ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಮಹಿಳಾ ಸಮುದಾಯಕ್ಕೆ ಸ್ಫೂರ್ತಿ

| Published : Jan 06 2025, 01:02 AM IST

ಸಾರಾಂಶ

ಭಾರತದ ಮೊದಲು ಮಹಿಳಾ ಶಿಕ್ಷಕಿಯಾಗಿರುವ ಸಾವಿತ್ರಿಬಾಯಿ ಫುಲೆ ಮಹಿಳಾ ಸಮುದಾಯಕ್ಕೆ ಸ್ಫೂರ್ತಿದಾಯಕ ಎಂದು ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗ ಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಭಾರತದ ಮೊದಲು ಮಹಿಳಾ ಶಿಕ್ಷಕಿಯಾಗಿರುವ ಸಾವಿತ್ರಿಬಾಯಿ ಫುಲೆ ಮಹಿಳಾ ಸಮುದಾಯಕ್ಕೆ ಸ್ಫೂರ್ತಿದಾಯಕ ಎಂದು ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗ ಶೆಟ್ಟಿ ಹೇಳಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಾಮರಾಜನಗರ ತಾಲೂಕು ಘಟಕ ವತಿಯಿಂದ ನಡೆದ ಅಕ್ಷರ ಮಾತೆ ಸಾವಿತ್ರಿಬಾಯಿಫುಲೆ ಜಯಂತಿ ಸಂಘದ 2025 ನೇ ಸಾಲಿನ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ, ನಿವೃತ್ತಿ ಶಿಕ್ಷಕರಿಗೆ ಸನ್ಮಾನ ಹಾಗೂ ಶೈಕ್ಷಣಿಕ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಹಿಳೆ ನಾಲ್ಕು ಗೋಡೆಗಳ ಮಧ್ಯದಲ್ಲಿ ಕಾಲ ಕಳೆಯುವ ಪರಿಸ್ಥಿತಿಯಲ್ಲಿ ಸಾಕಷ್ಟು ತೊಂದರೆಗಳ ನಡುವೆಯಲ್ಲೂ ದೇಶದ ಮೊಟ್ಟಮೊದಲ ಶಿಕ್ಷಕಿಯಾಗಿ ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಣಕ್ಕೆ ನಾಂದಿ ಹಾಡಿದ್ದಾರೆ. ಅಲ್ಲದೇ ಶೋಷಿತ ಸಮುದಾಯದ ಮಹಿಳೆಯರಿಗೆ ಅಕ್ಷರ ಕಲಿಸಿ, ಶಾಲೆಗಳನ್ನು ತೆರೆದರು ಅಕ್ಷರದವ್ವ ಆಗಿ ಮಹಿಳೆಯರನ್ನು ಮೇಲೆತ್ತುವಲ್ಲಿ ಶ್ರಮಿಸಿದ್ದಾರೆ. ಜತೆಗೆ ಶಿಕ್ಷಕರಿಗೆ ಆದರ್ಶವಾಗಿದ್ದಾರೆ ಎಂದರು.ಕಾಡಾಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಆಧುನಿಕ ಇತಿಹಾಸದಲ್ಲಿ ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಮಹಿಳಾ ಶಿಕ್ಷಕಿಯಾಗಿ ಜನಪ್ರಿಯತೆಯನ್ನು ಪಡೆದವರು. ಇದರ ಜೊತೆಗೆ ಅವರೊಬ್ಬ ಅಪ್ಪಟ ಸ್ತ್ರೀವಾದಿ, ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಶ್ರಮಿಸಿದ ಸಾಮಾಜಿಕ ಸುಧಾರಕಿಯಾಗಿದ್ದರು. ಸಾವಿತ್ರಿಬಾಯಿ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ಮಹಾರಾಷ್ಟ್ರದ ಪುಣೆಯಲ್ಲಿ ಬಾಲಕಿಯರ ಮೊದಲ ಶಾಲೆಯನ್ನು ಪ್ರಾರಂಭಿಸಿಸುವ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಿದರು ಎಂದು ಹೇಳಿದರು.ಚೂಡಾಧ್ಯಕ್ಷ ಮಹಮ್ಮದ್‌ ಅಸ್ಕರ್ ಮಾತನಾಡಿದರು. ಶಿವಮೊಗ್ಗ ಡಯಟ್ ಹಿರಿಯ ಉಪನ್ಯಾಸಕ ಡಾ. ಜಿ.ವಿ.ಹರಿಪ್ರಸಾದ್ ''ನಲಿಕಲಿ ಮರುಸಿಂಚನ ಮತ್ತು ಪ್ರಸ್ತುತ ಅನುಷ್ಠಾನಗೊಳ್ಳುತ್ತಿರುವ ಇಲಾಖೆಯ ಕಾರ್ಯಕ್ರಮಗಳ ಕುರಿತು ಮಾತನಾಡಿದರು. ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಡಿ.ಮಹದೇವಯ್ಯ ಪ್ರಾಸ್ತಾವಿಕ ಭಾಷಣ ಮಾಡಿದರು.

ಉತ್ತಮ ಶಿಕ್ಷಕರಿಗೆ ಸಾವಿತ್ರಿಬಾಯಿಫುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಡಯಟ್ ಉಪನಿರ್ದೇಶಕ ಎಂ.ಕಾಶಿನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಹನುಮಶೆಟ್ಟಿ, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ರಾಜೀವ್, ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಕಾರ್ಯದರ್ಶಿ ಎನ್.ಸುಧಾ, ಗೌರವಾಧ್ಯಕ್ಷ ರಾಜು, ಖಜಾಂಚಿ ಕೃಷ್ಣಮೂರ್ತಿ, ಪ್ರೌಢ ಶಾಲಾ ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್‌ ರಾಜ್, ನಿರ್ದೇಶಕ ಮಹದೇವಸ್ವಾಮಿ ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.