ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಸಿ: ಡಾ.ಶಂಕರ್ ವಾಣಿಕ್ಯಾಳ್ ಕರೆ

| Published : Jun 13 2024, 12:48 AM IST

ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಸಿ: ಡಾ.ಶಂಕರ್ ವಾಣಿಕ್ಯಾಳ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಪೋಷಕರು ೧೪ ವರ್ಷದ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕಡ್ಡಾಯವಾಗಿದೆ, ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕಾಗಿದೆ, ಪೋಷಕರು ಮಕ್ಕಳಿಗೆ ಕಲಿಕಾ ಚಟುವಟಿಕೆಗಳಿಂದ ಹೊರತುಪಡಿಸಿ ಇತರೆ ಯಾವುದೇ ಚಟುವಟಿಕೆಗಳಿಗೆ ಒಳಪಡಿಸಬಾರದು,

ಕನ್ನಡಪ್ರಭ ವಾರ್ತೆ ಕೋಲಾರ

೧೪ ವರ್ಷದೊಳಗಿನ ಮಕ್ಕಳಿಗೆ ಆಟ, ಪಾಠ, ಊಟ, ನಿದ್ದೆ ಈ ನಾಲ್ಕು ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿದಲ್ಲಿ ಆರೋಗ್ಯಕರ ಬೆಳವಣಿಗೆ ಮೂಲಕ ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ, ಅತೀ ಕಡಿಮೆ ಸೌಲಭ್ಯಗಳನ್ನು ಪಡೆದು ಅತ್ಯುನ್ನತ ಸಾಧನೆ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು, ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಅಳವಡಿಸಬೇಕು, ಅನಿಷ್ಠ ಪದ್ಧತಿಗಳಿಂದ ಮಕ್ಕಳನ್ನು ದೂರ ಇಡುವಂತಾಗಬೇಕು ಎಂದು ಅಪರ ಜಿಲಾಧಿಕಾರಿ ಡಾ.ಶಂಕರ್ ವಣಿಕ್ಯಾಳ್ ಕರೆ ನೀಡಿದರು.

ನಗರದ ರಂಗ ಮಂದಿರದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ-೨೦೨೪ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ೧೪ ವರ್ಷದೊಳಗಿನ ಮಕ್ಕಳನ್ನು ಇತರೆ ಚಟುವಟಿಕೆಗಳ ದುಡಿಮೆಗೆ ಒಳಪಡಿಸಿದರೆ ಬಾಲ ಕಾರ್ಮಿಕ ಪದ್ಧತಿಗೆ ಒಳಪಟ್ಟು ಕಾನೂನಿನನ್ವಯ ಅಪರಾಧವಾಗುತ್ತದೆ, ಈ ಅಪರಾಧಕ್ಕೆ ಕಾರಣವಾಗುವ ದುಡಿಮೆಗೆ ನೇಮಿಸಿಕೊಂಡಿರುವ ಮಾಲೀಕರು ಶಿಕ್ಷಾರ್ಹರಾಗಿ ದಂಡಕ್ಕೊಳಗಾಗಬೇಕಾಗುತ್ತದೆ ಎಂದರು.

ಪೋಷಕರು ೧೪ ವರ್ಷದ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕಡ್ಡಾಯವಾಗಿದೆ, ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕಾಗಿದೆ, ಪೋಷಕರು ಮಕ್ಕಳಿಗೆ ಕಲಿಕಾ ಚಟುವಟಿಕೆಗಳಿಂದ ಹೊರತುಪಡಿಸಿ ಇತರೆ ಯಾವುದೇ ಚಟುವಟಿಕೆಗಳಿಗೆ ಒಳಪಡಿಸಬಾರದು, ಮಕ್ಕಳನ್ನು ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಬೇಕು, ಕಾರ್ಮಿಕರ ಮಕ್ಕಳಿಗೆ ಸರ್ಕಾರವು ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ, ವಸತಿ ಸೌಲಭ್ಯ ಸೇರಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿರುವುದನ್ನು ಸದ್ಬಳಿಸಿಕೊಂಡು ಸಮಾಜ ಸೇವೆಯ ಮೂಲಕ ಮುಖ್ಯ ವಾಹಿನಿಗೆ ಬರುವಂತಾಗಬೇಕೆಂದು ಕರೆ ನೀಡಿದರು.

ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷ ಈ ಹಿಂದೆ ಕಾರ್ಮಿಕ ಇಲಾಖೆಯಲ್ಲಿದ್ದಾಗ ಕಾರ್ಮಿಕರ ಕಲ್ಯಾಣಕ್ಕಾಗಿ ೨ ಸಾವಿರ ಕೋಟಿ ಯೋಜನೆ ನೀಡಿದ್ದರು. ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸದ್ಬಳಿಸಿಕೊಳ್ಳಬೇಕು. ಈ ಕುರಿತು ಶಾಲಾ ವಿದ್ಯಾರ್ಥಿಗಳು ಸಮಾಜದಲ್ಲಿ ಅರಿವು ಮೂಡಿಸುವಂತಾಗಬೇಕೆಂದರು,

ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ್ ಮಾತನಾಡಿ, ಈ ಹಿಂದೆ ಸಮಾಜದಲ್ಲಿ ಬಹುತೇಕ ಬಡತನದಲ್ಲಿದ್ದವರು ಶ್ರೀಮಂತರ ಬಳಿ ವಿವಿಧ ಕಾರಣಗಳಿಗೆ ಸಾಲ ಪಡೆದು ತೀರಿಸಲಾಗದೆ ಬಡ್ಡಿ, ಚಕ್ರಬಡ್ಡಿಗಳಿಗೆ ತುತ್ತಾಗಿ ತಮ್ಮ ಮಕ್ಕಳನ್ನು ಜೀತಾದಾಳುಗಳಾಗಿ ಮಾಡುತ್ತಿದ್ದರು, ಈ ಜೀತ ಪದ್ಧತಿಯಲ್ಲಿ ಇಡೀ ಕುಟುಂಬವೇ ದುಡಿಮೆಯಲ್ಲಿ ತೊಡಗಿಸಿಕೊಂಡರೂ ಸಾಲ ತೀರಿಸಲಾಗದೆ ಶೋಷಣೆಗೆ ತುತ್ತಾಗಿದ್ದರು, ಇವರ ಮಕ್ಕಳಲ್ಲಿ ಪ್ರತಿಭೆ, ಕೌಶಲ್ಯತೆ ಇದ್ದರೂ ಸಹ ಅದನ್ನು ಪ್ರದರ್ಶಿಸಿ ಬೆಳಕಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಮಕ್ಕಳ ದುಡಿಮೆಯ ಅನಿಷ್ಠ ಪದ್ಧತಿಯ ವಿರುದ್ಧ ಯೂರೋಪ್ ದೇಶದಲ್ಲಿ ದೊಡ್ಡ ಕ್ರಾಂತಿ ಉಂಟಾಗಿತ್ತು. ನಂತರದಲ್ಲಿ ಎಲ್ಲೆಡೆ ಬಾಲ ಕಾರ್ಮಿಕ ವಿರೋಧಿಯ ಹೋರಾಟದ ಫಲವಾಗಿ ಕಾನೂನುಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ಅಪರಾಧವೆಂದು ಘೋಷಿಸಲಾಗಿದೆ. ಸಾಮಾನ್ಯವಾಗಿ ಹೋಟೆಲ್. ವರ್ಕ್‌ಶಾಪ್, ಬಟ್ಟೆ ಅಂಗಡಿ, ಇಟ್ಟಿಗೆ ಕಾರ್ಖಾನೆ, ಕಟ್ಟಣ ನಿರ್ಮಾಣ, ಇತ್ಯಾದಿಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಕಾನೂನು ಉಲ್ಲಂಘನೆಯಾಗಲಿದೆ. ಬಾಲ್ಯ ವಿವಾಹಗಳು ಸಹ ಕಾನೂನು ಬಾಹಿರವಾಗಿವೆ. ಇಂತಹ ಪ್ರಕರಣಗಳನ್ನು ಯಾರಾದರೂ ಕಂಡಲ್ಲಿ ಮಕ್ಕಳ ಸಹಾಯವಾಣಿ ೧೦೯೮ಗೆ ಕರೆ ಮಾಡುವ ಮೂಲಕ ಮಾಹಿತಿ ನೀಡ ಬೇಕೆಂದು ಮನವಿ ಮಾಡಿದರು,

ಇತ್ತೀಚೆಗೆ ವಿಶ್ವ ಚೆಸ್ ಚಾಂಪಿಯನ್ ಆದ ೧೭ ವರ್ಷದ ಬಾಲಕ ಪ್ರಜ್ಞಾನಂದ ತನ್ನ ಪ್ರತಿಭೆ ಪ್ರದರ್ಶಿಸಿ ಬೆಳಕಿಗೆ ಬಂದನು. ಇದೇ ರೀತಿ ಅನೇಕ ಬಾಲ ಪ್ರತಿಭೆಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ, ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕೆಂದು ಹೇಳಿದರು.ಡಿಡಿಪಿಯು ರಾಮಚಂದ್ರಪ್ಪ ಮಾತನಾಡಿ, ಮಕ್ಕಳ ಬಾಲ್ಯವಸ್ಥೆ ಕಲಿಕೆಯ ವಯಸ್ಸಾಗಿದೆ. ಕಲಿಕೆಗೆ ಅಂತ್ಯವಿಲ್ಲ, ೧೪ ವರ್ಷದ ಮಕ್ಕಳನ್ನು ಮನೆಯ ಹೊರಗೆ ದುಡಿಮೆಗೆ ಕಳುಹಿಸಬಾರದು, ಆದರೆ ಮನೆಯಲ್ಲಿ ಪೋಷಕರಿಗೆ ಸಹಾಯ ಮಾಡುವುದು ಅಪರಾಧವಾಗುವುದಿಲ್ಲ ಎಂದರು.

ಕಲಿಕೆಯು ಉತ್ತಮ ಸಾಧನೆಗಳ ಮೂಲಕ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾಗಲಿದೆ. ಆಧುನಿಕ ಜಗತ್ತಿನ ತಾಂತ್ರಿಕ ಜ್ಞಾನವನ್ನು ಸಾಧನೆಗೆ ಬಳಸಿಕೊಳ್ಳ ಬೇಕೇ ಹೊರತು ದುರ್ಬಳಿಸಿಕೊಳ್ಳಬಾರದು, ಬಾಲ ಕಾರ್ಮಿಕರ ವಿರುದ್ಧ ಅಂಬೇಡ್ಕರ್ ರೂಪಿಸಿರುವ ಸಂವಿಧಾನದಲ್ಲಿ ಅನೇಕ ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು.

ಮಕ್ಕಳಿಗೆ ಕಡ್ಡಾಯ ಶಿಕ್ಷಣದ ಅರಿವು ಅಗತ್ಯ:

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್.ಹೊಸಮನಿ ಮಾತನಾಡಿ, ಸಮರ್ಪಕವಾದ ಅರಿವು ಇಲ್ಲದೆ ಅನೇಕ ಹಿಂದುಳಿದ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಮಕ್ಕಳನ್ನು ದುಡಿಮೆಗೆ ಒಳಪಡಿಸುವ ಮೂಲಕ ಕಡ್ಡಾಯ ಶಿಕ್ಷಣದಿಂದ ವಂಚಿತಗೊಳಿಸಿರುವುದನ್ನು ಕಾಣಬಹುದಾಗಿದೆ. ಸರ್ಕಾರದ ಜೂತೆಗೆ ಪ್ರಜ್ಞಾವಂತರು ಕೈಜೋಡಿಸಿ ಕಡ್ಡಾಯ ಶಿಕ್ಷಣದ ಅರಿವು ಮೂಡಿಸುವಂತಾಗಬೇಕು, ವಿದ್ಯಾರ್ಥಿಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವಿರುದ್ಧ ಸಹಾಯವಾಣಿ ಬಳಸಿಕೊಳ್ಳುವಂತಾಗಬೇಕು, ಜೂನ್ ೧ ರಿಂದ ೩೦ರವರೆಗೆ ಬಾಲಾ ಕಾರ್ಮಿಕರ ಪುನರ್ ವಸತಿ ಅಭಿಯಾನ, ಶಾಲೆ ಬಿಟ್ಟ ಮಕ್ಕಳ ಪುನರ್ ಸೇರ್ಪಡೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಇತ್ತೀಚೆಗೆ ಮಾದಕ ಪದಾರ್ಥಗಳು, ಡ್ರಗ್ಸ್, ಇತ್ಯಾದಿಗಳಿಗೆ ಅನೇಕ ಬಾಲಕರು ಬಲಿಯಾಗುತ್ತಿದ್ದಾರೆ, ಇದರಿಂದಾಗಿ ಪೋಷಕರು ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಬೇಕು, ಯಾವುದೇ ಕಾರಣಕ್ಕೂ ಮಕ್ಕಳನ್ನು ನಿರ್ಲಕ್ಷಿಸದೇ ಕಾಪಡಬೇಕೆಂದು ಕರೆ ನೀಡಿದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೂಸೈಟಿಯ ನಿರ್ದೇಶಕಿ ಶೃತಿ.ಕೆ. ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು, ಶಿಡ್ಲಘಟ್ಟ ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಯೋಜಕ ಜಯರಾಂರಿಂದ ಉಪನ್ಯಾಸ. ಈ ಜಲ, ಈ ನೆಲ, ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಕಲಾವಿದ ವೆಂಕಟಾಚಲಪತಿರಿಂದ ನಾಡಗೀತೆ, ತನುಷ ತಂಡದಿಂದ ಪ್ರಾರ್ಥಿಸಿದರು.

ಜಿಪಂ ಸಹಾಯಕ ಯೋಜನಾ ನಿರ್ದೇಶಕ ಎಸ್.ವೆಂಕಟಾಚಲಪತಿ, ಕೆಜಿಎಫ್ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಾಗರತ್ನ.ವಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶಬಾನಾ ಅಜ್ಮಿ ಇದ್ದರು.