ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುವುದು ಬಹಳ ಮುಖ್ಯ. ಸಂಸ್ಕಾರ-ಸಂಸ್ಕೃತಿ ಇದ್ದಾಗ ಮಕ್ಕಳು ಸುಸಂಸ್ಕೃತರಾಗಿ ಬೆಳವಣಿಗೆ ಕಾಣುತ್ತಾರೆ ಎಂದು ವಿಕಲನ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಮಹೇಶ್‌ಚಂದ್ರ ಗುರು ಹೇಳಿದರು.ನಗರದ ಹಾಲಹಳ್ಳಿಯಲ್ಲಿರುವ ಕಿಡ್ಸ್ ಪ್ಲಾನೆಟ್‌ನಲ್ಲಿ ಪೋಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರವನ್ನು ಚಿಕ್ಕ ವಯಸ್ಸಿನಿಂದಲೇ ಕಲಿಸಬೇಕು. ಇದರಲ್ಲಿ ಪೋಷಕರ ಹೊಣೆಗಾರಿಕೆ ಹೆಚ್ಚಿದೆ. ಗುರು-ಹಿರಿಯರನ್ನು ಗೌರವಿಸುವುದು, ಒಳ್ಳೆಯ ಮಾತುಗಳನ್ನಾಡುವುದು, ಮಾನವೀಯ ಮೌಲ್ಯಗಳನ್ನು ಅವರ ಮನಸ್ಸಿನಲ್ಲಿ ಬೆಳೆಸಬೇಕು. ಸಾಮಾನ್ಯ ಜ್ಞಾನದೊಂದಿಗೆ ಮಕ್ಕಳನ್ನು ಬೆಳೆಸಿದಾಗ ಪ್ರಜ್ಞಾವಂತಿಕೆ ಮೂಡುತ್ತದೆ ಎಂದರು.
ಪಠ್ಯ ವಿಷಯಗಳನ್ನಷ್ಟೇ ಕಲಿತರೆ ಪ್ರಯೋಜನವಿಲ್ಲ. ಅಂಕ ಗಳಿಕೆಗೆ ಮಕ್ಕಳನ್ನು ಓದಿಸಬಾರದು. ಮಕ್ಕಳು ಸರ್ವತೋಮುಖವಾಗಿ ಬೆಳವಣಿಗೆ ಕಾಣಬೇಕು. ಕುಟುಂಬದಲ್ಲಿರುವ ಎಲ್ಲರ ಪ್ರೀತಿ-ವಾತ್ಸಲ್ಯದ ಮಧ್ಯೆ ಮಕ್ಕಳು ಬೆಳೆಯಬೇಕು. ಸಂಬಂಧಗಳ ಮೌಲ್ಯಗಳನ್ನು ಅರ್ಥೈಸಿಕೊಟ್ಟಾಗ ಮಕ್ಕಳೂ ಎಲ್ಲ ಸಂಬಂಧಗಳನ್ನು ಉಳಿಸಿಕೊಳ್ಳುವುದಕ್ಕೆ ನೆರವಾಗುತ್ತದೆ ಎಂದರು.ಆಧುನಿಕ ಯುಗದಲ್ಲಿ ವಿದ್ಯಾವಂತ ಮಕ್ಕಳೇ ತಂದೆ-ತಾಯಿಯನ್ನುಪಾಲನೆ ಮಾಡದೆ ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ. ಅನಾಥಾಶ್ರಮಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಎಷ್ಟೋ ಮಕ್ಕಳು ತಂದೆ-ತಾಯಿಯನ್ನು ಇಲ್ಲೇ ಬಿಟ್ಟು ವಿದೇಶದಲ್ಲಿ ನೆಲೆಸಿದ್ದಾರೆ. ಹೆತ್ತವರನ್ನು ಪೋಷಿಸುವ ಆಸಕ್ತಿಯನ್ನೂ ತೋರುತ್ತಿಲ್ಲ. ಇದು ಉತ್ತಮ ಸಮಾಜದ ಬೆಳವಣಿಗೆಯಲ್ಲ ಎಂದರು.
ಮಕ್ಕಳು ವಿದ್ಯಾವಂತರಾಗುವುದರ ಜೊತೆಯಲ್ಲೇ ಸಂಸ್ಕಾರ, ಮಾನವೀಯ ಮೌಲ್ಯಗಳು ಅವರಲ್ಲಿ ಬೆಳವಣಿಗೆ ಕಂಡಾಗ ಎಲ್ಲರನ್ನೂ ಪೋಷಿಸುವ ಗುಣ ಅವರಲ್ಲಿ ಬೆಳವಣಿಗೆ ಕಾಣುತ್ತದೆ. ಪೋಷಕರಾದವರು ಮಕ್ಕಳನ್ನು ಚಿಕ್ಕಂದಿನಿಂದಲೇ ಸುಸಂಸ್ಕೃತರನ್ನಾಗಿ ರೂಪಿಸಬೇಕು. ಒಬ್ಬರಿಗೊಬ್ಬರು ಸಹಾಯ ಮಾಡುವ, ನಮ್ಮ ಸುತ್ತಲಿನ ಪರಿಸರವನ್ನು ಕಾಪಾಡುವ, ಗಿಡ-ಮರಗಳನ್ನು ನೆಟ್ಟು ಪೋಷಿಸುವುದನ್ನು ಕಲಿಸಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ಮೊಬೈಲ್‌ಗಳಿಗೆ ಮಕ್ಕಳು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರ ಬಗ್ಗೆ ಪೋಷಕರು ಹೆಚ್ಚಿನ ನಿಗಾ ವಹಿಸಬೇಕು. ಸಾಧ್ಯವಾದಷ್ಟು ಮಕ್ಕಳು ಮೊಬೈಲ್‌ನಿಂದ ದೂರವಿರುವಂತೆ ನೋಡಿಕೊಳ್ಳುವುದು ಉತ್ತಮ. ಹೆಚ್ಚು ಸಮಯ ಮೊಬೈಲ್ ನೋಡುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಮಕ್ಕಳಿಗೆ ನಾವು ನೀಡುವ ಸ್ವಾತಂತ್ರ್ಯ ಸ್ವೇಚ್ಛಾಚಾರಕ್ಕೆ ಅವಕಾಶವಾಗಬಾರದು ಎಂದು ನುಡಿದರು.
ಕಿಡ್ಸ್ ಪ್ಲಾನೆಟ್ ಸಂಸ್ಥಾಪಕ ಅಧ್ಯಕ್ಷ ಬಸವರಾಜು, ಟ್ರಸ್ಟಿಗಳಾದ ಪ್ರತೀಕ್ ದೇವ್, ಅಭಿಲಾಷ್, ಗೌತಮ್, ಶಿಕ್ಷಕಿಯರಾದ ಕವಿತಾ. ಕಾವ್ಯ, ಸೌಮ್ಯ ಇತರರಿದ್ದರು.