ಸಾರಾಂಶ
ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಟಿ.ಡಿ. ಮೇಘರಾಜ್ ಮರುನೇಮಕ ಆಗಿದ್ದಾರೆ. ಇವರ ಆಯ್ಕೆ ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಾತ್ರವಲ್ಲದೇ, ಯಡಿಯೂರಪ್ಪ ಬಣದಲ್ಲಿ ಮೇಘರಾಜ್ ಗುರುತಿಸಿಕೊಂಡಿರುವುದರಿಂದಲೂ ಮುಂದುವರಿಸಲಾಗಿದೆ ಎಂಬ ಲೆಕ್ಕಾಚಾರ ಶುರುವಾಗಿದೆ
ಶಿವಮೊಗ್ಗ: ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಟಿ.ಡಿ. ಮೇಘರಾಜ್ ಅವರನ್ನು ಮರುನೇಮಕ ಮಾಡಲಾಗಿದೆ.
ಈ ಹಿಂದಿನ ಅವಧಿಗೂ ಟಿ.ಡಿ. ಮೇಘರಾಜ್ ಅವರೇ ಅಧ್ಯಕ್ಷರಾಗಿದ್ದು, ಈ ಬಾರಿ ಹಿರಿಯ ಜೊತೆಗೆ ಹೊಸಮುಖಗಳ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಟಿ.ಡಿ. ಮೇಘರಾಜ್ ಅವರನ್ನೇ ನೇಮಿಸಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.ಯಡಿಯೂರಪ್ಪ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಟಿ.ಡಿ. ಮೇಘರಾಜ್ ಆಯ್ಕೆ ಲೋಕಸಭಾ ಚುನಾವಣಾ ಹಿನ್ನೆಲೆ ಕಾರಣ ಆಗಿರಬಹುದು ಎಂಬ ಲೆಕ್ಕಾಚಾರ ಕೇಳಿಬಂದಿದೆ. ಹೊಸಬರು ಬಂದರೆ ಇಡೀ ಜಿಲ್ಲೆಯ ಪರಿಚಯ ಮತ್ತು ತಳಮಟ್ಟದ ಕಾರ್ಯಕರ್ತರ ಸಂಪರ್ಕ ಹೊಸದಾಗಿ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಟಿ.ಡಿ. ಮೇಘರಾಜ್ ಅವರಿಗೆ ಈಗಾಗಲೇ ಕೆಲಸ ಮಾಡಿದ ಅನುಭವ ಮತ್ತು ಸಂಪರ್ಕ ಇರುವುದರಿಂದ ಚುನಾವಣೆಯ ಸಿದ್ಧತೆ ನಡೆಸಲು ಸುಲಭವಾಗುತ್ತದೆ ಎಂಬ ಲೆಕ್ಕಾಚಾರ ಕೇಳಿಬಂದಿದೆ.
ಆದೇಶ ಹೊರಬೀಳುತ್ತಿದ್ದಂತೆ ಸೋಮವಾರ ಬೆಳಗ್ಗೆ ಟಿ.ಡಿ. ಮೇಘರಾಜ್ ಅವರು ನಗರದ ಹತ್ತಿರದ ಮತ್ತೂರು ಗ್ರಾಮಕ್ಕೆ ತೆರಳಿ ಆರ್.ಎಸ್.ಎಸ್. ಪ್ರಾಂತ ಸಹ ಕಾರ್ಯವಾಹಕ ಪಟ್ಟಾಭಿರಾಮ್ ಮತ್ತು ಮಾಜಿ ವಿಧಾನ ಪರಿಷತ್ತು ಸದಸ್ಯ ಭಾನುಪ್ರಕಾಶ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.ಇದಕ್ಕೂ ಮೊದಲು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಭೇಟಿ ಮಾಡಿದರು.
- - - -ಫೋಟೋ:ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಪುನರ್ ನೇಮಕಗೊಂಡ ಟಿ. ಡಿ. ಮೇಘರಾಜ್ ಅವರು ಸಂಸದ ಬಿ. ವೈ. ರಾಘವೇಂದ್ರ ಅವರನ್ನು ಭೇಟಿ ಮಾಡಿದರು.