ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ವಿದ್ಯಾರ್ಥಿಗಳಲ್ಲಿರುವ ಅಜ್ಞಾನವನ್ನು ತಮ್ಮಲ್ಲಿರುವ ಜ್ಞಾನಸುಧೆ ಹರಿಸಿ, ಮಕ್ಕಳ ಉಜ್ವಲ ಬದುಕು ರೂಪಿಸುವ ಜವಾಬ್ದಾರಿ ಶಿಕ್ಷಕರದ್ದಾಗಿದ್ದು, ಗುಣಮಟ್ಟ ಶಿಕ್ಷಣದಿಂದ ವಿದ್ಯಾರ್ಥಿಗಳ ಬದುಕನ್ನು ಬೆಳಗುವ ಜ್ಯೋತಿಗಳಾಗಿ ಪ್ರಜ್ವಲಿಸಬೇಕೆಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.ಗುರುವಾರ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಡಾ.ಸರ್ವಪಲ್ಲಿ ರಾಧಕೃಷ್ಣನ್‌ರವರ ಜನ್ಮದಿನಾಚರಣೆ ನಿಮಿತ್ತ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷೇತ್ರದ ಶಾಸಕನಾಗಿ ಮೂರನೇ ಬಾರಿಗೆ ಆಯ್ಕೆಯಾದರೂ ಇಲ್ಲಿ ನಡೆದ ೧೨ನೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಾನು ಭಾಗಹಿಸಿದ್ದೇನೆ. ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಪರವಾಗಿ ಕಾರ್ಯಕ್ರಮ ಉದ್ಘಾಟಿಸಿದ್ದೇನೆ. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರನ್ನು ಸನ್ಮಾನಿಸುವುದಲ್ಲದೆ, ನಿವೃತ್ತ ಶಿಕ್ಷಕರನ್ನು ಗೌರವಿಸುವ ಸೌಭಾಗ್ಯ ನನಗೆ ದೊರಕಿದೆ ಎಂದರು.
ಯಾವುದೇ ಕ್ಷೇತ್ರದಲ್ಲಿ ನಾವು ಅಭಿವೃದ್ಧಿ ದಾಖಲಿಸಬೇಕಾದರೆ ಅಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುವುದು ತಾಂತ್ರಿಕ ಜ್ಞಾನ. ಇಂತಹ ಜ್ಞಾನವನ್ನು ಕೇವಲ ಶಿಕ್ಷಕರಿಂದ ಮಾತ್ರ ನೀಡಲು ಸಾಧ್ಯ. ಸಮಾಜದ ಸರ್ವತೋಮುಖ ಏಳಿಗೆ, ಅಭಿವೃದ್ಧಿ, ಸಮಾನತೆ ಇವೆಲ್ಲವನ್ನೂ ನಾವು ಒಂದೇ ವೇದಿಕೆಯಲ್ಲಿ ಕಾಣಬೇಕಾದರೆ ಅದಕ್ಕೆ ಶಿಕ್ಷಕರು ಕಾರಣ. ಶಿಕ್ಷಕರ ಕಾರ್ಯ ಅತ್ಯಂತ ಪುಣ್ಯದ ಕಾರ್ಯವಾಗಿದ್ದು, ಎಲ್ಲಾ ಶಿಕ್ಷಕರು ಸಮಾಜದ ಹಿತದೃಷ್ಠಿಯಿಂದ ಕಾರ್ಯನಿರ್ವಹಿಸಬೇಕು. ನಿಮ್ಮ ಕೊಡುಗೆಯನ್ನು ಸಮಾಜ ಸದಾ ಸ್ಮರಿಸುತ್ತದೆ ಎಂದರು.ಪ್ರಾಸ್ತಾವಿಕ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಚಳ್ಳಕೆರೆ ತಾಲೂಕು ಶೈಕ್ಷಣಿಕ ದೃಷ್ಠಿಯಿಂದ ಹಲವಾರು ಬದಲಾವಣೆ ಕಾಣುತ್ತಿದೆ. ವಿಶೇಷವಾಗಿ ತಾಲೂಕಿನಾದ್ಯಂತ ಸರ್ಕಾರಿ ಶಾಲೆಗಳ ತುರ್ತು ರಿಪೇರಿಗಾಗಿ ಶಾಸಕರು ತಮ್ಮ ಅನುದಾನದಲ್ಲಿ ಹಣ ಮಂಜೂರು ಮಾಡಿದ್ದಾರೆ. ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹಿನ್ನಡೆಯಾಗಿದ್ದು, ಈ ಬಾರಿ ಇನ್ನೂ ಹೆಚ್ಚಿನ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶಿಕ್ಷಕರ ಸಮೂಹ ಇಲಾಖೆಯೊಂದಿಗೆ ಕೈಜೋಡಿಸಿ ಎಂದರು.
ಉಪನ್ಯಾಸ ನೀಡಿದ ಶಿಕ್ಷಕ ಶ್ರೀಕಾಂತ್ ಹುಲುಮನಿ, ಶಿಕ್ಷಕ ವೃತ್ತಿಯನ್ನು ಮಾಡುವವರು ಕೇವಲ ಪದವಿ ಪಡೆದು ಬೋಧನೆ ಮಾಡಿದರೆ ಸಾಲದು, ವಾಸ್ತವಿಕವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟದ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳು ಕ್ರಮಬದ್ಧವಾಗಿ ಪಾಠ ಕೇಳುವಂತಹ ಸ್ಥಿತಿಯನ್ನು ಶಿಕ್ಷಕರು ನಿರ್ಮಾಣ ಮಾಡಬೇಕು. ಶಿಕ್ಷಕ ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಯಾವ ವಿದ್ಯಾರ್ಥಿಯೂ ಸಮಾಜಕ್ಕೆ ಕಂಟಕನಾಗಲು ಸಾಧ್ಯವಿಲ್ಲ ಎಂದರು.ಕಾರ್ಯಕ್ರಮ ಉದ್ದೇಶಿಸಿ ನಗರಸಭೆ ಉಪಾಧ್ಯಕ್ಷೆ ಓ.ಸುಜಾತಪ್ರಹ್ಲಾದ್, ಸದಸ್ಯೆ ಕವಿತಾಬೋರಯ್ಯ ಮಾತನಾಡಿದರು. ವೇದಿಕೆಯಲ್ಲಿ ಇಒ ಎಚ್.ಶಶಿಧರ, ಸಹಾಯಕ ನಿರ್ದೇಶಕ ಜಿ.ಟಿ.ಮಂಜುನಾಥಸ್ವಾಮಿ, ಸುನೀಲ್‌ನಾಯ್ಕ, ಪುರುಷೋತ್ತಮ, ಬಿ.ತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷೆ ಜೈತುಂಬಿ, ಸದಸ್ಯರಾದ ಎಂ.ಜೆ.ರಾಘವೇಂದ್ರ, ಕೆ.ವೀರಭದ್ರಪ್ಪ, ಬಿ.ಟಿ.ರಮೇಶ್‌ಗೌಡ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಎಲ್.ಲಿಂಗೇಗೌಡ, ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಡಿ.ಮಹಲಿಂಗಪ್ಪ, ಬಿ.ರಾಜಕುಮಾರ್, ಸಿ.ಟಿ.ವೀರೇಶ್, ಡಿ.ಟಿ.ಶ್ರೀನಿವಾಸನ್, ಡಿ.ಈರಣ್ಣ, ಆರ್.ಸಿದ್ದಲಿಂಗಪ್ಪ, ಡಿ.ಎಸ್.ಪಾಲಯ್ಯ, ಸುರೇಶ್, ಶ್ರೀರಾಮನಾಯಕ, ಬಿ.ಸುರೇಶ್, ಡಿ.ಮಹಲಿಂಗಪ್ಪ, ಆರ್.ಮಾರುತೇಶ್ ಮುಂತಾದವರು ಉಪಸ್ಥಿತರಿದ್ದರು.