ಸಾರಾಂಶ
ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಮುಗಿಸಿ ವಾಪಸ್ ಬರುವಾಗ ಅಪಘಾತದಲ್ಲಿ ಬೈಕ್‌ನಿಂದ ಬಿದ್ದು ಸಮೀಕ್ಷೆಗೆ ನಿಯೋಜನೆಯಾಗಿದ್ದ ಶಿಕ್ಷಕಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೋಡನಾಯಕನದಿನ್ನಿ ಕ್ರಾಸ್ ಬಳಿ ಶುಕ್ರವಾರ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಮುಗಿಸಿ ವಾಪಸ್ ಬರುವಾಗ ಅಪಘಾತದಲ್ಲಿ ಬೈಕ್‌ನಿಂದ ಬಿದ್ದು ಸಮೀಕ್ಷೆಗೆ ನಿಯೋಜನೆಯಾಗಿದ್ದ ಶಿಕ್ಷಕಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೋಡನಾಯಕನದಿನ್ನಿ ಕ್ರಾಸ್ ಬಳಿ ಶುಕ್ರವಾರ ಸಂಭವಿಸಿದೆ.ಬಾಗಲಕೋಟೆ ತಾಲೂಕಿನ ರಾಂಪುರ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ದಾನಮ್ಮ ನಂದರಗಿ (45) ಮೃತ ಶಿಕ್ಷಕಿ. ಬಾಗಲಕೋಟೆ ತಾಲೂಕಿನ ಸೀತಿಮನಿ ಗ್ರಾಮಕ್ಕೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಪುತ್ರನ ಜೊತೆ ಬೈಕ್ ಮೇಲೆ ಬಾಗಲಕೋಟೆಯತ್ತ ಬರುವಾಗ ಬೋಡನಾಯಕನದಿನ್ನಿ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಬೈಕ್ ಉರುಳಿ ತಲೆಗೆ ತೀವ್ರ ಪೆಟ್ಟಾಗಿ ಅಸುನೀಗಿದ್ದಾರೆ. ಈ ಕುರಿತು ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಚಿವರ ಸಂತಾಪ: ಶಿಕ್ಷಕಿ ದಾನಮ್ಮ ನಂದರಗಿ ನಿಧನಕ್ಕೆ ಸಂತಾಪ ಸೂಚಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು, ಶಿಕ್ಷಕಿಯ ಸಾವು ದುಃಖ ತಂದಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ ನೀಡಲೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಸಂಗಪ್ಪ ಎಂ ಅವರು ಶಿಕ್ಷಕಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.