿ, ಸಮಾನತೆಯನ್ನು ತರಲು ತತ್ವಜ್ಞಾನಿಗಳು ಕಾಲಕಾಲಕ್ಕೆ ತಮ್ಮ ಅನುಭವದ ಮೂಲಕ ಪದಗಳನ್ನು ಕಟ್ಟಿ, ಹೇಳಿ ಜನರನ್ನು ಜಾಗೃತರನ್ನಾಗಿಸುವ ಕೆಲಸ ಮಾಡಿಕೊಂಡೇ ಬಂದಿದ್ದಾರೆ ಎಂದು ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ತಿಳಿಸಿದರು.
ತಾಲೂಕಿನ ತೋಳಹುಣಸೆ ಗ್ರಾಮದ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಹಾಗೂ ದಾವಿವಿ ಕನ್ನಡ ಅಧ್ಯಯನ ವಿಭಾಗದಿಂದ ಹಮ್ಮಿಕೊಂಡಿದ್ದ ಕನ್ನಡ ತತ್ವಪದ ಸಾಹಿತ್ಯ, ಪ್ರತಿರೋಧದ ನೆಲೆಗಳು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಕಾವ್ಯ, ಸಾಹಿತ್ಯ, ಕೃತಿಗಳು ಜನರ ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತ ಬಂದಿವೆ ಎಂದರು.ಕನ್ನಡದ ನೆಲದಲ್ಲಿ 17-18ನೇ ಶತಮಾನದ ಕತ್ತಲೆ ಯುಗವನ್ನು ತತ್ವಪದಗಳ ಮೂಲಕ ಬೆಳಕಿನಡೆಗೆ ತಂದ ಕೀರ್ತಿ ತತ್ವಪದಕಾರರಿಗೆ ಸಲ್ಲುತ್ತದೆ. ಸಮಾಜದಲ್ಲಿದ್ದ ಭೇದಭಾವ, ಅಸಮಾನತೆ, ಜಾತೀಯತೆಯನ್ನು ಹೋಗಲಾಡಿಸಿ, ಜನರಿಗೆ ಬದುಕಿನ ನಿಜವಾದ ದರ್ಶನ ಮಾಡಿಸಲು ತತ್ವಪದಗಳನ್ನು ರಚಿಸಿ ಸಮಾಜಕ್ಕೆ ಪರಿಚಯಿಸಿದವರು ತತ್ವಜ್ಞಾನಿಗಳು ಎಂದು ಹೇಳಿದರು.
ಸರ್ಕಾರವು 2017ರಲ್ಲಿ ತತ್ವಪದ ಅಧ್ಯಯನ ಕೇಂದ್ರವನ್ನು ಆರಂಭಿಸಿದ್ದು, 16 ಸಾವಿರಕ್ಕೂ ಅದಿಕ ಪುಟಗಳ ತತ್ವಪದಗಳ ಬೃಹತ್ ಗ್ರಂಥವನ್ನು 50 ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ಈವರೆಗೆ 250 ತತ್ಪಪದಕಾರರ ತತ್ವಪದಗಳನ್ನು ಸಂಗ್ರಹಿಸಿದ್ದೇವೆ. ತತ್ವಪದ ಅಧ್ಯಯನ ಕೇಂದ್ರಗಳಿಂದ ತತ್ವಪದಗಳನ್ನು ಸಂಗ್ರಹಿಸುವ, ಪ್ರಚುರ ಪಡಿಸುವ ಕೆಲಸವನ್ನು ತತ್ವಪದ ಅಧ್ಯಯನ ಕೇಂದ್ರ ಅಂದಿನಿಂದಲೂ ಮಾಡುತ್ತಲೇ ಇದೆ ಎಂದು ತಿಳಿಸಿದರು.ಭವಿಷ್ಯ ಕಟ್ಟಿಕೊಳ್ಳುವ ಯುವ ಸಮುದಾಯ ಪ್ರಸ್ತುತ ಸಮಾಜದ ಬಗ್ಗೆ ಎಚ್ಚರದಿಂದಿರಬೇಕು. ಪ್ರಶ್ನೆ ಮಾಡುವ ಮನೋಭಾವವನ್ನು ಬೆಳಸಿಕೊಳ್ಳಬೇಕು, ಬುದ್ಧ, ಬಸವಣ್ಣ, ಅಂಬೇಡ್ಕರ್, ವಿವೇಕಾನಂದರು ತಮ್ಮ ವಿಚಾರಧಾರೆಯ ಮೂಲಕ ಹೆಸರಾಗಿದ್ದಾರೆ. ಅಂತಹವರನ್ನು ವಿದ್ಯಾರ್ಥಿಗಳು ತಮ್ಮ ಆದರ್ಶವಾಗಿಸಿಕೊಳ್ಳಬೇಕು, ಎರಡು ದಿನಗಳ ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮ ಸಂಚಾಲಕ ಡಾ.ಮಹಾಂತೇಶ ಪಾಟೀಲ ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ಹೆಚ್ಚು ಹೆಚ್ಚು ವಿಮರ್ಶೆ, ಚರ್ಚೆಗಳು ನಡೆದಾಗ ಮಾತ್ರ ಹೊಸ ವಿಚಾರಗಳನ್ನು ಅರಿಯಲು ಸಾಧ್ಯವಾಗುತ್ತದೆ. ತತ್ವಪದಕಾರರು ದೇವರು, ಧರ್ಮ, ಜಾತಿಗಳ ಹಿಂದೆ ಹೋಗದೆ, ಜನರ ಜೀವ, ಅಂತಹವರ ಬದುಕಿನ ಬಗ್ಗೆ ತಮ್ಮದೇ ರೀತಿಯಲ್ಲಿ ಪದಗಳಲ್ಲಿ ಹೇಳುವ ಮೂಲಕ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಿದರು, ಈ ತತ್ವಪದಗಳು ಸರ್ವಕಾಲಕ್ಕೂ ಸಮಾಜಕ್ಕೆ ಸದಾ ದಾರಿ ದೀಪವಾಗಿದೆ ಎಂದರು.ದಾವಿವಿ ಕುಲ ಸಚಿವ ಪ್ರೊ.ಯು.ಎಸ್.ಮಹಾಬಲೇಶ್ವರ ಅಧ್ಯಕ್ಷತೆ ವಹಿಸಿದ್ದರು. ಸಿ.ಬಿ.ಹನುಮಂತಪ್ಪ, ಕನ್ನಡ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ವಿ.ಜಯರಾಮಯ್ಯ, ಮಹಾಂತೇಶ ಕಾಂಬ್ಳೆ ಇತರರು ಇದ್ದರು.