ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು: ಹನುಮಂತಗೌಡ

| Published : Jun 26 2024, 01:31 AM IST

ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು: ಹನುಮಂತಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಪೋಷಕರ ನಂತರ ವ್ಯಕ್ತಿತ್ವ ನಿರೂಪಣೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಬೆಳ್ಳೂಡಿ ಶ್ರೀ ಪಟೇಲ್ ಗುರುಬಸಪ್ಪ ಪ್ರೌಢಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಹನುಮಂತಗೌಡ ಹರಿಹರದಲ್ಲಿ ಹೇಳಿದ್ದಾರೆ.

- ಬೆಳ್ಳೂಡಿಯಲ್ಲಿ ಶ್ರೀ ಪಟೇಲ್ ಗುರುಬಸಪ್ಪ ಪ್ರೌಢಶಾಲೆಯಲ್ಲಿ ಗುರುವಂದನೆ-ಸ್ನೇಹ ಸಮ್ಮಿಲನ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಹರಿಹರ

ಪೋಷಕರ ನಂತರ ವ್ಯಕ್ತಿತ್ವ ನಿರೂಪಣೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಬೆಳ್ಳೂಡಿ ಶ್ರೀ ಪಟೇಲ್ ಗುರುಬಸಪ್ಪ ಪ್ರೌಢಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಹನುಮಂತಗೌಡ ಹೇಳಿದರು.

ತಾಲೂಕಿನ ಬೆಳ್ಳೂಡಿಯ ಶ್ರೀ ಪಟೇಲ್ ಗುರುಬಸಪ್ಪ ಪ್ರೌಢಶಾಲೆಯಲ್ಲಿ ಭಾನುವಾರ ೧೯೮೫-೮೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಂದೆ, ತಾಯಿ ನೀಡುವ ಸಂಸ್ಕಾರ ಮಕ್ಕಳಲ್ಲಿ ಅಗಾಧ ಪರಿಣಾಮ ಬೀರುತ್ತದೆ. ಅನಂತರದ ಹಂತದಲ್ಲಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಶಿಕ್ಷಕರಿಂದ ದೊರಕುವ ಶಿಕ್ಷಣ, ಬದುಕಿನ ಪಾಠವು ವ್ಯಕ್ತಿತ್ವ ನಿರ್ಮಿಸುವಲ್ಲಿ ಪರಿಣಾಮ ಬೀರುತ್ತದೆ ಎಂದರು.

ನಿವೃತ್ತ ಹಿಂದಿ ಶಿಕ್ಷಕ ಬಿ.ಜಿ.ಚಂದ್ರಪ್ಪ ಮಾತನಾಡಿ, ಶಿಕ್ಷಣ ಪಡೆದ ಶಾಲೆ ಮತ್ತು ಬೋಧಿಸಿದ ಶಿಕ್ಷಕರು ವಿದ್ಯಾರ್ಥಿಗಳ ಜೀವನ ಪರ್ಯಂತ ಸ್ಮರಣೆಯಲ್ಲಿ ಇರುತ್ತಾರೆ. ಮೊಬೈಲ್ ಫೋನ್, ಇಂಟರ್‌ನೆಟ್ ಇಲ್ಲದ ಆ ಕಾಲದಲ್ಲಿ ಶಿಕ್ಷಕರು ಬೋಧಿಸುತ್ತಿದ್ದ ಪಾಠವೇ ಪ್ರಮುಖ ಮಾಹಿತಿಯ ಕಣಜವಾಗಿತ್ತು ಎಂದು ತಿಳಿಸಿದರು.

ನಿವೃತ್ತ ಕನ್ನಡ ಶಿಕ್ಷಕಿ ಕೆ.ಸಿ.ಸರೋಜಮ್ಮ ಮಾತನಾಡಿ, ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸಂಬಂಧಕ್ಕೆ ಜಗತ್ತಿನಾದ್ಯಂತ ವಿಶೇಷ ಮಹತ್ವವಿದೆ. ಪಠ್ಯದಲ್ಲಿ ಇರುವುದನ್ನು ತರಗತಿಯಲ್ಲಿ ಕೇವಲ ಬೋಧಿಸುವ ಶಿಕ್ಷಕರಿಗಿಂತ ವಿದ್ಯಾರ್ಥಿಗಳಿಗೆ ಪಠ್ಯದ ಬಗ್ಗೆ ಆಸಕ್ತಿ, ಸ್ಫೂರ್ತಿ ತುಂಬುವ ಶಿಕ್ಷಕರು ಸದಾ ನೆನಪಿನಲ್ಲಿ ಇರುತ್ತಾರೆ ಎಂದರು.

ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಹೂಮಳೆ ಸುರಿಸಿ ಸ್ವಾಗತಿಸಿ, ಸತ್ಕರಿಸಲಾಯಿತು. ಹಲವು ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಯಲ್ಲಿದ್ದ ಅವಧಿಯಲ್ಲಿನ ಘಟನಾವಳಿಗಳನ್ನು ಮೆಲುಕು ಹಾಕಿದರು. ನಿಧನರಾದ ನಿವೃತ್ತ ಶಿಕ್ಷಕರಾದ ಮಹದೇವಪ್ಪ, ತಿಮ್ಮಪ್ಪ ಹಾಗೂ ಸಹಪಾಠಿಗಳ ಆತ್ಮಕ್ಕೆ ಶಾಂತಿ ಕೋರಲು ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

ನಿವೃತ್ತ ಶಿಕ್ಷಕರಾದ ಮಲ್ಲಪ್ಪ, ಯು.ಎಂ. ತ್ಯಾವರೆ, ಹನುಮಂತಪ್ಪ, ಡಿಸೋಜಾ, ಹಳೆ ವಿದ್ಯಾರ್ಥಿಗಳಾದ ಅಮೃತ್ ಆರ್ಗ್ಯಾನಿಕ್ ಫರ್ಟಿಲೈಜರ್ ಕಂಪನಿ ಅಧಿಕಾರಿ ಜಯಣ್ಣ ರಾಯಾಪುರ, ಹೊಳೆ ಸಿರಿಗೆರೆ ಉಪನ್ಯಾಸಕ ಎ.ಎಸ್.ಜಗದೀಶ್, ಎಸ್.ಕೆ. ರಾಜು, ಮಹದೇವಪ್ಪ, ಗುರುಮೂರ್ತಿ, ಶಿರಾ ತಾಲೂಕಿನ ಗುಳಿಗೆನಹಳ್ಳಿ ಪ್ರೌಢಶಾಲಾ ಉಪ ಪ್ರಾಚಾರ್ಯೆ ಗಿರಿಜಾಂಬ ಬಿ.ಜೆ., ಎಲೆಕ್ಟ್ರಿಕಲ್ ಶಾಪ್ ತಿಪ್ಪೇಸ್ವಾಮಿ, ಚನ್ನಪ್ಪ ಚನ್ನೇಗೌಡ, ನೀಲಪ್ಪ, ನಾಗೇಂದ್ರಪ್ಪ, ಶ್ರೀಧರ, ಮಂಜನಾಯ್ಕ್, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ, ಗೀತಮ್ಮ, ನೀಲಪ್ಪ ಇದ್ದರು.

- - - -೨೪ಎಚ್‌ಆರ್‌ಆರ್೪:

ಹರಿಹರ ತಾಲೂಕಿನ ಬೆಳ್ಳೂಡಿ ಶ್ರೀ ಪಟೇಲ್ ಗುರುಬಸಪ್ಪ ಪ್ರೌಢಶಾಲೆಯಲ್ಲಿ ಭಾನುವಾರ ೧೯೮೫-೮೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸತ್ಕರಿಸಲಾಯಿತು.