ಟಿಬಿ ಡ್ಯಾಂ: ಎಷ್ಟೇ ನೀರು ಬಂದರೂ ಸದ್ಯ ಹೊರಹರಿವಿನ ಸಮಸ್ಯೆಯಿಲ್ಲ

| Published : Aug 20 2025, 01:30 AM IST

ಟಿಬಿ ಡ್ಯಾಂ: ಎಷ್ಟೇ ನೀರು ಬಂದರೂ ಸದ್ಯ ಹೊರಹರಿವಿನ ಸಮಸ್ಯೆಯಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಜಲಾಶಯ ನಿರ್ಮಿಸುವ ವೇಳೆ ಅಳವಡಿಸಿರುವ 33 ಕ್ರಸ್ಟ್‌ಗೇಟ್‌ ಸಾಮರ್ಥ್ಯ ಮತ್ತು ವಿನ್ಯಾಸ ಒಂದೇ ಆಗಿದೆ. 60 ಅಡಿ ಅಗಲ 20 ಅಡಿ ಉದ್ದದ ವಿನ್ಯಾಸ ಉಳ್ಳದ್ದಾಗಿದೆ. ಪ್ರತಿ ಕ್ರಸ್ಟ್‌ ಗೇಟ್‌ನಿಂದ 19700 ಕ್ಯುಸೆಕ್‌ ನೀರು ಬಿಡುಗಡೆ ಮಾಡಬಹುದಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ತುಂಗಭದ್ರಾ ಜಲಾಶಯ ನಿರ್ಮಿಸಿರುವ ವೇಳೆ ಅಳವಡಿಸಿರುವ ಕ್ರಸ್ಟ್‌ಗೇಟ್‌ಗಳ ವಿನ್ಯಾಸದ ಲೆಕ್ಕಾಚಾರದ ಪ್ರಕಾರ ಪ್ರತಿ ಕ್ರಸ್ಟ್‌ಗೇಟ್‌ ಮೂಲಕ 19700 ಕ್ಯುಸೆಕ್‌ (ಒಟ್ಟು 6.5 ಲಕ್ಷ ಕ್ಯುಸೆಕ್) ನೀರನ್ನು ನದಿಗೆ ಬಿಡುಗಡೆ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ, ಇದೀಗ 19ನೇ ಕ್ರಸ್ಟ್‌ಗೇಟ್ ಸೇರಿದಂತೆ 7 ಕ್ರಸ್ಟ್‌ಗೇಟ್ ಬಾಗಿ, ಆಪರೇಟ್ ಮಾಡಲು ಬರದಂತೆ ಆಗಿದ್ದು ಉಳಿದ 26 ಕ್ರಸ್ಟ್‌ಗೇಟ್‌ ಕಾರ್ಯನಿರ್ವಹಿಸುತ್ತಿರುವುದರಿಂದ ಎಷ್ಟು ನೀರು ಹರಿಸಬಹುದು ಎಂಬ ಚರ್ಚೆ ಶುರುವಾಗಿದೆ.

ಯಾವ ಗೇಟ್ ಎಷ್ಟು ಸಾಮರ್ಥ್ಯ:

ತುಂಗಭದ್ರಾ ಜಲಾಶಯ ನಿರ್ಮಿಸುವ ವೇಳೆ ಅಳವಡಿಸಿರುವ 33 ಕ್ರಸ್ಟ್‌ಗೇಟ್‌ ಸಾಮರ್ಥ್ಯ ಮತ್ತು ವಿನ್ಯಾಸ ಒಂದೇ ಆಗಿದೆ. 60 ಅಡಿ ಅಗಲ 20 ಅಡಿ ಉದ್ದದ ವಿನ್ಯಾಸ ಉಳ್ಳದ್ದಾಗಿದೆ. ಪ್ರತಿ ಕ್ರಸ್ಟ್‌ ಗೇಟ್‌ನಿಂದ 19700 ಕ್ಯುಸೆಕ್‌ ನೀರು ಬಿಡುಗಡೆ ಮಾಡಬಹುದಾಗಿದೆ. ಎಲ್ಲ 33 ಗೇಟ್‌ ತೆರೆದರೆ 6.5 ಲಕ್ಷ ಕ್ಯುಸೆಕ್‌ ನೀರನ್ನು ಒಮ್ಮೇಲೆ ಬಿಡುಗಡೆ ಮಾಡಬಹುದು. ಆದರೆ, ಜಲಾಶಯದ ಇತಿಹಾಸದಲ್ಲಿಯೇ 1992ರಲ್ಲಿ ಒಂದೇ 3.69 ಲಕ್ಷ ಕ್ಯುಸೆಕ್‌ ನೀರು ನದಿಗೆ ಬಿಡುಗಡೆ ಮಾಡಲಾಗಿದೆ. ಸದ್ಯದ ಪರಿಸ್ಥಿತಿ, ಮಾಹಿತಿ ಪ್ರಕಾರ 25 ಗೇಟ್‌ಗಳ ಮೂಲಕ 5.12 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಬಿಡಬಹುದು.

ಎದುರಾದ ಆತಂಕ:

ಜಲಾಶಯಕ್ಕೆ 1.5 ಲಕ್ಷ ಕ್ಯುಸೆಕ್‌ ಒಳಹರಿವಿದ್ದು ಅಷ್ಟೇ ಪ್ರಮಾಣದಲ್ಲಿ ನದಿಗೆ ನೀರು ಹರಿಸಲಾಗುತ್ತಿದೆ. ಇದಕ್ಕಿಂತ ಹೆಚ್ಚಿನ ಒಳಹರಿವು ಬಂದರೆ ಮುಂದೇನು ಎಂಬ ಚಿಂತೆ ಅಧಿಕಾರಿಗಳನ್ನು ಕಾಡುತ್ತಿದೆ. ಈಗಿರುವ ಗೇಟ್‌ಗಳ ಮೂಲಕ ನೀರು ಹರಿಸಿದರೆ ಅವುಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ ಎಂಬ ಆತಂಕವು ಇದೆ. ಸಾಮಾನ್ಯವಾಗಿ ನೀರು ಬಿಡುಗಡೆ ಮಾಡುವಾಗ ಎಲ್ಲ ಗೇಟ್‌ಗಳನ್ನು ಸಮಾನಾಂತರವಾಗಿ ಎತ್ತರಿಸಿ ಬಿಡಲಾಗುತ್ತಿದೆ. ಇದೀಗ 7 ಗೇಟ್‌ ಜಾಮ್‌ ಆಗಿದ್ದರಿಂದ ಅವುಗಳನ್ನು ತೆರೆಯಲು ಆಗುತ್ತಿಲ್ಲ. ಅದೇ ಈಗ ಸಮಸ್ಯೆಯಾಗಿದೆ.ತುಂಗಭದ್ರಾ ಜಲಾಶಯ ನಿರ್ಮಿಸುವ ವೇಳೆ 6.5 ಲಕ್ಷ ಕ್ಯುಸೆಕ್‌ ನೀರು ನದಿಗೆ ಬಿಡುವ ಸಾಮರ್ಥ್ಯ ನಿಗದಿಪಡಿಸಲಾಗಿದೆ. ಹೀಗಾಗಿ, 7 ಗೇಟ್‌ಗಳು ಜಾಮ್ ಆಗಿರುವುದರಿಂದ ಹರಿದುಬರುತ್ತಿರುವ ಒಳಹರಿವು ಪ್ರಮಾಣದಲ್ಲಿ ನೀರು ಹೊರಗೆ ಬಿಡುವುದಕ್ಕೆ ಇರುವ 26 ಕ್ರಸ್ಟ್‌ಗೇಟ್‌ಗಳಿಂದಲೇ ಬಿಡುಗಡೆ ಮಾಡಬಹುದಾಗಿದೆ.

ಸಿದ್ದಪ್ಪ ಜಾನಕರ ಎಂಜನಿಯರ್‌ ತುಂಗಭದ್ರಾ ಕಾಡಾ