ಸಾರಾಂಶ
ಚಾಮರಾಜನಗರ : ತಾಲೂಕಿನ ಹಿರೇಬೇಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 27 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿ, ಉದ್ಯೋಗಕ್ಕೆ ಸೇರಿದ ದಿನದಿಂದ ನಿವೃತ್ತಿ ಹೊಂದುವ ವರೆಗೂ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ಬಿ.ಕಾಶೀ ಆರಾಧ್ಯ ಅವರಿಗೆ ಗ್ರಾಮಸ್ಥರು ಬೀಳ್ಕೊಡುಗೆ ನೀಡಿದರು.ನಿವೃತ್ತ ಶಿಕ್ಷಕ ಬಿ.ಕಾಶೀ ಆರಾಧ್ಯ ತಮ್ಮ ಶಾಲೆಯ ಎಲ್ಲ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಹಣದಿಂದ ನೆನಪಿಗಾಗಿ ಸಮವಸ್ತ್ರ ವಿತರಿಸಿದರು. ಬಿಸಿಯೂಟ ತಯಾರಿಸುವ 8 ಮಹಿಳಾ ಸಿಬ್ಬಂದಿಗೆ ಸೀರೆ ವಿತರಿಸಿದರು ಹಾಗೂ ಹಿರೇಬೇಗೂರು ಗ್ರಾಮದ ಮಹಿಳೆಯರಿಗೆ ರವಿಕೆ ಕಣ, ಬಳೆ ವಿತರಿಸಿದರು.
ಕಾಶೀ ಆರಾಧ್ಯ ಅವರು ಚಾಮರಾಜನಗರ ತಾಲೂಕಿನ ಕೆಬ್ಬೇಪುರ ಗ್ರಾಮದವರಾಗಿದ್ದು, ಕೆಬ್ಬೇಪುರದಿಂದ ಹಿರೇಬೇಗೂರಿಗೆ 27 ವರ್ಷಗಳಿಂದಲೂ ನಿತ್ಯವೂ 8 ಕಿ.ಮೀ ಕಾಲ್ನಡಿಗೆಯಲ್ಲೇ ಕ್ರಮಿಸುತಿದ್ದರು. ಅವರು ಬಸ್ ಗಾಗಿ ಕಾದಿದ್ದೇ ಇಲ್ಲ. ಅವರ ಬಳಿ ಸ್ಕೂಟರ್, ಸೈಕಲ್ ಕೂಡ ಇರರಿಲ್ಲ. ಇಂತಹ ಆದರ್ಶ ಮಾದರಿ ಶಿಕ್ಷಕರಿಗೆ ಗ್ರಾಮದ ಜನ ತುಂಬು ಪ್ರೀತಿ ವಿಶ್ವಾಸ ಮತ್ತು ಭಾರದ ಮನಸ್ಸಿನಿಂದ ಕಣ್ಣಂಚಲ್ಲಿ ತುಂಬಿದ ಕಂಬನಿಗಳ ನಡುವೆ ಬೀಳ್ಕೊಟ್ಟರು.
ಬೀಳ್ಕೊಡುಗೆ ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷ ಮಾಜಿ ಗುರುಸ್ವಾಮಿ, ಚಾಮರಾಜನಗರದ ಚನ್ನಬಸವ ಸ್ವಾಮಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶಟ್ಟಿ ಮತ್ತು ಹಿರೇಬೇಗೂರಿನ ಗ್ರಾಮಸ್ಥರು, ಮತ್ತು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.27 ವರ್ಷ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕಾಶಿ ಆರಾಧ್ಯ ಅವರಿಗೆ ಚಾಮರಾಜನಗರ ತಾಲೂಕಿನ ಹಿರೇ ಬೇಗೂರು ಗ್ರಾಮಸ್ಧರು ಸನ್ಮಾನಿಸಿದರು.