ಕನ್ನಡದ ಮಹತ್ವದ ಬಗ್ಗೆ ವಿದೇಶಿಯರು ಬಂದು ತಿಳಿದುಕೊಂಡು, ಹೆಮ್ಮೆಪಡುತ್ತಿದ್ದಾರೆ. ಆದರೆ ಪ್ರಸ್ತುತ ಸಮಾಜದಲ್ಲಿ ನಮ್ಮ ಮಕ್ಕಳಿಗೆ ಈ ಬಗ್ಗೆ ತಿಳಿಸುತ್ತಿಲ್ಲ. ಮುಂದಾದರೂ ಕನ್ನಡ ಭಾಷೆಯ ಬಗ್ಗೆ ತಿಳಿಸಿಕೊಟ್ಟು ಇದನ್ನು ಉಳಿಸಿ ಬೆಳೆಸಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ನಮ್ಮ ಮಕ್ಕಳಿಗೆ ಕನ್ನಡ ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ತಿಳಿಸಿಕೊಡುವಂತೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಸಲಹೆ ನೀಡಿದರು.ಅಲೆಯನ್ಸ್ ಪ್ರಿನ್ಸ್, ಐಕ್ಯ, ನಿಧಿ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಬೆಳಗೊಳ ಸರ್ಕಾರಿ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಕನ್ನಡದ ಮಹತ್ವದ ಬಗ್ಗೆ ವಿದೇಶಿಯರು ಬಂದು ತಿಳಿದುಕೊಂಡು, ಹೆಮ್ಮೆಪಡುತ್ತಿದ್ದಾರೆ. ಆದರೆ ಪ್ರಸ್ತುತ ಸಮಾಜದಲ್ಲಿ ನಮ್ಮ ಮಕ್ಕಳಿಗೆ ಈ ಬಗ್ಗೆ ತಿಳಿಸುತ್ತಿಲ್ಲ ಎಂದು ವಿಷಾದಿಸಿದರು.
ಮುಂದಾದರೂ ಕನ್ನಡ ಭಾಷೆಯ ಬಗ್ಗೆ ತಿಳಿಸಿಕೊಟ್ಟು ಇದನ್ನು ಉಳಿಸಿ ಬೆಳೆಸಬೇಕು ಎಂದು ಅವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಅಲೆಯನ್ಸ್ ಜಿಲ್ಲಾ ರಾಜ್ಯಪಾಲ ಎಸ್. ವೆಂಕಟೇಶ್ ಮಾತನಾಡಿ, ನಮ್ಮ ಕ್ಲಬ್ ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗದೇ ಮೈಸೂರು ಸುತ್ತಮುತ್ತ ಇರುವ ಗ್ರಾಮೀಣ ಪ್ರದೇಶಗಳಲ್ಲೂ ಶಿಕ್ಷಣ ಹಾಗೂ ಆರೋಗ್ಯದ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲಸ ಮಾಡುತ್ತಿದೆ ಎಂದರು.
ಪ್ರತಿಯೊಬ್ಬರಿಗೂ ಆರೋಗ್ಯ ಮತ್ತು ಶಿಕ್ಷಣ ಮುಖ್ಯವಾಗಿದೆ. ಆದ್ದರಿಂದ ಈ ಎರಡರ ಬಗ್ಗೆ ಗಮನಹರಿಸಬೇಕು ಎಂದು ಅವರು ಮನವಿ ಮಾಡಿದರು.ಬೆಳಗೊಳ ಗ್ರಾಪಂ ಅಧ್ಯಕ್ಷೆ ಎಚ್.ಎಸ್. ಸವಿತಾ ಕಾರ್ಯಕ್ರಮ ಉದ್ಘಾಟಿಸಿದರು. ಯಜಮಾನರಾದ ಬಿ.ಎಂ. ಸ್ವಾಮಿಗೌಡ ಮಾತನಾಡಿದರು. ಇಂದಿರಾ ವೆಂಕಟೇಶ್ ವಿಶೇಷ ಅತಿಥಿಯಾಗಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಅಲೆಯನ್ಸ್ ಕ್ಲಬ್ ಒಂದನೇ ರಾಜ್ಯಪಾಲ ಮಹಬಲೇಶ್ವರ ಬೈರಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಎನ್. ಬೆಟ್ಟೇಗೌಡ, ಜಿಲ್ಲಾ ಅಂಬಾಸಿಡರ್ ಗಣೇಶ್, ಮಾನವ ಹಕ್ಕುಗಳ ಸೇವಾಸಮಿತಿ ಅಧ್ಯಕ್ಷ ಕಸ್ತೂರಿ ಚಂದ್ರು, ಗ್ರಾಪಂ ಉಪಾಧ್ಯಕ್ಷೆ ಪಲ್ಲವಿ, ಯಜಮಾನರಾದ ಶ್ರೀನಿವಾಸಗೌಡ, ಡಿ. ವಿಷಕಂಠೇಗೌಡ ಮುಖ್ಯ ಅತಿಥಿಗಳಾಗಿದ್ದರು. ಸರಸ್ವತಿ, ಲಕ್ಷ್ಮಿ, ಮಂಜುಳಾ ಮೊದಲಾದವರು ಇದ್ದರು.
ಗ್ರಾಪಂ ಸದಸ್ಯರಾದ ಬಿ.ವಿ. ಸುರೇಶ್, ಬಿ. ರವಿಕುಮಾರ್, ಕೃಷಿ ಪತ್ತಿನ ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಿ.ವಿ. ವೆಂಕಟೇಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎಚ್.ಡಿ. ಮಹದೇವು, ಗ್ರಾಪಂ ಸದಸ್ಯ ಆರ್ಮುಗಂ, ಮಾಜಿ ಸದಸ್ಯ ಬಿ.ಎನ್. ರವಿಕುಮಾರ್ ಸೇರಿದಂತೆ ಹಲವಾರು ಗಣ್ಯರನ್ನು ಸನ್ಮಾನಿಸಲಾಯಿತು.ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಕೆ.ಟಿ. ರಂಗಪ್ಪ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಿನ್ಸ್ ಕ್ಲಬ್ ಅಧ್ಯಕ್ಷ ಎಸ್.ಎ. ಪುಟ್ಟಸ್ವಾಮಿ ವಂದಿಸಿದರು. ಐಕ್ಯ ಕ್ಲಬ್ ಕಾರ್ಯದರ್ಶಿ ಬಿ.ಎಸ್. ಅನುಪಮಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ನು ಹಾಡಿದರು.
ಆರೋಗ್ಯ ತಪಾಸಣಾ ಶಿಬಿರ:ಅನನ್ಯ ಹಾರ್ಟ್ ಸಂಸ್ಥೆ, ಭಗವಾನ್ ಮಹಾವೀರ ದರ್ಶನ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ವಿಶೇಷವಾಗಿ ಹೃದ್ರೋಗ ಹಾಗೂ ನೇತ್ರ ತಪಾಸಣೆ ನಡೆಸಲಾಯಿತು.