ಸಾರಾಂಶ
ರಾಣಿಬೆನ್ನೂರು: ಸದಾ ಒತ್ತಡದಲ್ಲಿ ಕೆಲಸ ಮಾಡುವ ಹೆಸ್ಕಾಂ ನೌಕರರು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಹೆಸ್ಕಾಂ ವಿಭಾಗಿಯ ಎಂಜಿನಿಯರ್ ಎನ್.ಸಿ. ಬೆಳಕೇರಿ ಹೇಳಿದರು. ನಗರದ ಹೆಸ್ಕಾಂ ವಿಭಾಗಿಯ ಕಚೇರಿಯ ಆವರಣದಲ್ಲಿ ಸೋಮವಾರ ಜಿಲ್ಲಾ ರಕ್ತ ಕೇಂದ್ರ, ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೌಕರರು ಶಿಬಿರದಲ್ಲಿ ವೈದ್ಯರಿಂದ ತಪಾಸಣೆಗೆ ಒಳಗಾಗಿ ಅವರು ನೀಡುವ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದರು. ಜಿಲ್ಲಾ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಮಾತನಾಡಿ, ರಕ್ತದಾನದಿಂದ ನಾಲ್ಕು ಜನರ ಜೀವ ಉಳಿಸಲು ಸಾಧ್ಯವಿದೆ. ಆರೋಗ್ಯವಂತ ಮನುಷ್ಯ ಪ್ರತಿ ಮೂರು ತಿಂಗಳಿಗೊಮ್ಮ ರಕ್ತದಾನ ಮಾಡಬಹುದು. ಇದರಿಂದ ದಾನಿಯ ದೇಹದಲ್ಲಿ ನವ ಚೈತನ್ಯ ಉಂಟಾಗುತ್ತದೆ. ಅಪಘಾತ, ಹೆರಿಗೆ ಮುಂತಾದ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ರಕ್ತದ ಬೇಡಿಕೆಗಿಂತ ಪೂರೈಕೆ ಪ್ರಮಾಣ ಕಡಿಮೆಯಿದೆ. ಅದಕ್ಕಾಗಿ 18-60 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಲು ಮುಂದೇ ಬರಬೇಕು ಎಂದರು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಪ್ರಸಾದ ಆರ್., ಗೋಪಾಲ ಲಮಾಣಿ, ಕೇಂದ್ರ ಸಮಿತಿ ಸದಸ್ಯ ಎಚ್.ಎಸ್. ಬಸವರಾಜಯ್ಯ, ಸ್ಥಳೀಯ ಸಮಿತಿ ಅಧ್ಯಕ್ಷ ಎಸ್.ಬಿ. ಹೊಳಿಯಣ್ಣನವರ, ವಿನಾಯಕ ಸಂಗೋಳ್ಳಿ, ದೇವರಾಜ, ನೀರಲಗಿ, ಡಾ.ಆಂಜನೇಯ, ಸಂತೋಷ ನೆಲ್ಲಿಕೊಪ್ಪ, ಸಿದ್ದು ಎಚ್., ಸುಮಾ ಲಮಾಣಿ ಮತ್ತಿತರರಿದ್ದರು.