ಸಾರಾಂಶ
ಮಕ್ಕಳಿಗೆ ಶಿಕ್ಷಣವನ್ನು ಕೊಡುವುದು ಶಿಕ್ಷಕರ ಕೆಲಸ. ಆದರೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ, ಪ್ರೀತಿ, ವಿಶ್ವಾಸ, ವಾತ್ಸಲ್ಯವನ್ನು ತಾಯಿಯೇ ಕಲಿಸಬೇಕು.
ಹರಪನಹಳ್ಳಿ: ಮಕ್ಕಳಿಗೆ ತಾಯಿಯೇ ಮೊದಲ ಗುರು. ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಪ್ರೀತಿ, ವಾತ್ಸಲ್ಯ ಕಲಿಸಬೇಕು ಎಂದು ತಾಲೂಕಿನ ಅರಸಿಕೇರಿ ಕೋಲಶಾಂತೇಶ್ವರಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮಿಗಳು ತಿಳಿಸಿದರು.
ಅರಸೀಕೇರಿ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ, ಶಾಲಾ ವಾರ್ಷಿಕೋತ್ಸವ, ವಿವಿಧ ಗಣ್ಯರಿಗೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಶಿಕ್ಷಣವನ್ನು ಕೊಡುವುದು ಶಿಕ್ಷಕರ ಕೆಲಸ. ಆದರೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ, ಪ್ರೀತಿ, ವಿಶ್ವಾಸ, ವಾತ್ಸಲ್ಯವನ್ನು ತಾಯಿಯೇ ಕಲಿಸಬೇಕು. ಮಗುವಿನ ಸರ್ವೋತ್ತಮ ಅಭಿವೃದ್ಧಿಗೆ ತಾಯಿಯೇ ಮೊದಲ ಗುರು ಎಂದರು.ದೈಹಿಕ ಶಿಕ್ಷಣ ಪರಿವೀಕ್ಷಕ ಕೆ. ಷಣ್ಮುಖಪ್ಪ ಮಾತನಾಡಿ, ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲ. ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಊರಿನ ಎಲ್ಲರ ಸಹಕಾರದಿಂದ ಈ ಶಾಲೆ ಪ್ರಗತಿಯಲ್ಲಿದೆ ಎಂದರು.
ಹರಪನಹಳ್ಳಿ ಸರ್ಕಾರಿ ಬಾಲಕಿಯರ ಶಾಲೆಯ ಮುಖ್ಯ ಶಿಕ್ಷಕ ಅರ್ಜುನ ಪರಸಪ್ಪ ಮಾತನಾಡಿ, ಶಾಲಾಭಿವೃದ್ಧಿ ಸಂಸದ ವೈ. ದೇವೇಂದ್ರಪ್ಪ ಅವರ ಹಾಗೂ ಊರಿನ ಮುಖಂಡರ ಸಹಕಾರದಿಂದ ಆಗಿದೆ ಎಂದರು.ಯುವ ಮುಖಂಡ ಪ್ರಶಾಂತ್ ಪಾಟೀಲ್ ಮಾತನಾಡಿ, ಈ ಶಾಲೆಗೆ 101 ವರ್ಷ ತುಂಬಿದ್ದು, ಅಲ್ಲದೇ ಈ ಶಾಲೆಯಲ್ಲಿ ಓದಿದ ಹಲವು ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಶ್ಲಾಘಿಸಿದರು.
ವಿವಿಧ ಸಾಧಕರಾದ ಶಿಕ್ಷಕ ಮಾಲತೇಶ್ ಪಾಟೇಲ್ ಅವರು ಕೇರಂನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಬಿಹಾರದ ಪಾಟ್ನಾದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ವಿಜಯ ಸಾಧಿಸಿದ್ದಕ್ಕೆ ಸನ್ಮಾನಿಸಲಾಯಿತು.ಇದೇ ಶಾಲೆಯಲ್ಲಿ ಸುಮಾರು 40 ವರ್ಷಗಳ ಕಾಲ ಸ್ವಚ್ಛತಾ ಕಾರ್ಯ ಮಾಡಿ ನಿವೃತ್ತರಾದ ಫಾತೀಮಾಬಿ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಟಿ. ವೀರೇಶ್ , ಕ್ರೀಡಾ ತರಬೇತುದಾರ ಬಸವರಾಜ್ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ನೌಕರರ ಸಂಘದ ಅಧ್ಯಕ್ಷ ಎಸ್. ರಾಮಪ್ಪ, ಕಥೆಗಾರ ಮಂಜಣ್ಣ ಮಾತಾಡಿದರು. ಮಾಜಿ ಜಿಪಂ ಸದಸ್ಯೆ ವೈ.ಡಿ. ಸುಶೀಲಮ್ಮ ದೇವೇಂದ್ರಪ್ಪ, ಸೌಹಾರ್ದ ಬ್ಯಾಂಕಿನ ಸಂಸ್ಥಾಪಕಿ ವೈ.ಎ. ಲಕ್ಷ್ಮೀದೇವಿ ಅಣ್ಣಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಡಿ. ಹನುಮಂತಪ್ಪ, ಎಂ. ರಮೇಶ, ಬಂದಮ್ಮ, ಭೂದಾನಿ ವೆಂಕೋಬಶೆಟ್ರು, ಎ.ಎಚ್. ಪಂಪಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಅದಾಮ್ ಸಾಹೇಬ್, ಅಡ್ಡಿ ಚನ್ನವೀರಪ್ಪ, ಮುಖಂಡರಾದ ಐ. ಸಲಾಂ ಸಾಹೇಬ್, ವೆಂಕಟೇಶ್, ಮುಖ್ಯ ಶಿಕ್ಷಕ ಹಾಲಪ್ಪ ಇತರರು ಇದ್ದರು.