ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರ ಕಲಿಸಿ

| Published : Jan 11 2025, 12:49 AM IST

ಸಾರಾಂಶ

ಮಕ್ಕಳಲ್ಲಿ ಅತ್ಯದ್ಭುತ ಪ್ರತಿಭೆಗಳಿರುತ್ತವೆ. ಆ ಪ್ರತಿಭೆಗಳಿಗೆ ಸೂಕ್ತ ಅವಕಾಶ ಒದಗಿಸಿ ಕೊಡುವುದು ಶಿಕ್ಷಣದ ಮೂಲ ಉದ್ದೇಶವಾಗಿದೆ

ಮುಂಡರಗಿ: ಮಕ್ಕಳಿಗೆ ಶಿಕ್ಷಣ ಕೊಡುವ ಸಂದರ್ಭದಲ್ಲಿ ಕಲೆ, ಸಾಹಿತ್ಯ,ಸಂಗೀತ, ನಾಟಕ ಕಡೆಗೂ ಗಮನಹರಿಸುವುದು ಅವಶ್ಯವಾಗಿದೆ. ಅಕ್ಷರಾಭ್ಯಾಸ ಮಾತ್ರ ಶಿಕ್ಷಣವಲ್ಲ, ಮಕ್ಕಳಿಗೆ ಸಂಸ್ಕಾರ ಕೊಡುವುದು ಸಹ ಒಂದು ಶಿಕ್ಷಣ. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರ ಕಲಿಸಿ ಕೊಡಬೇಕು ಎಂದು ಗದಗ ತೋಂಟದಾರ್ಯ ಮಠದ ಜ.ಡಾ. ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು.

ಅವರು ಗುರುವಾರ ಸಂಜೆ ಪಟ್ಟಣದ ಜಗದ್ಗುರು ತೋಂಟದಾರ್ಯ ಸಿಬಿಎಸ್ಇ ಶಾಲೆಯ 20ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಕ್ಕಳಲ್ಲಿ ಅತ್ಯದ್ಭುತ ಪ್ರತಿಭೆಗಳಿರುತ್ತವೆ. ಆ ಪ್ರತಿಭೆಗಳಿಗೆ ಸೂಕ್ತ ಅವಕಾಶ ಒದಗಿಸಿ ಕೊಡುವುದು ಶಿಕ್ಷಣದ ಮೂಲ ಉದ್ದೇಶವಾಗಿದೆ.ಅಂತಹ ಕಾರ್ಯ ಈ ಶಾಲೆಯ ಎಲ್ಲ ಶಿಕ್ಷಕರು ಮಾಡಿ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯವಾದುದು. ನಮ್ಮ ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯ ಎನ್ನುವುದನ್ನು ಮನನ ಮಾಡಿಕೊಂಡು ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಬೇಕು ಎಂದರು.

ಜಿಲ್ಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರುಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಲ್ಲಿನ ಜಗದ್ಗುರು ತೋಂಟದಾರ್ಯ ಸಿಬಿಎಸ್ಇ ಶಾಲೆಯ ವಾರ್ಷಿಕ ವರದಿ ನೋಡಿದರೆ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ವರ್ಷವಿಡೀ ಎಲ್ಲ ಚಟುವಟಿಕೆ ನಡೆಸಿರುವುದು ತಿಳಿಯಿತು. ಮಗು ಕಂಠಪಾಠ ಪದ್ಧತಿಯಿಂದ ಮುಕ್ತವಾಗಿ,ಶಾಲೆಯಲ್ಲಿ ಕಲಿತಿರುವುದನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳನ್ನು ಬುದ್ದಿವಂತರನ್ನಾಗಿ ಮಾಡುವುದರ ಜತೆಗೆ ಸಂಸ್ಕಾರವಂತರನ್ನಾಗಿ ಬೆಳೆಸಲು ಶಾಲೆಗಳು ನಮಗೆ ಸಹಕಾರಿಯಾಗಿವೆ.

ಗದುಗಿನ ಲಿಂ, ಜ.ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿ ತೋಂಟದಾರ್ಯ ವಿದ್ಯಾಪೀಠ ಪ್ರಾರಂಭಿಸಿ ಕನ್ನಡ, ಇಂಗ್ಲಿಷ್ ಹಾಗೂ ವೃತ್ತಿಪರ ಸೇರಿದಂತೆ ಅನೇಕ ಶಾಲಾ-ಕಾಲೇಜು ಕಟ್ಟಿ,ಸಾವಿರಾರು ಕುಟುಂಬಗಳ ಅನ್ನಕ್ಕೆ ದಾರಿಯಾಗಿ,ಕೋಟ್ಯಂತರ ಮಕ್ಕಳ ಜೀವನಕ್ಕೆ ಮಾರ್ಗವಾಗಿದೆ ಎಂದರು.

ಜೆಟಿ ವಿದ್ಯಾಪೀಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಮಾತನಾಡಿ, ಮುಂಡರಗಿ ಭಾಗದ ಮಕ್ಕಳು ಸಿಬಿಎಸ್ಇ ಪಠ್ಯಕ್ರಮ ಕಲಿತು ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಬೇಕು ಎನ್ನುವುದು ಲಿಂ.ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿಯವರ ಆಸೆಯಾಗಿತ್ತು.ಅದರಂತೆ ಇಲ್ಲಿ ಶಾಲೆ ಪ್ರಾರಂಭಿಸಿ ಇಂದಿಗೆ 20 ವರ್ಷವಾಗಿದೆ. ಅಂದಿನಿಂದ ಇಂದಿನವರೆಗ ಉತ್ತರೋತ್ತರವಾಗಿ ಬೆಳೆದು ಬಂದಿದ್ದು, ಎಲ್ಲರ ಸಹಕಾರ ಹೀಗೆ ಮುಂದುವರೆಯಲಿ ಎಂದರು.

ಜಗದ್ಗುರು ತೋಂಟದಾರ್ಯ ಸಿಬಿಎಸ್ಇ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ, ಮಾಜಿ ಸಚಿವ ಎಸ್.ಎಸ್. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಪಡ್ನೇಶಿ, ಡೈಯಟ್ ನ ಶಂಕರ ಹಡಗಲಿ, ಶಾಲಾ ಆಡಳಿತ ಮಂಡಳಿ ಸದಸ್ಯ ಈಶ್ವರಪ್ಪ ಹಂಚಿನಾಳ, ಈಶಣ್ಣ ಬೆಟಗೇರಿ, ಕೊಟ್ರೇಶ ಅಂಗಡಿ, ಹೇಮಗಿರೀಶ ಹಾವಿನಾಳ, ಧ್ರುವಕುಮಾರ ಹೊಸಮನಿ, ಪಿಎಸ್ಐ ವಿಜಯ ಪವಾರ್, ಪ್ರಾ. ಶರಣ್ ಕುಮಾರ ಬುಗುಟಿ, ನಿಖಿಲ್ ಉಳ್ಳಾಗಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.