ಶಿಕ್ಷಕರ ಕ್ಷೇತ್ರ: ನಾಗಮಂಗಲದಲ್ಲಿ ಶೇ.96.84 ರಷ್ಟು ಮತದಾನ

| Published : Jun 04 2024, 12:30 AM IST

ಶಿಕ್ಷಕರ ಕ್ಷೇತ್ರ: ನಾಗಮಂಗಲದಲ್ಲಿ ಶೇ.96.84 ರಷ್ಟು ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ನಾಗಮಂಗಲ ಪಟ್ಟಣದ ಮಿನಿ ವಿಧಾನಸೌಧದ ಪಕ್ಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಜೆಪಿ ಮೈತ್ರಿ ಪಕ್ಷಗಳ ಮುಖಂಡರು ಪ್ರತ್ಯೇಕವಾಗಿ ಶಾಮಿಯಾನ ಹಾಕಿಕೊಂಡು ಮತದಾನ ಮಾಡಲು ಆಗಮಿಸುತ್ತಿದ್ದ ಶಿಕ್ಷಕ ಮತದಾರರನ್ನು ಸೆಳೆಯುವಲ್ಲಿ ಹಾಗೂ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ದುಂಬಾಲು ಬೀಳುತ್ತಿದ್ದ ದೃಶ್ಯ ಕಂಡುಬಂತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ತಾಲೂಕಿನಲ್ಲಿ ಶೇ.96.84 ರಷ್ಟು ಮತದಾನ ನಡೆದಿದೆ.

ಪಟ್ಟಣದ ತಾಲೂಕು ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ತೆರೆದಿದ್ದ ಮತಗಟ್ಟೆ ಸಂಖ್ಯೆ 17ರಲ್ಲಿ ಒಟ್ಟು 443 ಮತದಾರರ ಪೈಕಿ 429 ಮಂದಿ ತಮ್ಮ ಹಕ್ಕು ಚಲಾಯಿಸಿದರು.

ತಾಲೂಕಿನಲ್ಲಿ 296 ಪುರುಷ ಹಾಗೂ 147 ಮಂದಿ ಮಹಿಳಾ ಮತದಾರರಿದ್ದು, ಈ ಪೈಕಿ 283 ಪುರುಷ ಮತ್ತು 146 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ಪಕ್ಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಜೆಪಿ ಮೈತ್ರಿ ಪಕ್ಷಗಳ ಮುಖಂಡರು ಪ್ರತ್ಯೇಕವಾಗಿ ಶಾಮಿಯಾನ ಹಾಕಿಕೊಂಡು ಮತದಾನ ಮಾಡಲು ಆಗಮಿಸುತ್ತಿದ್ದ ಶಿಕ್ಷಕ ಮತದಾರರನ್ನು ಸೆಳೆಯುವಲ್ಲಿ ಹಾಗೂ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ದುಂಬಾಲು ಬೀಳುತ್ತಿದ್ದ ದೃಶ್ಯ ಕಂಡುಬಂತು. ಒಂದೊಂದು ಶಾಲೆ ಶಿಕ್ಷಕರು, ವಿವಿಧ ಕಾಲೇಜುಗಳ ಉಪನ್ಯಾಸಕರು ಒಗ್ಗಟ್ಟಾಗಿ ಆಗಮಿಸಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು.

ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಪರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಹಾಲ್ತಿ ಗಿರೀಶ್, ಮಾಜಿ ಅಧ್ಯಕ್ಷ ಅಲ್ಪಹಳ್ಳಿ ಡಿ.ಕೃಷ್ಣೇಗೌಡ, ಮುಖಂಡರಾದ ಆರ್.ಕೃಷ್ಣೇಗೌಡ, ರವಿಕಾಂತೇಗೌಡ ಸೇರಿದಂತೆ ಹಲವರು ಮತಯಾಚಿಸಿದರು.

ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಪರವಾಗಿ ತಾಲೂಕು ಜೆಡಿಎಸ್ ಅಧ್ಯಕ್ಷ ಡಿ.ಟಿ.ಶ್ರೀನಿವಾಸಯ್ಯ, ಬಿಜೆಪಿ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ಕಂಚಿನಕೋಟೆ ಮೂರ್ತಿ ಸೇರಿದಂತೆ ಹಲವರು ಮತಯಾಚಿಸಿದರು.

ಮತದಾನದ ವೇಳೆ ಯಾವುದೇ ಸಣ್ಣ ಪುಟ್ಟ ಸಮಸ್ಯೆಯಾಗದಂತೆ ಮತಕೇಂದ್ರದ ಮುಂಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಮದ್ದೂರು ತಾಲೂಕಿನಲ್ಲಿ ಶೇ.96.03 ರಷ್ಟು ಮತದಾನ

ಮದ್ದೂರು:ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ.96.03ರಷ್ಟು ಮತದಾನವಾಗಿದೆ.

ಪಟ್ಟಣದ ಮಿನಿವಿಧಾನಸೌಧ ದಲ್ಲಿ ಬೆಳಗ್ಗೆ 8 ಗಂಟೆ ಆರಂಭವಾದ ಮತದಾನ ಸಂಜೆ 4ರವರೆಗೆ ನಡೆಯಿತು. ಶಿಕ್ಷಕ ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಪ್ರಶಸ್ತ ಮತ ಚಲಾಯಿಸಿದರು. ಮತಗಟ್ಟೆ ಹೊರಭಾಗದಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದು ಕಂಡುಬಂದಿತು. ಮತದಾನ ಪೂರ್ಣಗೊಂಡ ನಂತರ 967 ಶಿಕ್ಷಕ ಮತದಾರರ ಪೈಕಿ 902 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಇವರಲ್ಲಿ 554 ಮಂದಿ ಪುರುಷರು 413 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 9ಂ2 ಮತದಾನವಾಗಿದ್ದು. ಶೇಕಡ 96 .03 ರಷ್ಟು ಮತದಾನವಾಗಿದೆ.