ಸಾರಾಂಶ
ಕಲಬುರಗಿಯಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸ್ಲೀಪರ್ ಬಸ್, ಶಹಾಪುರ ಮಾರ್ಗವಾಗಿ ಹತ್ತಿಗುಡೂರು ಗ್ರಾಮದ ಬ್ರಿಡ್ಜ್ ಬಳಿ ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ
ಕನ್ನಡಪ್ರಭ ವಾರ್ತೆ ಶಹಾಪುರ
ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸ್ಲೀಪರ್ ಬಸ್ಸೊಂದು ಪಲ್ಟಿಯಾಗಿ ಪ್ರಯಾಣಿಕನೋರ್ವ ಮೃತಪಟ್ಟ ದುರ್ಘಟನೆ ತಾಲೂಕಿನ ಹತ್ತಿಗುಡೂರು ಗ್ರಾಮದ ಬ್ರಿಡ್ಜ್ ಬಳಿ ಭಾನುವಾರ ತಡರಾತ್ರಿ ನಡೆದಿದೆ.ಮೌನೇಶ್ ಶಿವಪ್ಪ (35) ಮೃತ ಪ್ರಯಾಣಿಕ. ಕಲಬುರಗಿಯಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸ್ಲೀಪರ್ ಬಸ್, ಶಹಾಪುರ ಮಾರ್ಗವಾಗಿ ಹತ್ತಿಗುಡೂರು ಗ್ರಾಮದ ಬ್ರಿಡ್ಜ್ ಬಳಿ ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಬಸ್‍ನಲ್ಲಿದ್ದ 39 ಪ್ರಯಾಣಿಕರ ಪೈಕಿ ಕಲಬುರಗಿ ಜಿಲ್ಲೆಯ ಹಳೆ ಸುಲ್ತಾನಪುರದ ಮೌನೇಶ್ (35) ಎಂಬ ಪ್ರಯಾಣಿಕ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಸುಮಾರು 13 ಜನರಿಗೆ ಗಾಯಗಳಾಗಿವೆ. 3 ಜನ ಗಂಭೀರ ಗಾಯಾಳುಗಳನ್ನು ಕಲ್ಬುರ್ಗಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಹಿಸಿಕೊಡಲಾಗಿದೆ. ಇನ್ನುಳಿದ ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.
ಬಸ್ ಪಲ್ಟಿಯಾದಾಗ ಸ್ಥಳದಲ್ಲಿ ಮೃತಪಟ್ಟ ವ್ಯಕ್ತಿಯ ಶವ ಬಸ್ಸಿನ ಒಳಗಡೆ ಸಿಲುಕಿಕೊಂಡಿತ್ತು. ತಡರಾತ್ರಿ 1 ಗಂಟೆವರೆಗೆ ಶವವನ್ನು ಹೊರಗೆ ತೆಗೆಯಲು ಅಗ್ನಿಶಾಮಕ ದಳ ಮತ್ತು ಪೊಲೀಸರು ಹರಸಾಹಸ ಪಟ್ಟಿದ್ದಾರೆ ಎಂದು ಪ್ರತ್ಯಕ್ಷ ದರ್ಶಿ ಗಳು ತಿಳಿಸಿದ್ದಾರೆ. ಶಹಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.